Advertisement

ವಿಸ್ತರಣಾವಾದಿ ಚೀನಕ್ಕೆ ತಕ್ಕ ಪ್ರತ್ಯುತ್ತರ ಅಗತ್ಯ

12:54 AM Jan 20, 2021 | Team Udayavani |

ಅರುಣಾಚಲ ಪ್ರದೇಶ ತನ್ನ ಭಾಗವೆಂದು ವಾದಿಸುತ್ತಾ ಬಂದಿರುವ ಚೀನ ಈಗ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಒಳಭಾಗದಲ್ಲಿ ಮನೆಗಳನ್ನು ನಿರ್ಮಿಸಿರುವ ಉಪಗ್ರಹ ಚಿತ್ರಗಳು ಹೊರಬಿದ್ದಿವೆ. ತ್ಸಾರಿ ಸು ನದಿ ದಡದಲ್ಲಿ ಒಂದು ವರ್ಷದಲ್ಲಿ ಈ ಹಳ್ಳಿ ಎದ್ದು ನಿಂತಿದೆ.

Advertisement

ವಿದೇಶಾಂಗ ಇಲಾಖೆ, “ಕಳೆದ ಕೆಲವು ವರ್ಷಗಳಿಂದ ಚೀನ ಗಡಿ ಭಾಗದಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸುತ್ತಾ ಬಂದಿದೆ, ನಮ್ಮ ಸರಕಾರವೂ ಗಡಿಗ್ರಾಮಗಳಲ್ಲಿ ರಸ್ತೆ, ಸೇತುವೆಯಂಥ ಮೂಲಸೌಕರ್ಯ ನಿರ್ಮಿಸಿದೆ’ ಎಂಬ ಹೇಳಿಕೆ ನೀಡಿದೆಯಾದರೂ, ಅಷ್ಟೊಂದು ಕಟು ಪ್ರತಿಕ್ರಿಯೆಯೇನೂ ಹೊರಬಂದಿಲ್ಲ. ಹೀಗಾಗಿ, ಈ ವಿಷಯವಾಗಿ ರಾಜಕೀಯ ಭುಗಿಲೆದ್ದಿದ್ದು, ಕೇಂದ್ರ ಸರಕಾರವನ್ನು ಕಾಂಗ್ರೆಸ್‌ ನಾಯಕರು ಪ್ರಶ್ನಿಸಲಾರಂಭಿಸಿದ್ದಾರೆ.

ಚೀನದ ವಿಸ್ತರಣಾವಾದಿ ಬುದ್ಧಿಯ ಅರಿವಿರುವವರಿಗೆ ಅದರ ಕುತಂತ್ರದ ನಡೆಗಳು ಅಪರಿಚಿತವೇನಲ್ಲ. ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಪ್ರತೀ ರಾಷ್ಟ್ರದ ಜತೆಗೂ ಈ ರೀತಿಯ ಬಿಕ್ಕಟ್ಟನ್ನು ಅದು ಸೃಷ್ಟಿಸಿಕೊಳ್ಳುತ್ತಿರುತ್ತದೆ. ಈಗ ಅರುಣಾಚಲ ಪ್ರದೇಶದಲ್ಲಿ ಅದು ನಿರ್ಮಾಣ ಕಾರ್ಯ ನಡೆಸಿರುವ  ಜಾಗದ ಬಗ್ಗೆಯೂ ಚರ್ಚೆಗಳು ನಡೆದಿವೆ. ಇದು ವಿವಾದಿತ ಪ್ರದೇಶವಾಗಿದ್ದು, ಚೀನದ ನಡೆ ಅಕ್ರಮವಾಗಿದೆ ಎಂದು ರಕ್ಷಣ ಪರಿಣತರು ಹೇಳುತ್ತಿದ್ದಾರೆ, ಇನ್ನೊಂದೆಡೆ ಈ ಪ್ರದೇಶವು 1959ರಿಂದಲೂ ಚೀನದ ಹಿಡಿತದಲ್ಲೇ ಇವೆ ಎನ್ನುತ್ತಿವೆ ವರದಿಗಳು. ಕೆಲವು ದಶಕಗಳ ಹಿಂದೆಯೇ, ಈ ಪ್ರದೇಶದಲ್ಲಿ ಚೀನದ ಮಿಲಿಟರಿ ಪೋಸ್ಟ್‌ಗಳು ಇದ್ದವು ಎನ್ನಲಾಗುತ್ತದೆ.

