Advertisement

ಭಾರತವನ್ನು ತವರಲ್ಲಿ ಸೋಲಿಸಲೊಂದು ವಿಶ್ವ ಟೆಸ್ಟ್‌ ತಂಡ!

11:23 PM Jan 26, 2021 | Team Udayavani |

ಭಾರತ 2012-13ರ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿಯನ್ನು ಸೋತದ್ದೇ ಇಲ್ಲ. ಅಂದು ಜಯಿಸಿದ ತಂಡ ಇಂಗ್ಲೆಂಡ್‌. ಅನಂತರ ಸತತ 12 ಸರಣಿಗಳಲ್ಲಿ ಭಾರತ ಪಾರಮ್ಯ ಸಾಧಿಸಿದೆ. ಇದೀಗ ಮತ್ತೆ ಇಂಗ್ಲೆಂಡ್‌ ಆಗಮಿಸಿದೆ. ರೂಟ್‌ ಬಳಗ ಇತಿಹಾಸವನ್ನು ಪುನರಾವರ್ತಿಸೀತೇ? ಇಲ್ಲವಾದರೆ ಭಾರತವನ್ನು ತವರಲ್ಲೇ ಸೋಲಿಸಲು ಯಾರಿಂದ ಸಾಧ್ಯ?

Advertisement

ನಿಮಗೇ ಗೊತ್ತು, ಟೆಸ್ಟ್‌ ಸರಣಿಯಲ್ಲಿ ಭಾರತವನ್ನು ಭಾರತದಲ್ಲೇ ಸೋಲಿಸುವುದು ಪ್ರತಿಯೊಂದು ಪ್ರವಾಸಿ ತಂಡಕ್ಕೂ ಒಂದು ಸವಾಲು. ಕಳೆದ 9 ವರ್ಷಗಳಿಂದಲೂ ಭಾರತ ತನ್ನ ನೆಲದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡು ಬಂದಿರುವುದೊಂದು ಹೆಗ್ಗಳಿಕೆ.

ಕೇವಲ ಸಾಮಾನ್ಯ ತಂಡಗಳ ಎದುರಷ್ಟೇ ಟೀಮ್‌ ಇಂಡಿಯಾ ತನ್ನ ಪರಾಕ್ರಮ ತೋರಿಲ್ಲ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನ‌ಂಥ ಬಲಿಷ್ಠ ತಂಡಗಳಿಗೂ ನೀರು ಕುಡಿಸಿದೆ.

ಭಾರತ ತಂಡ ಕೊನೆಯ ಸಲ ತವರಿನ ಟೆಸ್ಟ್‌ ಸರಣಿಯನ್ನು ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್‌ ವಿರುದ್ಧ. ಅನಂತರ ಸತತ 12 ಸರಣಿಗಳಲ್ಲಿ ಪಾರಮ್ಯ ಸಾಧಿಸಿದೆ. ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌, ದ.ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ತಲಾ 2; ಕಿವೀಸ್‌, ಇಂಗ್ಲೆಂಡ್‌, ಶ್ರೀಲಂಕಾ ಮತ್ತು ಅಫ್ಘಾನಿ ಸ್ಥಾನ ವಿರುದ್ಧ ತಲಾ ಒಂದು ಸರಣಿ ಗೆದ್ದು ತವರಿನ ಅಜೇಯ ಅಭಿಯಾನ ಮುಂದುವರಿಸಿದೆ. ಈ 12 ಸರಣಿಗಳಲ್ಲಿ ಭಾರತ ಆರರಲ್ಲಿ ಎದುರಾಳಿಗೆ ವೈಟ್‌ವಾಶ್‌ ಮಾಡಿದೆ!

ಜೋ ರೂಟ್‌ ನಾಯಕ : ಭಾರತದ ಎದುರಾಳಿಯಾಗಿ ರಚಿಸಲಾದ ಈ ಕಾಲ್ಪನಿಕ ತಂಡದ ಆರಂಭಿಕರಾಗಿ ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲ್ಯಾಂಡಿನ ಟಾಮ್‌ ಲ್ಯಾಥಂ ಸ್ಥಾನ ಪಡೆದಿದ್ದಾರೆ. ವನ್‌ಡೌನ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಕ್ರೀಸ್‌ ಇಳಿಯಲಿದ್ದಾರೆ. ಕಾಂಗರೂ ನಾಡಿನ ರನ್‌ ಯಂತ್ರ ಸ್ಟೀವನ್‌ ಸ್ಮಿತ್‌ ಅವರಿಗೆ 4ನೇ ಕ್ರಮಾಂಕ. ಅನಂತರ ಬರುವ ಇಂಗ್ಲೆಂಡಿನ ಜೋ ರೂಟ್‌ಗೆ ನಾಯಕತ್ವ ನೀಡಲಾಗಿದೆ.

Advertisement

ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಅವರಿಗೆ ಕೀಪಿಂಗ್‌ ಹೊಣೆಗಾರಿಕೆ ಲಭಿಸಿದೆ. ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಬೆನ್‌ ಸ್ಟೋಕ್ಸ್‌ ಇದ್ದಾರೆ. ಪ್ರಧಾನ ವೇಗಿಗಳ ಸ್ಥಾನದಲ್ಲಿ ಆಸೀಸ್‌ನ ಪ್ಯಾಟ್‌ ಕಮಿನ್ಸ್‌, ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಕಾಣಿಸಿಕೊಂಡಿದ್ದಾರೆ. ನಥನ್‌ ಲಿಯಾನ್‌ ಮತ್ತು ಪಾಕಿಸ್ಥಾನದ ಯಾಸಿರ್‌ ಶಾ ಸ್ಪಿನ್‌ ವಿಭಾಗದ ಪ್ರಮುಖರು.

