Advertisement

ಕುಲದೀಪ್‌ ಕಂಟಕ; ರಾಹುಲ್‌ ಶತಕ

06:00 AM Jul 05, 2018 | Team Udayavani |

ಮ್ಯಾಂಚೆಸ್ಟರ್‌: ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರ ಘಾತಕ ದಾಳಿ ಹಾಗೂ ವನ್‌ಡೌನ್‌ ಬ್ಯಾಟ್ಸ್‌ ಮನ್‌ ಕೆ.ಎಲ್‌. ರಾಹುಲ್‌ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ.

Advertisement

ಮಂಗಳವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 8 ವಿಕೆಟಿಗೆ 159 ರನ್‌ ಗಳಿಸಿದರೆ, ಭಾರತ 18.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 163 ರನ್‌ ಪೇರಿಸಿ ಗೆದ್ದು ಬಂದಿತು. ಇದು ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ಭಾರತ  ಸಾಧಿಸಿದ ಮೊದಲ ಟಿ20 ಗೆಲುವು ಎಂಬುದು ವಿಶೇಷ.

ಸಿಡಿದು ನಿಂತ ರಾಹುಲ್‌ 
ಟೀಮ್‌ ಇಂಡಿಯಾದ ಅಮೋಘ ಚೇಸಿಂಗ್‌ ವೇಳೆ ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ 101 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದು ಅವರ 2ನೇ ಟಿ20 ಶತಕ. ಕೇವಲ 54 ಎಸೆತ ಎದುರಿಸಿದ ರಾಹುಲ್‌ 10 ಬೌಂಡರಿ, 5 ಸಿಕ್ಸರ್‌ ಬಾರಿಸಿ ಆಂಗ್ಲರ ಬೌಲಿಂಗ್‌ ದಾಳಿಯನ್ನು ಪುಡಿಗುಟ್ಟಿದರು. ಮೊದಲ ಓವರಿನಲ್ಲೇ ಶಿಖರ್‌ ಧವನ್‌ (4) ವಿಕೆಟ್‌ ಬಿದ್ದೊಡನೆ ಕ್ರೀಸಿಗೆ ಆಗಮಿಸಿದ ರಾಹುಲ್‌ ಅಮೋಘ ಆಟದ ಮೂಲಕ ಭಾರತದ ಪಾಳೆಯದಲ್ಲಿ ಸಂತಸದ ವಾತಾವರಣ ಮೂಡಿಸಿದರು. 

ರೋಹಿತ್‌ ಶರ್ಮ ಜತೆಗೂಡಿ 2ನೇ ವಿಕೆಟಿಗೆ 123 ರನ್‌ ಪೇರಿಸಿದ್ದು ರಾಹುಲ್‌ ಪರಾಕ್ರಮಕ್ಕೆ ಸಾಕ್ಷಿ. ರೋಹಿತ್‌ 30 ಎಸೆತಗಳಿಂದ 32 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ರಾಹುಲ್‌ ಜತೆ ನಾಯಕ ವಿರಾಟ್‌ ಕೊಹ್ಲಿ 20 ರನ್‌ ಮಾಡಿ ಅಜೇಯರಾಗಿ ಉಳಿದರು (22 ಎಸೆತ, 1 ಸಿಕ್ಸರ್‌).