ಅಲ್ಲದೇ ಈಗ ಚೀನ ನಿರ್ಮಿಸಿರುವ ಹಳ್ಳಿಯಿಂದ ಕೇವಲ 1 ಕಿಲೋಮೀಟರ್‌ ಆ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೀನದ ಮಿಲಿಟರಿ ಪೋಸ್ಟ್‌ಗಳೂ ಇವೆಯಂತೆ. ಈ ಕುರಿತು ಈ ಹಿಂದೆಯೇ ಮಾತನಾಡಿದ್ದ, ಅರುಣಾಚಲದ ಬಿಜೆಪಿ ಸಂಸದ ಟಾಪಿರ್‌ ಗೌÌ, 1980ರಿಂದಲೂ ಇಲ್ಲಿಯವರೆಗೂ ಪಿಎಲ್‌ಎ ಈ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾ ಬಂದಿದೆ. ಕಾಂಗ್ರೆಸ್‌ ಸಮಯದಲ್ಲೇ ಈ ಭೂಭಾಗವನ್ನು ಚೀನ ಆಕ್ರಮಿಸಿದೆ. ತ್ಸಾರಿ  ಸು ನದಿ ದಂಡೆಯಲ್ಲಿ ಚಿಕ್ಕ ಜಲವಿದ್ಯುತ್‌ ಯೋಜನೆಯನ್ನೂ ಚೀನ ನಿರ್ಮಿಸಿದೆ ಎಂದಿದ್ದಾರೆ. ಒಟ್ಟಲ್ಲಿ, ಬಿಜೆಪಿ-ಕಾಂಗ್ರೆಸ್‌ನ ಆರೋಪ ಪ್ರತ್ಯಾರೋಪಗಳೇನೇ ಇದ್ದರೂ, ಗಡಿ ಭಾಗದಲ್ಲಿ ಕೆಲವು ತಿಂಗಳುಗಳಿಂದ ಭಾರತ -ಚೀನ ನಡುವೆ ಬಿಕ್ಕಟ್ಟು ಮುಂದುವರಿದಿರುವಾಗಲೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಆತಂಕದ ವಿಚಾರವೇ ಸರಿ.

ಇದರರ್ಥವಿಷ್ಟೇ, ಚೀನದೊಂದಿಗೆ ಎಷ್ಟೇ ಸಂಧಾನ ಮಾತುಕತೆಗಳನ್ನಾಡಿದರೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದರ ಬಣ್ಣ ಬಯಲು ಮಾಡಿದರೂ ಅದು ತನ್ನ ವಿಸ್ತರಣಾವಾದಿ ಗುಣವನ್ನು ನಿಲ್ಲಿಸಲು ಸಿದ್ಧವಿಲ್ಲ ಎನ್ನುವುದು. ಚೀನಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರ ಕೊಡುವುದು ಅತ್ಯವಶ್ಯಕ. ಈಗಾಗಲೇ ಭಾರತವು ಗಡಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿ ಸಿದ್ಧವಾಗಿ ನಿಂತಿದೆ. ಅಂತೆಯೇ, ರಕ್ಷಣ ಇಲಾಖೆಯಡಿ ಬರುವ ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ ಸಹ ಗಡಿ ಭಾಗಗಳಲ್ಲಿ ವೇಗವಾಗಿ ಸೇತುವೆಗಳು, ರಸ್ತೆಗಳು ಹಾಗೂ ಇತರ ಮೂಲಸೌಕರ್ಯಾಭಿವೃದ್ಧಿಗಳ ನಿರ್ಮಾಣದಲ್ಲಿ ತೊಡಗಿದ್ದು ಈ ವಿಚಾರದಲ್ಲಿ ಭಾರತ ಯಾವುದೇ ಕಾರಣಕ್ಕೂ ಹಿಂದಡಿಯಿಡಬಾರದು. ಈಗ ವಿವಾದಿತ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮನೆಗಳ ಕುರಿತೂ ರಕ್ಷಣ ಇಲಾಖೆ ಗಂಭೀರವಾಗಿ ಯೋಚಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next