Advertisement

ಭಾರತ-ಇಂಗ್ಲೆಂಡ್‌ ಚುಟುಕು ಕ್ರಿಕೆಟ್‌ ಕದನ

11:31 PM Mar 11, 2021 | Team Udayavani |

ಅಹ್ಮದಾಬಾದ್‌ : ಟೆಸ್ಟ್‌ ಸರಣಿಯನ್ನು ಕೈವಶಪಡಿಸಿಕೊಂಡ ಭಾರತ ತಂಡಕ್ಕೆ ಶುಕ್ರವಾರದಿಂದ ಇಂಗ್ಲೆಂಡ್‌ ವಿರುದ್ಧ ಟಿ20 ಸವಾಲು ಎದುರಾಗಲಿದೆ. ಅಚ್ಚರಿ ಹಾಗೂ ಅನಿಶ್ಚಿತ ಫ‌ಲಿತಾಂಶಕ್ಕೆ ಹೆಸರುವಾಸಿಯಾದ ಚುಟುಕು ಪಂದ್ಯಗಳಲ್ಲೂ ಆಂಗ್ಲರನ್ನು ಕುಟುಕುವುದು ಕೊಹ್ಲಿ ಪಡೆಯ ಯೋಜನೆ. ಇನ್ನೊಂದೆಡೆ, ಟೆಸ್ಟ್‌ನಲ್ಲಿ ಗೆಲುವಿನ ಆರಂಭ ಪಡೆದೂ ಕೊನೆಯಲ್ಲಿ ಸತತ ಸೋಲಿಗೆ ತುತ್ತಾದ ಆಂಗ್ಲರ ಪಡೆಯಿಲ್ಲಿ ಸೇಡು ತೀರಿಸುವ ಯೋಜನೆಯಲ್ಲಿದೆ. ಆದರೆ ಎರಡೂ ತಂಡಗಳ ದೃಷ್ಟಿ ಮಾತ್ರ ಮುಂದಿನ ಟಿ20 ವಿಶ್ವಕಪ್‌ ಮೇಲೆ ನೆಟ್ಟಿರುವುದು ಸುಳ್ಳಲ್ಲ.

Advertisement

ಭಾರತದ ಆತಿಥ್ಯದಲ್ಲಿ ಈ ವರ್ಷಾಂತ್ಯ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯಲಿದ್ದು, ಎರಡೂ ತಂಡಗಳು ಈ ಪ್ರತಿಷ್ಠಿತ ಕೂಟಕ್ಕಾಗಿ ಪರಿಪೂರ್ಣ ಕಾಂಬಿನೇಶನ್‌ ಒಂದನ್ನು ರೂಪಿಸುವ ಯೋಜನೆ ಯಲ್ಲಿದೆ. ಭಾರತದಲ್ಲಂತೂ ಏಕ ಕಾಲದಲ್ಲಿ ಎರಡು ಸರಣಿಗಾಗು ವಷ್ಟು ಪ್ರತಿಭಾನ್ವಿತ ಆಟಗಾರರ ಪಡೆಯೇ ಇದೆ. ಮುಂದಿನ ಐಪಿಎಲ್‌ನಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರಬಹುದು. ಹೀಗಾಗಿ ಸಿಕ್ಕಿದ ಅವಕಾಶವನ್ನು ಗಟ್ಟಿಗೊಳಿಸಿಕೊಳ್ಳಲು ಇಲ್ಲಿ ಆರೋಗ್ಯಕರ ಪೈಪೋಟಿಯೊಂದು ಕಂಡುಬರುವುದು ಖಚಿತ.

ಎಲ್ಲ ವಿಭಾಗಗಳಲ್ಲೂ ಪೈಪೋಟಿ :

ಟೆಸ್ಟ್‌ ಕ್ರಿಕೆಟಿಗೆ ಹೋಲಿಸಿದರೆ ಎರಡೂ ತಂಡಗಳು ಸಂಪೂರ್ಣ ವಿಭಿನ್ನವಾಗಿವೆ. ಇಲ್ಲಿ ಎಲ್ಲ ವಿಭಾಗಗಳಲ್ಲೂ ಸ್ಪರ್ಧೆ ಇದೆ. ರೋಹಿತ್‌ ಶರ್ಮ ಜತೆ ಯಾರು ಇನ್ನಿಂಗ್ಸ್‌ ಆರಂಭಿಸಬೇಕು, ಮಧ್ಯಮ ಕ್ರಮಾಂಕಕ್ಕೆ ಯಾರು, ಬೌಲಿಂಗ್‌ ಕಾಂಬಿನೇಶನ್‌ ಹೇಗೆ ರೂಪಿಸಬೇಕು ಎಂಬುದೆಲ್ಲ ತಂಡದ ಆಡಳಿತ ಮಂಡಳಿ ಮುಂದಿರುವ ಪ್ರಶ್ನೆಗಳು.

