Advertisement

ಭಾರತ-ಬಾಂಗ್ಲಾದೇಶ ಟೆಸ್ಟ್‌ : ಕುಲ್‌ ದೀಪ್‌, ಪೂಜಾರ ಕಮಾಲ್; ಭಾರತಕ್ಕೆ ಭರ್ಜರಿ ಜಯ

10:48 AM Dec 18, 2022 | Team Udayavani |

ಚತ್ತೋಗ್ರಾಮ್‌: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 188 ರನ್‌ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

Advertisement

ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದಿದ್ದ ಬಾಂಗ್ಲಾ, 4ನೇ ದಿನದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 272 ರನ್‌ ಗಳಿಸಿತ್ತು. ವಿಕೆಟ್‌ ಉಳಿಸಿಕೊಂಡು ಕೊನೆಯ ದಿನ ಬಾಂಗ್ಲಾ 241 ರನ್‌ ಪೇರಿಸಬೇಕಿತ್ತು.ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಬಾಂಗ್ಲಾ 324 ರನ್ನಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಭಾರತದ ಆಲ್‌ ರೌಂಡ್‌ ಆಟಕ್ಕೆ ಶರಣಾಗಿದೆ.

ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ ಚೇತೇಶ್ವರ್ ಪೂಜಾರಾ‌ 90 ರನ್‌, ಶ್ರೇಯಸ್‌ ಅಯ್ಯರ್‌ ಅವರ 86 ರನ್‌, ಅಶ್ವಿನ್‌ ಅವರ 58, ರಿಷಬ್‌ ಪಂತ್‌ 46 ರನ್ ಹಾಗೂ ಕೊನೆಯಲ್ಲಿ ಕುಲ್‌ ದೀಪ್‌ ಅವರ 40 ಸಹಾಯದಿಂದ 404‌ ರನ್‌ ಗಳಿಸಿತ್ತು.

ಮೊದಲ ಇನ್ನಿಂಗ್ಸ್‌ ರನ್‌ ಬೆನ್ನಟ್ಟಿದ ಬಾಂಗ್ಲಾ ಆಟಗಾರರು 150 ರನ್‌ ಗೆ ಸರ್ವಪತನವಾಯಿತು. ಕುಲ್‌ ದೀಪ್‌ 5 ವಿಕೆಟ್‌ ಹಾಗೂ ಸಿರಾಜ್‌ 3 ವಿಕೆಟ್‌ ಪಡೆದು ಶ್ರೇಷ್ಠಮಟ್ಟದ ಬೌಲಿಂಗ್‌ ನಿಭಾಯಿಸಿದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಕಿಂಗ್ ಪಿನ್ ಆರ್‌.ಡಿ.ಪಾಟೀಲ್ ಜೈಲಿನಿಂದ ಬಿಡುಗಡೆ

Advertisement

ಎರಡನೇ ಇನ್ನಿಂಗ್ಸ್‌ ನಲ್ಲೂ ಭರ್ಜರಿ ಬ್ಯಾಟ್‌ ಮಾಡಿದ ಪೂಜಾರ 102 ರನ್‌ ತಂಡಕ್ಕೆ ನೀಡಿದರು. ಶುಭ್‌ಮನ್ ಗಿಲ್ ಚೊಚ್ಚಲ 110 ಗಳಿಸಿದರು.  ಎರಡನೇ ಇನ್ನಿಂಗ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ ಭಾರತವು ಡಿಕ್ಲೇರ್ ಮಾಡಿಕೊಂಡು, ಬಾಂಗ್ಲಾಗೆ 513 ರನ್ ಗಳ ಗೆಲುವಿನ ಗುರಿ ನೀಡಿತ್ತು.

4ನೇ ದಿನ ಬಾಂಗ್ಲಾದ ಎಡಗೈ ಆರಂಭಕಾರ ಝಾಕಿರ್‌ ಹಸನ್‌ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸಿದ್ದು ಬಾಂಗ್ಲಾ ಆಸರೆಯಾಯಿತು. ನಜ್ಮುಲ್‌ ಅವರನ್ನು ಕೀಪರ್‌ ಪಂತ್‌ ಕೈಗೆ ಕ್ಯಾಚ್‌ ಕೊಡಿಸಿದ ಉಮೇಶ್‌ ಯಾದವ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಬಳಿಕ ಬೆನ್ನು ಬೆನ್ನಿಗೆ ವಿಕೆಟ್‌ ಉರುಳುತ್ತ ಹೋಯಿತು. ಯಾಸಿರ್‌ ಅಲಿ (5), ಲಿಟನ್‌ ದಾಸ್‌ (19), ರಹೀಂ (23), ನುರುಲ್‌ ಹಸನ್‌ (3) ಬೇಗನೇ ಪೆವಿಲಿಯನ್‌ ಸೇರಿಕೊಂಡರು.

ಶಾಕಿಬ್ ಅಲ್ ಹಸನ್ ಕಪ್ತಾನನಾಗಿ ಹೆಚ್ಚು ಹೊತ್ತು ಕ್ರಿಸ್‌ ನಲ್ಲಿ ನಿಂತರೂ ಅವರಿಗೆ ಜೊತೆಯಾಟ ನೀಡುವಲ್ಲಿ ಉಳಿದವರು ವಿಫಲರಾದರು.

ಅಂತಿಮವಾಗಿ 324 ರನ್ನಿಗೆ ಬಾಂಗ್ಲಾ ಸರ್ವಪತನ ಕಂಡಿತು. ಟೀಮ್‌ ಇಂಡಿಯಾದ ಪರವಾಗಿ ಅಕ್ಷರ್‌ ಪಟೇಲ್‌ 4 ವಿಕೆಟ್‌ ಪಡೆದರೆ, ಕುಲ್‌ ದೀಪ್‌ ಯಾದವ್‌ 3 ಪ್ರಮುಖ ವಿಕೆಟ್‌ ಗಳನ್ನು ಪಡೆದರು. ಕುಲ್‌ ದೀಪ್‌ ಯಾದವ್‌ ಎರಡೂ  ಇನ್ನಿಂಗ್ಸ್‌ ಸೇರಿ 8 ವಿಕೆಟ್‌ ಗಳನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next