Advertisement

ಅಡಿಲೇಡ್‌: ಮೇಲೆದ್ದು ನಿಂತ‌ ಭಾರತ

09:00 AM Dec 09, 2018 | |

ಅಡಿಲೇಡ್‌: ಆಸ್ಟ್ರೇಲಿಯ ಪ್ರವಾಸದಲ್ಲಿ ಅಪರೂಪದ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಭಾರತ, ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಚಾಲಕನ ಸ್ಥಾನದಲ್ಲಿ ಕುಳಿತಿದೆ. ಇನ್ನೂ 7 ವಿಕೆಟ್‌ಗಳನ್ನು ಕೈಲಿರಿಸಿಕೊಂಡು 166 ರನ್ನುಗಳ ಲೀಡ್‌ ಗಳಿಸಿದ್ದು, ಇದನ್ನು ಮುನ್ನೂರರಾಚೆ ವಿಸ್ತರಿಸಿದರೆ ಟೀಮ್‌ ಇಂಡಿಯಾಕ್ಕೆ ಗೆಲುವಿನ ಬಾಗಿಲು ತೆರೆಯಲ್ಪಡುವ ಎಲ್ಲ ಸಾಧ್ಯತೆ ಇದೆ.

Advertisement

ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದು, ಭಾರತ ರವಿವಾರ ಚಹಾ ವಿರಾಮದ ತನಕ ಬ್ಯಾಟಿಂಗ್‌ ನಡೆಸುವುದು ಅಗತ್ಯ. ಅಂತಿಮ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಕಠಿನವಾಗಿ ಪರಿಣಮಿಸುವುದರಿಂದ ಆಸ್ಟ್ರೇಲಿಯ ಚೇಸಿಂಗ್‌ ವೇಳೆ ಸಂಕಟಕ್ಕೆ ಸಿಲುಕಬಹುದು ಎಂಬುದೊಂದು ಲೆಕ್ಕಾಚಾರ.

ಮಳೆಯಿಂದ ಅಡಚಣೆ
7ಕ್ಕೆ 191 ರನ್‌ ಮಾಡಿದಲ್ಲಿಂದ ಶನಿವಾರದ ಬ್ಯಾಟಿಂಗ್‌ ಮುಂದುವರಿಸಿದ ಆಸ್ಟ್ರೇಲಿಯ 235ಕ್ಕೆ ಆಲೌಟ್‌ ಆಯಿತು. ಆದರೆ ಮಳೆ ಹಾಗೂ ಒದ್ದೆ ಅಂಗಳದಿಂದಾಗಿ ಆರಂಭದಲ್ಲೇ ಆಟಕ್ಕೆ ಅಡಚಣೆಯಾಯಿತು. 45 ನಿಮಿಷ ವಿಳಂಬವಾಗಿ ದಿನದಾಟ ಮೊದಲ್ಗೊಂಡಿತು. ಬಳಿಕ ಆಸೀಸ್‌ 8ಕ್ಕೆ 204 ರನ್‌ ಮಾಡಿದಾಗಲೂ ಮಳೆ ಸುರಿಯಿತು. ಹೀಗಾಗಿ ಮೊದಲ ಅವಧಿಯಲ್ಲಿ ಸಾಧ್ಯವಾದದ್ದು 10.4 ಓವರ್‌ಗಳ ಆಟ ಮಾತ್ರ. ಲಂಚ್‌ ವೇಳೆಗೆ ಸರಿಯಾಗಿ ಆತಿಥೇಯರ ಮೊದಲ ಇನ್ನಿಂಗ್ಸ್‌ 235ಕ್ಕೆ ಮುಗಿಯಿತು.

ಕೊನೆಯ 3 ವಿಕೆಟ್‌ಗಳಲ್ಲಿ ಮೊದಲನೆಯದು ಬುಮ್ರಾ ಪಾಲಾಯಿತು. ಸ್ಕೋರ್‌ 204ಕ್ಕೆ ಏರಿದಾಗ 15 ರನ್‌ ಮಾಡಿದ ಸ್ಟಾರ್ಕ್‌ ಪೆವಿಲಿಯನ್‌ ಸೇರಿಕೊಂಡರು. ಟ್ರ್ಯಾವಿಸ್‌ ಹೆಡ್‌ ಮತ್ತು ಜೋಶ್‌ ಹ್ಯಾಝಲ್‌ವುಡ್‌ ಅವರನ್ನು ಮೊಹಮ್ಮದ್‌ ಶಮಿ ಸತತ ಎಸೆತಗಳಲ್ಲಿ ಕೆಡವಿದರು. ಬುಮ್ರಾ, ಅಶ್ವಿ‌ನ್‌ ತಲಾ 3 ವಿಕೆಟ್‌; ಇಶಾಂತ್‌ ಮತ್ತು ಶಮಿ ತಲಾ 2 ವಿಕೆಟ್‌ ಉರುಳಿಸಿದರು. 61 ರನ್‌ ಮಾಡಿ ಭಾರತಕ್ಕೆ ತಲೆನೋವಾಗಿದ್ದ ಟ್ರ್ಯಾವಿಸ್‌ ಹೆಡ್‌ 72ರ ತನಕ ಸಾಗಿದರು (167 ಎಸೆತ, 6 ಬೌಂಡರಿ). ಸ್ಟಾರ್ಕ್‌ 15 ರನ್‌ ಮಾಡಿದರೆ, ನಥನ್‌ ಲಿಯೋನ್‌ 24 ರನ್‌ ಮಾಡಿ ಅಜೇಯರಾಗಿ ಉಳಿದರು.

