Advertisement

ಹೊಸ ಇತಿಹಾಸದತ್ತ ಟೀಮ್‌ ಇಂಡಿಯಾ

10:37 PM Sep 09, 2021 | Team Udayavani |

ಮ್ಯಾಂಚೆಸ್ಟರ್‌: ಎಲ್ಲವೂ ಯೋಜನೆ ಯಂತೆ ಸಾಗಿದರೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಟೀಮ್‌ ಇಂಡಿಯಾ ಹೊಸ ಇತಿಹಾಸವೊಂದನ್ನು ಬರೆಯಲಿದೆ. ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಇಲ್ಲಿ ಆರಂಭ ವಾಗಲಿದ್ದು, 2-1 ಮುನ್ನಡೆಯಲ್ಲಿರುವ ಕೊಹ್ಲಿ ಪಡೆ ಆಂಗ್ಲರ ನಾಡಿನಲ್ಲಿ ಸರಣಿ ಜಯಭೇರಿ ಮೊಳಗಿಸುವ ಸಾಧ್ಯತೆಯೊಂದು ದಟ್ಟವಾಗಿದೆ.

Advertisement

ಓಲ್ಡ್‌ ಟ್ರಾಫರ್ಡ್‌ ಅಂಗಳ ಭಾರತಕ್ಕೆ ಈ ವರೆಗೆ ಗೆಲುವಿನ ಕದ ತೆರೆದಿಲ್ಲ ಎಂಬುದಾಗಿ ಇತಿಹಾಸ ಹೇಳುತ್ತದೆ. ಆದರೆ ಸರಣಿ ವಶಪಡಿಸಿಕೊಳ್ಳಲು ಗೆಲ್ಲಲೇಬೇಕೆಂದಿಲ್ಲ, ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡರೂ ಸಾಕು. ಪಂದ್ಯಕ್ಕೆ ಮೊದಲೆರಡು ದಿನ ಮಳೆ ಭೀತಿ ಇರುವುದರಿಂದ ಭಾರತಕ್ಕೆ ಲಾಭ ಹೆಚ್ಚು. ಸರಣಿಯನ್ನು ಸಮ ಬಲಕ್ಕೆ ತರಬೇಕಾದರೆ ಇಂಗ್ಲೆಂಡಿಗೆ ಗೆಲುವು ಅನಿವಾರ್ಯ. ಸಹಜವಾಗಿಯೇ ರೂಟ್‌ ಬಳಗ ತೀವ್ರ ಒತ್ತಡದಲ್ಲಿ ಸಿಲುಕಿದೆ.

ಈ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಗೊಳಿಸಿದರೆ ಆಸ್ಟ್ರೇಲಿಯ (2018-19) ಮತ್ತು ಇಂಗ್ಲೆಂಡ್‌ನ‌ಲ್ಲಿ ಟೆಸ್ಟ್‌ ಸರಣಿ ಜಯಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಅವರದಾಗಲಿದೆ.

ಆದರೆ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಲಾರ್ಡ್ಸ್‌ನಲ್ಲಿ ಎಡವಿದ ಇಂಗ್ಲೆಂಡ್‌ ಲೀಡ್ಸ್‌ನಲ್ಲಿ ತಿರುಗಿ ಬಿದ್ದ ನಿದರ್ಶನ ಇದೇ ಸರಣಿಯಲ್ಲಿ ಕಾಣಸಿಕ್ಕಿದೆ. ಹೀಗಾಗಿ ಭಾರತ ತಂಡ ಮುನ್ನಡೆಯ ಖುಷಿಯಲ್ಲಿ ಮೈಮರೆಯದೇ ಆಡಬೇಕಾದುದು ಅಗತ್ಯ.

