ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023 ಕೂಟ ಮುಗಿದ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ. ನವೆಂಬರ್ 19ರಂದು ವಿಶ್ವಕಪ್ ಫೈನಲ್ ನಡೆಯಲಿದ್ದು, ಇದಾದ ನಾಲ್ಕು ದಿನಗಳ ಬಳಿಕ ಅಂದರೆ ನವೆಂಬರ್ 23ರಿಂದ ಆಸೀಸ್ ವಿರುದ್ಧದ ಸರಣಿ ಆರಂಭವಾಗಲಿದೆ. ಈ ಟಿ20 ಸರಣಿಗೆ ಭಾರತದ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ ಆಡುವುದು ಖಚಿತವಿಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್ ನಂತರ ರೋಹಿತ್ ಮತ್ತು ವಿರಾಟ್ ಭಾರತದ ಪರ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ.
ಸದ್ಯ ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಈ ಸರಣಿಯಲ್ಲಿ ಆಡುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕಿದೆ. ಸದ್ಯ ಅವರೇ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ:ಈ ದೇಶಕ್ಕೆ ಭಾರತ, ಆಫ್ರಿಕಾ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ 1 ಸಾವಿರ ಡಾಲರ್ ತೆರಿಗೆ!
ಸೂರ್ಯಕುಮಾರ್ ಯಾದವ್ ಅವರು ಟಿ20 ಸರಣಿ ಆಡಲಿದ್ದಾರೆ ಎಂದಿದೆ ವರದಿ. ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ಟಿ20 ವಿಶ್ವಕಪ್ ನಡೆಯುವ ಕಾರಣ ಏಕದಿನ ವಿಶ್ವಕಪ್ ಬಳಿಕ ಭಾರತ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲಿದೆ.
ಕೋಚ್ ಯಾರು?: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಈ ವಿಶ್ವಕಪ್ ಗೆ ಅಂತ್ಯವಾಗುತ್ತದೆ. ಹೀಗಾಗಿ ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಆಸೀಸ್ ವಿರುದ್ಧದ ಸರಣಿಯಲ್ಲಿ ತಂಡದ ಕೋಚ್ ಆಗುವ ಸಾಧ್ಯತೆಯಿದೆ.