ರೋಹಿತ್‌ ಶರ್ಮ ಅವರೊಂದಿಗೆ ಓಪನಿಂಗ್‌ ನಡೆಸಲು ಕೆ.ಎಲ್‌. ರಾಹುಲ್‌ ಮತ್ತು ಶಿಖರ್‌ ಧವನ್‌ ನಡುವೆ ಸ್ಪರ್ಧೆ ಇದ್ದಿತ್ತು. ಆದರೆ ಈ ಅವಕಾಶವೀಗ ರಾಹುಲ್‌ ಪಾಲಾಗಿದೆ ಎಂಬುದಾಗಿ ಕ್ಯಾಪ್ಟನ್‌ ಕೊಹ್ಲಿ ತಿಳಿಸಿದ್ದಾರೆ. ಹೀಗಾಗಿ ಧವನ್‌ ಸದ್ಯ “ವೇಟಿಂಗ್‌ ಲಿಸ್ಟ್‌’ನಲ್ಲಿ ಇರಬೇಕಾಗುತ್ತದೆ.

Advertisement

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ನಡುವೆ ಪೈಪೋಟಿ ಇದ್ದರೂ ಅಯ್ಯರ್‌ ಅವರೇ ಮೊದಲ ಆಯ್ಕೆ ಎಂಬುದರಲ್ಲಿ ಅನುಮಾನವಿಲ್ಲ. ರಿಷಭ್‌ ಪಂತ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೊಡಿಬಡಿ ಆಟದ ಮೂಲಕ  ಕೆಳ ಕ್ರಮಾಂಕದಲ್ಲಿ ಸಿಡಿದು ನಿಲ್ಲಬಲ್ಲರು.

ಟಿ. ನಟರಾಜನ್‌ ಲಭಿಸದೇ ಇರುವುದರಿಂದ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ವಿಭಾಗದ ನೇತೃತ್ವ ವಹಿಸಬೇಕಿದೆ. ಆಂಗ್ಲರು ಸ್ಪಿನ್ನಿಗೆ ತಿಣುಕಾಡುವುದರಿಂದ ಚಹಲ್‌ ಜತೆಗೆ ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ ಇಬ್ಬರೂ ದಾಳಿಗಿಳಿದರೆ ಅಚ್ಚರಿ ಇಲ್ಲ. ಇಲ್ಲವಾದರೆ ಭುವನೇಶ್ವರ್‌ ಜತೆಯಲ್ಲಿ ಶಾದೂìಲ್‌ ಠಾಕೂರ್‌ ಮತ್ತು ನವದೀಪ್‌ ಸೈನಿ ಕಾಣಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್‌ ವಿಭಿನ್ನ ತಂಡ :

ಟೆಸ್ಟ್‌ ತಂಡಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಹೆಚ್ಚು ವೈವಿಧ್ಯಮಯ ಹಾಗೂ ಶಕ್ತಿಶಾಲಿಯಾಗಿ ಗೋಚರಿಸುತ್ತದೆ. ಇಯಾನ್‌ ಮಾರ್ಗನ್‌ ಅವರ ಸಮರ್ಥ ನಾಯಕತ್ವದಲ್ಲಿ ಸಾಕಷ್ಟು ಮಂದಿ ಟಿ20 ಸ್ಪೆಷಲಿಸ್ಟ್‌ ಆಟಗಾರರಿದ್ದಾರೆ. ನಂ.1 ಬ್ಯಾಟ್ಸ್‌ಮನ್‌ ಮಾಲನ್‌, ಬಿಗ್‌ ಹಿಟ್ಟರ್‌ಗಳಾದ ಸ್ಟೋಕ್ಸ್‌, ಬಟ್ಲರ್‌, ರಾಯ್‌ ಅವರೆಲ್ಲ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕರನ್‌, ಅಲಿ, ರಶೀದ್‌, ವುಡ್‌, ಆರ್ಚರ್‌ ಕೂಡ ಅಪಾಯಕಾರಿಗಳೇ.

 

ಸಂಭಾವ್ಯ ತಂಡಗಳು :

ಭಾರತ: ರೋಹಿತ್‌ ಶರ್ಮ, ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌/ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಶಾರ್ದೂಲ್‌ ಠಾಕೂರ್‌, ಸೈನಿ, ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾಸ್‌ ಬಟ್ಲರ್‌, ಜಾನಿ ಬೇರ್‌ಸ್ಟೊ, ಡೇವಿಡ್‌ ಮಾಲನ್‌, ಇಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಕ್ರಿಸ್‌ ಜೋರ್ಡನ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌/ಜೋಫ್ರ ಆರ್ಚರ್‌.

 

ಟಿ20 ಸರಣಿ ವೇಳಾಪಟ್ಟಿ  :

ದಿನಾಂಕ          ಪಂದ್ಯ ಆರಂಭ

ಮಾ. 12            ಮೊದಲ ಟಿ20  ರಾತ್ರಿ 7.00

ಮಾ. 14            2ನೇ ಟಿ20         ರಾತ್ರಿ 7.00

ಮಾ. 16            3ನೇ ಟಿ20         ರಾತ್ರಿ 7.00

ಮಾ. 18            4ನೇ ಟಿ20         ರಾತ್ರಿ 7.00

ಮಾ. 20            5ನೇ ಟಿ20         ರಾತ್ರಿ 7.00

 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next