ಕುಲದೀಪ್‌ ಬ್ರೇಕ್‌
ಇಂಗ್ಲೆಂಡಿನ ಆರಂಭ ಭರ್ಜರಿ ಆಗಿತ್ತು. ಜಾಸನ್‌ ರಾಯ್‌-ಜಾಸ್‌ ಬಟ್ಲರ್‌ ಕೇವಲ 5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 50 ರನ್‌ ಸೂರೆಗೈದರು. ಈ ಅವಧಿಯಲ್ಲಿ ಭುವನೇಶ್ವರ್‌, ಉಮೇಶ್‌ ಯಾದವ್‌ ದಂಡಿಸಲ್ಪಟ್ಟರು. ಒಂದು ಹಂತದಲ್ಲಿ ಇಂಗ್ಲೆಂಡ್‌ ಒಂದೇ ವಿಕೆಟಿಗೆ 95 ರನ್‌ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ಯಾವಾಗ ಕುಲದೀಪ್‌ ಯಾದವ್‌ ಆಕ್ರಮಣಕ್ಕಿಳಿದರೋ ಆಂಗ್ಲರ ಅಬ್ಬರವೆಲ್ಲ ತಣ್ಣಗಾಗುತ್ತ ಬಂತು. 14ನೇ ಓವರಿನಲ್ಲಿ ನಾಯಕ ಮಾರ್ಗನ್‌, ಬೇರ್‌ಸ್ಟೊ ಮತ್ತು ರೂಟ್‌ ವಿಕೆಟ್‌ಗಳನ್ನು ಬೇರು ಸಹಿತ ಕಿತ್ತ ಕುಲದೀಪ್‌ ಭಾರತಕ್ಕೆ ನಿಚ್ಚಳ ಮೇಲಗೈ ಒದಗಿಸಿದರು. ಇವರಲ್ಲಿ ಬೇರ್‌ಸ್ಟೊ ಮತ್ತು ರೂಟ್‌ ಅವರದು “ಗೋಲ್ಡನ್‌ ಡಕ್‌’ ಆಗಿತ್ತು. ಇಬ್ಬರೂ ಮುನ್ನುಗ್ಗಿ ಬಾರಿಸಲು ಹೋಗಿ ಧೋನಿಯಿಂದ ಸ್ಟಂಪ್ಡ್ ಆಗಲ್ಪಟ್ಟರು. 

Advertisement

ಸ್ಕೋರ್‌ಪಟ್ಟಿ

ಇಂಗ್ಲೆಂಡ್‌
ಜಾಸನ್‌ ರಾಯ್‌    ಬಿ ಯಾದವ್‌    30
ಜಾಸ್‌ ಬಟ್ಲರ್‌    ಸಿ ಕೊಹ್ಲಿ ಬಿ ಕುಲದೀಪ್‌    69
ಅಲೆಕ್ಸ್‌ ಹೇಲ್ಸ್‌    ಬಿ ಕುಲದೀಪ್‌    8
ಇಯಾನ್‌ ಮಾರ್ಗನ್‌    ಸಿ ಕೊಹ್ಲಿ ಬಿ ಕುಲದೀಪ್‌    7
ಜಾನಿ ಬೇರ್‌ಸ್ಟೊ    ಸ್ಟಂಪ್ಡ್ ಧೋನಿ ಬಿ ಕುಲದೀಪ್‌    0
ಜೋ ರೂಟ್‌    ಸ್ಟಂಪ್ಡ್ ಧೋನಿ ಬಿ ಕುಲದೀಪ್‌    0
ಮೊಯಿನ್‌ ಅಲಿ    ಸಿ ರೈನಾ ಬಿ ಪಾಂಡ್ಯ    6
ಡೇವಿಡ್‌ ವಿಲ್ಲಿ    ಔಟಾಗದೆ    29
ಕ್ರಿಸ್‌ ಜೋರ್ಡನ್‌    ಸಿ ಮತ್ತು ಬಿ ಯಾದವ್‌    0
ಲಿಯಮ್‌ ಪ್ಲಂಕೆಟ್‌    ಔಟಾಗದೆ    3

ಇತರ        7
ಒಟ್ಟು  (20 ಓವರ್‌ಗಳಲ್ಲಿ 8 ವಿಕೆಟಿಗೆ)    159

ವಿಕೆಟ್‌ ಪತನ: 1-50, 2-95, 3-106, 4-107, 5-107, 6-117, 7-141, 8-149.

ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    4-0-45-0
ಉಮೇಶ್‌ ಯಾದವ್‌        4-0-21-2
ಯಜುವೇಂದ್ರ ಚಾಹಲ್‌        4-0-34-0
ಹಾರ್ದಿಕ್‌ ಪಾಂಡ್ಯ        4-0-33-1
ಕುಲದೀಪ್‌ ಯಾದವ್‌        4-0-24-5

ಭಾರತ
ಶಿಖರ್‌ ಧವನ್‌    ಬಿ ವಿಲ್ಲಿ    4
ರೋಹಿತ್‌ ಶರ್ಮ    ಸಿ ಮಾರ್ಗನ್‌ ಬಿ ರಶೀದ್‌    32
ಕೆ.ಎಲ್‌. ರಾಹುಲ್‌    ಔಟಾಗದೆ    101
ವಿರಾಟ್‌ ಕೊಹ್ಲಿ    ಔಟಾಗದೆ    20

ಇತರ        6
ಒಟ್ಟು  (18.2 ಓವರ್‌ಗಳಲ್ಲಿ 2 ವಿಕೆಟಿಗೆ)    163

ವಿಕೆಟ್‌ ಪತನ: 1-7, 2-130.
ಬೌಲಿಂಗ್‌: ಡೇವಿಡ್‌ ವಿಲ್ಲಿ        4-0-30-1
ಕ್ರಿಸ್‌ ಜೋರ್ಡನ್‌        4-0-27-0
ಲಿಯಮ್‌ ಪ್ಲಂಕೆಟ್‌        4-0-42-0
ಆದಿಲ್‌ ರಶೀದ್‌        4-0-25-1
ಮೊಯಿನ್‌ ಅಲಿ        2.2-0-37-0

ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌
2ನೇ ಪಂದ್ಯ: ಶುಕ್ರವಾರ ಸ್ಥಳ: ಕಾರ್ಡಿಫ್
ಆರಂಭ: ರಾತ್ರಿ 10.00

ಎಕ್ಸ್‌ಟ್ರಾ ಇನ್ನಿಂಗ್ಸ್‌ 

ಭಾರತ ತಂಡ ಇಂಗ್ಲೆಂಡ್‌ ನೆಲದಲ್ಲಿ ಸತತ 5 ಪಂದ್ಯಗಳನ್ನು ಸೋತ ಬಳಿಕ ಗೆಲುವಿನ ಖಾತೆ ತೆರೆಯಿತು. ಇದು ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ಆಡಿದ 4 ಪಂದ್ಯಗಳಲ್ಲಿ ಭಾರತ ಸಾಧಿಸಿದ ಮೊದಲ ಗೆಲುವು.

ಭಾರತ ಸತತ 7 ಟಿ20 ಪಂದ್ಯಗಳನ್ನು ಜಯಿಸಿ ತನ್ನ ಸತತ ಗೆಲುವಿನ ದಾಖಲೆಯನ್ನು ಸರಿದೂಗಿಸಿತು. ಇದಕ್ಕೂ ಮುನ್ನ 2016ರ ಹಾಗೂ 2012-14ರ ನಡುವಿನಲ್ಲಿ ಭಾರತ ಸತತ 7 ಪಂದ್ಯಗಳನ್ನು ಜಯಿಸಿತ್ತು.

ಕುಲದೀಪ್‌ ಯಾದವ್‌ ಟಿ20 ಪಂದ್ಯವೊಂದರಲ್ಲಿ 5 ವಿಕೆಟ್‌ ಕಿತ್ತದ ವಿಶ್ವದ ಮೊದಲ ಚೈನಾಮನ್‌ ಬೌಲರ್‌ (24ಕ್ಕೆ 5).

ಇದು ಸೆಂಚುರಿ ಹಾಗೂ 5 ವಿಕೆಟ್‌ ಸಾಧನೆಯನ್ನೊಳಗೊಂಡ ಕೇವಲ 2ನೇ ಟಿ20 ಇನ್ನಿಂಗ್ಸ್‌ ಆಗಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧದ 2015ರ ಡರ್ಬನ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಾರ್ನೆ ವಾನ್‌ ವಿಕ್‌ ಅಜೇಯ 114 ರನ್‌ ಹಾಗೂ ಡೇವಿಡ್‌ ವೀಸ್‌ 23ಕ್ಕೆ 5 ವಿಕೆಟ್‌ ಉರುಳಿಸಿದ್ದರು.