ಶಮಿ ಎಂಟ್ರಿ, ಬುಮ್ರಾಗೆ ರೆಸ್ಟ್‌? :

Advertisement

ಮ್ಯಾಂಚೆಸ್ಟರ್‌ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಬಹುದು. ಪೂರ್ತಿ ಫಿಟ್‌ ಆಗಿರುವ ಮೊಹಮ್ಮದ್‌ ಶಮಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಂಡಿತ. ಆಗ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಬುಮ್ರಾ ಓವಲ್‌ನ ಫ್ಲ್ಯಾಟ್‌ ಟ್ರ್ಯಾಕ್‌ ಮೇಲೂ ರಿವರ್ಸ್‌ ಸ್ವಿಂಗ್‌ ಮೂಲಕ ಆಂಗ್ಲರಿಗೆ ಸಿಂಹಸ್ವಪ್ನರಾದರೂ ಅವರ ವರ್ಕ್‌ಲೋಡ್‌ ಸಿಕ್ಕಾಪಟ್ಟೆ ಆಗಿದೆ. ನಿರಂತರವಾಗಿ ಆಡುತ್ತಲೇ ಇರುವ ಬುಮ್ರಾ ಕಳೆದೊಂದು ತಿಂಗಳಲ್ಲಿ 151 ಓವರ್‌ ಎಸೆದಿದ್ದಾರೆ. 4ನೇ ಟೆಸ್ಟ್‌ ಪಂದ್ಯದ ಅಂತಿಮ ದಿನ ಎಸೆದ ತೀವ್ರ ಒತ್ತಡದ 22 ಓವರ್‌ಗಳೂ ಇದರಲ್ಲಿ ಸೇರಿವೆ. ಹೀಗಾಗಿ ಅವರಿಗೆ ರೆಸ್ಟ್‌ ಬಹುತೇಕ ಖಚಿತ.

ಅನುಭವಿ ಹಾಗೂ ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ಸರಣಿಯಲ್ಲಿ ಒಂದಾದರೂ ಅವಕಾಶ ಕೊಡದಿದ್ದರೆ ದೊಡ್ಡ ಅನ್ಯಾಯ ಮಾಡಿದಂತೆ ಎಂಬುದು ಕ್ರಿಕೆಟ್‌ ಪಂಡಿತರ ವ್ಯಾಖ್ಯಾನ. ರವೀಂದ್ರ ಜಡೇಜ ಅಥವಾ ಮೊಹಮ್ಮದ್‌ ಸಿರಾಜ್‌ ಸ್ಥಾನದಲ್ಲಿ ಅಶ್ವಿ‌ನ್‌ ಅವರನ್ನು ಆಡಿಸುವ ಸಾಧ್ಯತೆ ಇಲ್ಲದಿಲ್ಲ. ಅಲ್ಲದೇ ಟಿ20 ವಿಶ್ವಕಪ್‌ಗೂ  ಆಯ್ಕೆಯಾಗಿರುವುದರಿಂದ ಅಶ್ವಿ‌ನ್‌ ಹೆಚ್ಚು ಜೋಶ್‌ ತೋರಲೂಬಹುದು.

ರೋಹಿತ್‌, ಪೂಜಾರ ಎಷ್ಟು ಫಿಟ್‌? :

ಓವಲ್‌ ಟೆಸ್ಟ್‌ ಪಂದ್ಯದ ಶತಕವೀರ ರೋಹಿತ್‌ ಶರ್ಮ, ವನ್‌ಡೌನ್‌ ಬ್ಯಾಟ್ಸ್‌ ಮನ್‌ ಪೂಜಾರ ಫಿಟ್‌ನೆಸ್‌ ಬಗ್ಗೆ ಅನುಮಾನಗಳಿವೆ. ಇವರು ಲಭ್ಯರಾಗದೇ ಹೋದರೆ ಅಗರ್ವಾಲ್‌ ಅಥವಾ ಶಾ, ವನ್‌ಡೌನ್‌ನಲ್ಲಿ ಸೂರ್ಯಕುಮಾರ್‌ ಅಥವಾ ಹನುಮ ವಿವಾರಿ ಆಡಲಿಳಿಯಬಹುದು.

ರೂಟ್‌ಗೆ ಬಟ್ಲರ್‌ ಬಲ :

ತಂಡದ ಆಯ್ಕೆಗೆ ಇಂಗ್ಲೆಂಡ್‌ ಸಾಕಷ್ಟು ಕಸರತ್ತು ಮಾಡಬೇಕಿದೆ. ಉಪನಾಯಕ ಜಾಸ್‌ ಬಟ್ಲರ್‌ ಮರಳಿರುವುದರಿಂದ ರೂಟ್‌ಗೆ ಹೆಚ್ಚಿನ ಬಲ ಬಂದಿದೆ. ಜಾನಿ ಬೇರ್‌ಸ್ಟೊ ಹೊರಗುಳಿಯಬಹುದು.

