Advertisement

ಪಂತ್‌ಗೆ ಟೆಸ್ಟ್‌  ಆಹ್ವಾನ; ರೋಹಿತ್‌ಗಿಲ್ಲ ಸ್ಥಾನ

06:00 AM Jul 19, 2018 | Team Udayavani |

ಹೊಸದಿಲ್ಲಿ: ಪ್ರತಿಭಾನ್ವಿತ ಯುವ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಮೊದಲ ಬಾರಿಗೆ ಭಾರತದ ಟೆಸ್ಟ್‌ ತಂಡಕ್ಕೆ ಕರೆ ಪಡೆದಿದ್ದಾರೆ. ಆಗಸ್ಟ್‌ ಒಂದರಿಂದ ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಯ ಮೊದಲ 3 ಪಂದ್ಯಗಳಿಗೆ ಬುಧವಾರ ಆರಿಸಲಾದ ತಂಡದಲ್ಲಿ ಪಂತ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಏಕದಿನ ಹಾಗೂ ಟಿ20 ಸ್ಪೆಷಲಿಸ್ಟ್‌ ಬ್ಯಾಟ್ಸ್‌ ಮನ್‌ ರೋಹಿತ್‌ ಶರ್ಮ ಅವರನ್ನು ಮತ್ತೂಮ್ಮೆ ಕಡೆಗಣಿಸಲಾಗಿದೆ.

Advertisement

ಪಂತ್‌ ಸೇರ್ಪಡೆ ಹಾಗೂ ರೋಹಿತ್‌ ಅವಗಣನೆ ಹೊರತುಪಡಿಸಿದರೆ ಭಾರತ ತಂಡದಲ್ಲಿ ಭಾರೀ ಅಚ್ಚರಿಯೇನೂ ಗೋಚರಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲೆರಡು ಟೆಸ್ಟ್‌ ಆಡಿದ ಬಳಿಕ ರೋಹಿತ್‌ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅಫ್ಘಾನ್‌ ಎದುರಿನ ಬೆಂಗಳೂರು ಟೆಸ್ಟ್‌ ಪಂದ್ಯಕ್ಕೂ ರೋಹಿತ್‌ ಅವರನ್ನು ಆರಿಸಿರಲಿಲ್ಲ.

20ರ ಹರೆಯದ ರಿಷಬ್‌ ಪಂತ್‌ ಟೀಮ್‌ ಇಂಡಿಯಾದ 2ನೇ ಸ್ಪೆಷಲಿಸ್ಟ್‌ ವಿಕೆಟ್‌ ಕೀಪರ್‌ ಆಗಿರುವರು. ದಿನೇಶ್‌ ಕಾರ್ತಿಕ್‌ ಈ ತಂಡದಲ್ಲಿರುವ ಮತ್ತೂಬ್ಬ ಕೀಪರ್‌. ವೃದ್ಧಿಮಾನ ಸಾಹಾ ಗಾಯಾಳಾದ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನ ವಿರುದ್ಧ ಆಡಲಾದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಕಾರ್ತಿಕ್‌ ಅವರೇ ಕೀಪರ್‌ ಆಗಿದ್ದರು. ಐಪಿಎಲ್‌ ವೇಳೆ ಕೈಬೆರಳಿನ ಗಾಯಕ್ಕೊಳಗಾಗಿದ್ದ ಸಾಹಾ ಇನ್ನೂ ಗುಣಮುಖರಾಗಿಲ್ಲ.

ಶಮಿ, ಬುಮ್ರಾ ವಾಪಸ್‌
ಯೋ ಯೋ ಟೆಸ್ಟ್‌ನಲ್ಲಿ ಫೇಲ್‌ ಆಗಿ ಅಫ್ಘಾನ್‌ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗದ ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಈಗ ಪೂರ್ತಿ ಫಿಟ್‌ನೆಸ್‌ಗೆ ಮರಳಿದ್ದು, ಟೆಸ್ಟ್‌ ತಂಡಕ್ಕೆ ವಾಪಸಾಗಿದ್ದಾರೆ. ಗಾಯಾಳಾಗಿ ಏಕದಿನ ಸರಣಿ ತಪ್ಪಿಸಿಕೊಂಡಿದ್ದ ಜಸ್‌ಪ್ರೀತ್‌ ಬುಮ್ರಾ ಕೂಡ ಚೇತರಿಸಿಕೊಂಡ ಕಾರಣ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಬೆನ್ನು ನೋವಿನಿಂದ ನರಳುತ್ತಿರುವ ಕೀ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಆಯ್ಕೆ ಮಂಡಳಿಯ “ವೇಟಿಂಗ್‌ ಲಿಸ್ಟ್‌’ನಲ್ಲಿದ್ದಾರೆ. ಸಂಪೂರ್ಣ ಗುಣಮುಖರಾದರೆ ಕೊನೆಯ 2 ಟೆಸ್ಟ್‌ ಪಂದ್ಯಗಳಿಗೆ ಆಯ್ಕೆ ಆಗಬಹುದು.

