Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 324 ರನ್ ಸೂರೆಗೈದಿತು. ಜವಾಬಿತ್ತ ಬಾಂಗ್ಲಾದೇಶ ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ದಿಕ್ಕಾಪಾಲಾಗಿ 23.5 ಓವರ್‌ಗಳಲ್ಲಿ 84 ರನ್ನಿಗೆ ರನ್ನಿಗೆ ಸರ್ವಪತನ ಕಂಡಿತು.
ನ್ಯೂಜಿಲ್ಯಾಂಡ್ ವಿರುದ್ಧ ಮಳೆಯಿಂದಾಗಿ ಪರಿಪೂರ್ಣ ಬ್ಯಾಟಿಂಗ್ ನಡೆಸದ ಭಾರತ, ಬಾಂಗ್ಲಾದೇಶ ವಿರುದ್ಧ ಈ ಕೊರತೆಯನ್ನು ನೀಗಿಸಿಕೊಂಡಿತು. ಅಲ್ಲಿ ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ನಾಯಕ ಕೊಹ್ಲಿ ಬಾಂಗ್ಲಾ ವಿರುದ್ಧ ಆಡಲಿಳಿಯಲಿಲ್ಲ. ಕಿವೀಸ್ ವಿರುದ್ಧ ಖಾತೆ ತೆರೆಯದೇ ಹೋಗಿದ್ದ ದಿನೇಶ್ ಕಾರ್ತಿಕ್ ಇಲ್ಲಿ ಸರ್ವಾಧಿಕ 94 ರನ್ ಬಾರಿಸಿ ನಿವೃತ್ತರಾದರು. ಅವರ 77 ಎಸೆತಗಳ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು.
Related Articles
Advertisement
ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ “ಕೆನ್ನಿಂಗ್ಟನ್ ಓವಲ್’ನ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಬಡಿದಟ್ಟಿದರು. ಪಾಂಡ್ಯ ಸಾಹಸದಿಂದಾಗಿ ಭಾರತದ ಮೊತ್ತ ಮುನ್ನೂರರ ಗಡಿ ದಾಟಿ ಮುನ್ನುಗ್ಗುವಂತಾಯಿತು. 54 ಎಸೆತ ಎದುರಿಸಿದ ಪಾಂಡ್ಯ 4 ಸಿಕ್ಸರ್, 6 ಬೌಂಡರಿ ನೆರವಿನಿಂದ 80 ರನ್ ಹೊಡೆದು ಅಜೇಯರಾಗಿ ಉಳಿದರು. ಇದರಲ್ಲಿ ಒಂದು ಸಿಕ್ಸರ್ ಅಂತಿಮ ಎಸೆತದಲ್ಲಿ ಬಂದಿತ್ತು. ರವೀಂದ್ರ ಜಡೇಜ 32 ರನ್ನುಗಳ ಕೊಡುಗೆ ಸಲ್ಲಿಸಿದರು (36 ಎಸೆತ, 1 ಸಿಕ್ಸರ್).
ಬಾಂಗ್ಲಾದೇಶ ತೀವ್ರ ಕುಸಿತ ದೊಡ್ಡ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಬಾಂಗ್ಲಾದೇಶಕ್ಕೆ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಭುವನೇಶ್ವರ್ ಕುಮಾರ್ (13ಕ್ಕೆ 3), ಉಮೇಶ್ ಯಾದವ್ (16ಕ್ಕೆ 3) ಘಾತಕ ದಾಳಿ ಸಂಘಟಿಸಿ ಬಾಂಗ್ಲಾ ಕತೆ ಮುಗಿಸಿದರು. ಶಮಿ, ಬುಮ್ರಾ, ಪಾಂಡ್ಯ, ಅಶ್ವಿನ್ ಒಂದೊಂದು ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 324 (ಕಾರ್ತಿಕ್ 94, ಪಾಂಡ್ಯ ಔಟಾಗದೆ 80, ಧವನ್ 60, ರುಬೆಲ್ 50ಕ್ಕೆ 3, ಸುಂಝಾಮುಲ್ 74ಕ್ಕೆ 2). ಬಾಂಗ್ಲಾದೇಶ-23.4 ಓವರ್‌ಗಳಲ್ಲಿ 84 (ಮಿರಾಜ್ 24, ಸುಂಝಾಮುಲ್ 18, ಭುವನೇಶ್ವರ್ 13ಕ್ಕೆ 3, ಉಮೇಶ್ ಯಾದವ್ 16ಕ್ಕೆ 3).