ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಹಾದಿ ಹಿಡಿದಿದ್ದ ಭಾರತಕ್ಕೆ ಮಳೆ ವಿಲನ್ ಆಗಿ ಕಾಡಿದೆ. ಅಂತಿಮ ದಿನವಾದ ರವಿವಾರ ಸತತವಾಗಿ ಸುರಿಯುತ್ತಲೇ ಇದ್ದ ಮಳೆಯಿಂದಾಗಿ ಒಂದೂ ಎಸೆತವಿಕ್ಕಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾಗೊಂಡಿತು. ಗೆದ್ದು 1-0 ಮುನ್ನಡೆ ಸಾಧಿಸುವ ಟೀಮ್ ಇಂಡಿಯಾದ ಕನಸೆಲ್ಲ ಮಳೆಯಲ್ಲಿ ಕೊಚ್ಚಿ ಹೋಯಿತು.
ಗೆಲುವಿಗೆ 209 ರನ್ನುಗಳ ಸಾಮಾನ್ಯ ಗುರಿ ಪಡೆದಿದ್ದ ಭಾರತ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 52 ರನ್ ಮಾಡಿ ಸುಸ್ಥಿತಿಯಲ್ಲಿತ್ತು. ಉಳಿದ 157 ರನ್ ಬಾರಿಸಿ ವಿಜಯೋತ್ಸವ ಆಚರಿಸಲು ತುದಿಗಾಲಲ್ಲಿ ನಿಂತಿತ್ತು. ಆದರೆ ಮಳೆ ಇಂಗ್ಲೆಂಡ್ ಪರ ಬ್ಯಾಟ್ ಬೀಸಿತು. ಅಪರಾಹ್ನ 3.30ಕ್ಕೆ ಅಂಪಾಯರ್‌ಗಳು ದಿನದಾಟವನ್ನು ರದ್ದುಗೊಳಿಸಿದರು. ಇದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಪಂದ್ಯವಾಗಿದ್ದು, ಎರಡೂ ತಂಡಗಳು ತಲಾ 4 ಅಂಕ ಪಡೆದವು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೆ.ಎಲ್. ರಾಹುಲ್ (26) ವಿಕೆಟ್ ಕಳೆದುಕೊಂಡಿತ್ತು. ತಲಾ 12 ರನ್ ಮಾಡಿದ ರೋಹಿತ್ ಶರ್ಮ ಮತ್ತು ಚೇತೇಶ್ವರ್ ಪೂಜಾರ ಕ್ರೀಸಿನಲ್ಲಿದ್ದರು.
ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಆ. 12ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-183 ಮತ್ತು 303. ಭಾರತ-278 ಮತ್ತು ಒಂದು ವಿಕೆಟಿಗೆ 52. ಪಂದ್ಯಶ್ರೇಷ್ಠ: ಜೋ ರೂಟ್.