ಇವರೆಲ್ಲ ಸೇರಿ ಭಾರತಕ್ಕೆ ಭಾರತದ ನೆಲದಲ್ಲೇ ಟೆಸ್ಟ್‌ ಸರಣಿ ಸೋಲುಣಿಸುವುದಾದರೆ ಒಂದು ಕೈ ನೋಡಿಯೇ ಬಿಡಬಹುದು!

ಇಂಗ್ಲೆಂಡಿಗೊಂದು ಸವಾಲು! :

ಇದೀಗ ಮತ್ತೆ ಇಂಗ್ಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಆಡಲಿದೆ. ಅದು ಶ್ರೀಲಂಕಾಕ್ಕೆ ವೈಟ್‌ವಾಶ್‌ ಮಾಡಿದ ಹುರುಪಿನಲ್ಲಿದೆ. ಇನ್ನೊಂದೆಡೆ ಟೀಮ್‌ ಇಂಡಿಯಾ ಆಸ್ಟ್ರೇಲಿಯಕ್ಕೆ ಸರಣಿ ಸೋಲಿನ ಏಟು ಬಿಗಿದು ಬಂದಿದೆ. ಆಸೀಸ್‌ಗೆ

ಹೋಲಿಸಿದರೆ ಇಂಗ್ಲೆಂಡ್‌ ಹೆಚ್ಚು ಬಲಿಷ್ಠ ತಂಡ. ಶಿಸ್ತು, ಬದ್ಧತೆಯನ್ನು ಆಂಗ್ಲರ ಆಟದಲ್ಲಿ ಕಾಣಬಹುದು. ಅದು 9 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆದ್ದು ಇತಿಹಾಸವನ್ನು ಪುನರಾವರ್ತಿಸೀತೇ? ಇಲ್ಲವಾದರೆ ಭಾರತವನ್ನು ಸೋಲಿಸಲು ಯಾರಿಂದ ಸಾಧ್ಯ? ಇಂಥ ಪ್ರಶ್ನೆಗಳು ವಿಶ್ವದ ಟೆಸ್ಟ್‌ ತಂಡಗಳನ್ನು ಕಾಡುತ್ತಲೇ ಇದೆ.

ಈ ಸಂದರ್ಭದಲ್ಲಿ ಹೊಳೆದ ಒಂದು ಸ್ವಾರಸ್ಯಕರ ಸಂಗತಿ ಇಲ್ಲಿದೆ. ವಿಶ್ವದ ಸಮಕಾಲೀನ ಶ್ರೇಷ್ಠ ಆಟಗಾರರನ್ನು ಒಳಗೊಂಡ ತಂಡವೊಂದರಿಂದ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ ಎಂಬ ಲೆಕ್ಕಾಚಾರ! ಆಗ ಈ ತಂಡದ ಸ್ವರೂಪ ಹೇಗಿದ್ದೀತು, ಈ ತಂಡದಲ್ಲಿ ಯಾರೆಲ್ಲ ಸ್ಥಾನ ಸಂಪಾದಿಸಬಹುದು ಎಂಬ ಕುತೂಹಲ ಮೂಡುವುದು ಖಂಡಿತ. ಹಿಂದೊಮ್ಮೆ ಇಂಥದೇ ತಂಡವನ್ನು ರಚಿಸಲಾಗಿತ್ತು. ಆದರೆ ಇದು ಅದಕ್ಕಿಂತ ಭಿನ್ನವಾದ ವಿಶ್ವ ಟೆಸ್ಟ್‌ ಇಲೆವೆನ್‌.

ವಿಶ್ವ ಟೆಸ್ಟ್‌ ಇಲೆವೆನ್‌ :

ದಿಮುತ್‌ ಕರುಣರತ್ನೆ, ಟಾಮ್‌ ಲ್ಯಾಥಂ, ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌, ಜೋ ರೂಟ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ಬೆನ್‌ ಸ್ಟೋಕ್ಸ್‌, ಪ್ಯಾಟ್‌ ಕಮಿನ್ಸ್‌, ಕಾಗಿಸೊ ರಬಾಡ, ಯಾಸಿರ್‌ ಶಾ ಮತ್ತು ನಥನ್‌ ಲಿಯಾನ್‌.

ಭಾರತ ಕಠಿನ ತಂಡವಾಗಲು ವಿರಾಟ್‌ ಕೊಹ್ಲಿ ಪಾತ್ರ ಮಹತ್ವದ್ದಾಗಿದೆ. ತವರು ನೆಲದಲ್ಲಿ ಅವರು ಯಾವುದೇ ತಪ್ಪು ಮಾಡುವುದಿಲ್ಲ. ಹಾಗಾಗಿ ಭಾರತ ಅವರದೇ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ನಾಸಿರ್‌ ಹುಸೆನ್‌.  ಮಾಜಿ ಆಟಗಾರ

Advertisement

Udayavani is now on Telegram. Click here to join our channel and stay updated with the latest news.

Next