ನಾಯರ್‌, ಠಾಕೂರ್‌ ಸ್ಥಾನ ಗಟ್ಟಿ
ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಕರುಣ್‌ ನಾಯರ್‌, ಮುಂಬಯಿಯ ಮಧ್ಯಮ ವೇಗಿ ಶಾದೂìಲ್‌ ಠಾಕೂರ್‌ ಸ್ಥಾನ ಉಳಿಸಿಕೊಂಡಿದ್ದಾರೆ. ಇವರಿಬ್ಬರೂ ಕಳೆದ ಅಫ್ಘಾನ್‌ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿರಲಿಲ್ಲ. 

Advertisement

ಭಾರತದ ಸ್ಪಿನ್‌ ವಿಭಾಗದಲ್ಲಿ ಎಂದಿನಂತೆ 3 ಮುಖಗಳಿವೆ-ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಮತ್ತು ಕುಲದೀಪ್‌ ಯಾದವ್‌. ತಂಡದ ಪ್ರಧಾನ ವೇಗಿಗಳೆಂದರೆ ಉಮೇಶ್‌ ಯಾದವ್‌ ಮತ್ತು ಇಶಾಂತ್‌ ಶರ್ಮ. ಬ್ಯಾಟಿಂಗ್‌ ವಿಭಾಗದ ಅಗ್ರ ಕ್ರಮಾಂಕದಲ್ಲಿ ಧವನ್‌, ವಿಜಯ್‌ ಹಾಗೂ ರಾಹುಲ್‌; ಮಧ್ಯಮ ಕ್ರಮಾಂಕದಲ್ಲಿ ಪೂಜಾರ, ಕೊಹ್ಲಿ, ರಹಾನೆ ಇದ್ದಾರೆ.

“ಎ’ ತಂಡದ ಜತೆ ಆಟಗಾರರು
ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರುವ ಬಹಳಷ್ಟು ಆಟಗಾರರು ಕಳೆದೊಂದು ತಿಂಗಳಿಂದ ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, “ಎ’ ತಂಡಗಳ ನಡುವಿನ ಸರಣಿಯನ್ನು ಆಡುತ್ತಿದ್ದಾರೆ. ಇವರಲ್ಲಿ ಹಾರ್ಡ್‌ ಹಿಟ್ಟಿಂಗ್‌ ಎಡಗೈ ಆಟಗಾರ ರಿಷಬ್‌ ಪಂತ್‌ ಕೂಡ ಸೇರಿದ್ದಾರೆ. ಕಳೆದ ವಾರ ವೆಸ್ಟ್‌ ಇಂಡೀಸ್‌ “ಎ’ ವಿರುದ್ಧ ನಡೆದ 2ನೇ ಅನಧಿಕೃತ ಟೆಸ್ಟ್‌ನಲ್ಲಿ  71 ಎಸೆತಗಳಿಂದ ಅಜೇಯ 67 ರನ್‌ ಬಾರಿಸಿದ ಪಂತ್‌, ಭಾರತದ 5 ವಿಕೆಟ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುರಳಿ ವಿಜಯ್‌, ಅಜಿಂಕ್ಯ ರಹಾನೆ, ಕರುಣ್‌ ನಾಯರ್‌ ಕೂಡ “ಎ’ ತಂಡದೊಂದಿಗಿದ್ದು, ವೂಸ್ಟರ್‌ಶೈರ್‌ನಲ್ಲಿ ಆಡುತ್ತಿದ್ದಾರೆ.

ಭಾರತ ಟೆಸ್ಟ್‌ ತಂಡ 
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ಕರುಣ್‌ ನಾಯರ್‌, ದಿನೇಶ್‌ ಕಾರ್ತಿಕ್‌ (ವಿ.ಕೀ.), ರಿಷಬ್‌ ಪಂತ್‌ (ವಿ.ಕೀ.), ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದೂಲ್‌ ಠಾಕೂರ್‌.

Advertisement

Udayavani is now on Telegram. Click here to join our channel and stay updated with the latest news.

Next