ಬುಮ್ರಾ ಅವರಂತೆ ಜೇಮ್ಸ್‌ ಆ್ಯಂಡರ್ಸನ್‌ ಕೂಡ ವಿಪರೀತ ದಣಿದಿದ್ದಾರೆ. ಇವರಿಗೆ ರೆಸ್ಟ್‌ ನೀಡುವ ಮಾತುಗಳು ಕೇಳಿಬರುತ್ತಿವೆ. ಆಗ ಮಾರ್ಕ್‌ ವುಡ್‌-ಕ್ರಿಸ್‌ ವೋಕ್ಸ್‌ ಹೊಸ ಚೆಂಡನ್ನು ಹಂಚಿಕೊಳ್ಳಬಹುದು. ಕ್ರೆಗ್‌ ಓವರ್ಟನ್‌ ಕೂಡ ಹೊರಗುಳಿಯುವ ಸಾಧ್ಯತೆ ಇದೆ.

ಆದರೆ ಇಂಗ್ಲೆಂಡ್‌ ತಂಡದಲ್ಲಿ ಯಾರೇ ಆಡಲಿ, ನಾಯಕ ರೂಟ್‌ ಅವರ ವಿಕೆಟನ್ನು ಬೇಗ ಕಳಚಿದರೆ ಆತಿಥೇಯರ ಕತೆ ಮುಗಿದಂತೆ ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತು!

ರಹಾನೆಗೆ ಇನ್ನೊಂದು ಅವಕಾಶ? :

ಉಪನಾಯಕ ಅಜಿಂಕ್ಯ ರಹಾನೆ ಸ್ಥಾನಕ್ಕೆ ಕುತ್ತು ಬರಲಿದೆಯೇ? ಈ ಪ್ರಶ್ನೆ ಕಳೆದ ಕೆಲವು ಪಂದ್ಯಗಳಿಂದಲೇ ಕೇಳಿಬರತೊಡಗಿತ್ತು. ಆಡಿದ 7 ಇನ್ನಿಂಗ್ಸ್‌ ಗಳಲ್ಲಿ ಆರರಲ್ಲಿ ರಹಾನೆ ಬ್ಯಾಟ್‌ ಮುಷ್ಕರ ಹೂಡಿದೆ. ಓವಲ್‌ನ ಎರಡೂ ಇನ್ನಿಂಗ್ಸ್‌ ಗಳಲ್ಲಿ ಘೋರ ವೈಫಲ್ಯ ಎದುರಾಗಿದೆ. ಆದರೆ ನಾಯಕ ಕೊಹ್ಲಿ ಪ್ರಕಾರ ರಹಾನೆಯನ್ನು ಕೈಬಿಡುವ ಸಾಧ್ಯತೆ ಇಲ್ಲ. ಅಕಸ್ಮಾತ್‌ ಕೊನೆಯ ಕ್ಷಣದಲ್ಲಿ ಹನುಮ ವಿಹಾರಿಗೆ ಚಾನ್ಸ್‌ ಸಿಗಲೂಬಹುದು.

ಅಂತಿಮ ಟೆಸ್ಟ್‌ ಅನುಮಾನ: ಗಂಗೂಲಿ :

ಭಾರತ ಕ್ರಿಕೆಟ್‌ ತಂಡದ ಕಿರಿಯ ಫಿಸಿಯೋ ಯೋಗೇಶ್‌ ಪರ್ಮಾರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಭಾರತ-ಇಂಗ್ಲೆಂಡ್‌ ನಡುವಿನ ಅಂತಿಮ ಟೆಸ್ಟ್‌ ಪಂದ್ಯ ನಡೆಯುವ ಬಗ್ಗೆ ಅನುಮಾನವಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

“ಇಂಥ ಸಮಯದಲ್ಲಿ ಪಂದ್ಯವನ್ನು ನಡೆಸಲಾಗುವುದೇ ಎಂದು ನಮಗೆ ತಿಳಿದಿಲ್ಲ. ಪಂದ್ಯ ನಡೆಯಲಿ ಎಂದು ಆಶಿಸುತ್ತೇವೆ’ ಎಂದು ಕೋಲ್ಕತ್ತಾದಲ್ಲಿ ನಡೆದ “ಮಿಷನ್‌ ಡಾಮಿನೇಶನ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಂಗೂಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next