ಕೆ.ಎಲ್‌. ರಾಹುಲ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2ನೇ ಶತಕ ಹೊಡೆದರು (ಅಜೇಯ 101). ರಾಹುಲ್‌ ಚೇಸಿಂಗ್‌ ವೇಳೆ 2 ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌. ಅವರ ಮೊದಲ ಶತಕ 2016ರಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಲಾಡರ್‌ಹಿಲ್‌ ಪಂದ್ಯದಲ್ಲಿ ದಾಖಲಾಗಿತ್ತು (ಅಜೇಯ 110).

ರಾಹುಲ್‌ 2 ಟಿ20 ಶತಕ ಬಾರಿಸಿದ ವಿಶ್ವದ 9ನೇ ಹಾಗೂ ಭಾರತದ 2ನೇ ಬ್ಯಾಟ್ಸ್‌ಮನ್‌. ರೋಹಿತ್‌ ಶರ್ಮ ಮೊದಲಿಗ.

ರಾಹುಲ್‌-ರೋಹಿತ್‌ ಶರ್ಮ ಜೋಡಿ 7 ಇನ್ನಿಂಗ್ಸ್‌ಗಳಲ್ಲಿ 505 ರನ್‌ ಪೇರಿಸಿತು (ಸರಾಸರಿ 72.14). ಇದರಲ್ಲಿ 2 ಶತಕದ ಹಾಗೂ 2 ಅರ್ಧ ಶತಕದ ಜತೆಯಾಟಗಳು ಸೇರಿವೆ.

ರಾಹುಲ್‌-ರೋಹಿತ್‌ 500 ರನ್‌ ಒಟ್ಟುಗೂಡಿಸಿದ 42ನೇ ಜೋಡಿ.

ಇಂಗ್ಲೆಂಡ್‌ ಸರದಿಯಲ್ಲಿ 3 “ಗೋಲ್ಡನ್‌ ಡಕ್‌’ ದಾಖಲಾದವು (ಬೇರ್‌ಸ್ಟೊ, ರೂಟ್‌ ಮತ್ತು ಜೋರ್ಡನ್‌). ಟಿ20 ಇನ್ನಿಂಗ್ಸ್‌ ಒಂದರಲ್ಲಿ 3 ಹಾಗೂ ಹೆಚ್ಚಿನ ಆಟಗಾರರು ಗೋಲ್ಡನ್‌ ಡಕ್‌ ಅವಮಾನಕ್ಕೆ ಸಿಲುಕಿದ 5ನೇ ಸಂದರ್ಭ ಇದಾಗಿದೆ.

ಟಿ20 ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಆಟಗಾರರು ಖಾತೆ ತೆರೆಯುವ ಮೊದಲೇ ಸ್ಟಂಪ್ಡ್ ಔಟ್‌ ಆದರು (ಬೇರ್‌ಸ್ಟೊ ಮತ್ತು ರೂಟ್‌).

ಇಯಾನ್‌ ಮಾರ್ಗನ್‌ ಅತ್ಯಧಿಕ 31 ಪಂದ್ಯಗಳಲ್ಲಿ ಇಂಗ್ಲೆಂಡ್‌ ನಾಯಕತ್ವ ವಹಿಸಿದ ದಾಖಲೆ ಸ್ಥಾಪಿಸಿದರು. ಪಾಲ್‌ ಕಾಲಿಂಗ್‌ವುಡ್‌ ಅವರ 30 ಪಂದ್ಯಗಳ ನಾಯಕತ್ವದ ದಾಖಲೆ ಪತನಗೊಂಡಿತು.

ವಿರಾಟ್‌ ಕೊಹ್ಲಿ ಟಿ20ಯಲ್ಲಿ 2 ಸಾವಿರ ರನ್‌ ಪೂರೈಸಿದ ವಿಶ್ವದ 4ನೇ, ಭಾರತದ ಮೊದಲ ಕ್ರಿಕೆಟಿಗನೆನಿಸಿದರು. 

ಕೊಹ್ಲಿ ಅತೀ ಕಡಿಮೆ 56 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ ಪೇರಿಸಿ ದಾಖಲೆ ಸ್ಥಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next