ಆರಂಭಿಕರ ಭದ್ರ ಅಡಿಪಾಯ
ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ಜವಾಬ್ದಾರಿಯುತ ಆಟವಾಡಿ 3 ವಿಕೆಟಗೆ 151 ರನ್‌ ಪೇರಿಸಿದೆ. ಕೆ.ಎಲ್‌. ರಾಹುಲ್‌ (44), ಮುರಳಿ ವಿಜಯ್‌ (18) ಮತ್ತು ವಿರಾಟ್‌ ಕೊಹ್ಲಿ (34) ಈಗಾಗಲೇ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಮೊದಲ ಸರದಿಯ ಶತಕವೀರ ಪೂಜಾರ 40 ರನ್‌ ಹಾಗೂ ಅಜಿಂಕ್ಯ ರಹಾನೆ ಒಂದು ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ರಾಹುಲ್‌-ವಿಜಯ್‌ ಉತ್ತಮ ಆರಂಭ
ಮೊದಲ ಸರದಿಯಲ್ಲಿ ವಿಫ‌ಲರಾದ ರಾಹುಲ್‌-ವಿಜಯ್‌ 18.2 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 63 ರನ್‌ ಪೇರಿಸಿ ಭಾರತವನ್ನು ಹೋರಾಟಕ್ಕೆ ಅಣಿಗೊಳಿಸಿದರು. ರಾಹುಲ್‌ 44 ರನ್‌ ಬಾರಿಸಿ ಗಮನ ಸೆಳೆದರು. 67 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ನಿಧಾನ ಗತಿಯಿಂದ ಸಾಗಿದ ಕೊಹ್ಲಿ ದಿನದಾಟದ ಕೊನೆಯ ಹಂತದಲ್ಲಿ ಲಿಯೋನ್‌ ಮೋಡಿಗೆ ಸಿಲುಕಿದರು. ಕಪ್ತಾನನ ಗಳಿಕೆ 104 ಎಸೆತಗಳಿಂದ 34 ರನ್‌ (3 ಬೌಂಡರಿ).

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌:    250
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
(ನಿನ್ನೆ 7 ವಿಕೆಟಿಗೆ 191)

ಟ್ರ್ಯಾವಿಸ್‌ ಹೆಡ್‌    ಸಿ ಪಂತ್‌ ಬಿ ಶಮಿ    72
ಮಿಚೆಲ್‌ ಸ್ಟಾರ್ಕ್‌    ಸಿ ಪಂತ್‌ ಬಿ ಬುಮ್ರಾ    15
ನಥನ್‌ ಲಿಯೋನ್‌    ಔಟಾಗದೆ    24
ಜೋಶ್‌ ಹ್ಯಾಝಲ್‌ವುಡ್‌    ಸಿ ಪಂತ್‌ ಬಿ ಶಮಿ    0

ಇತರ        19
ಒಟ್ಟು  (ಆಲೌಟ್‌)        235
ವಿಕೆಟ್‌ ಪತನ: 8-204, 9-235.

ಬೌಲಿಂಗ್‌:
ಇಶಾಂತ್‌ ಶರ್ಮ        20-6-47-2
ಜಸ್‌ಪ್ರೀತ್‌ ಬುಮ್ರಾ        24-9-47-3
ಮೊಹಮ್ಮದ್‌ ಶಮಿ        16.4-6-58-2
ಆರ್‌. ಅಶ್ವಿ‌ನ್‌        34-9-57-3
ಮುರಳಿ ವಿಜಯ್‌        4-1-10-0

ಭಾರತ ದ್ವಿತೀಯ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌    ಸಿ ಪೇನ್‌ ಬಿ ಹ್ಯಾಝಲ್‌ವುಡ್‌    44
ಮುರಳಿ ವಿಜಯ್‌    ಸಿ ಹ್ಯಾಂಡ್ಸ್‌ಕಾಂಬ್‌ ಬಿ ಸ್ಟಾರ್ಕ್‌    18
ಚೇತೇಶ್ವರ್‌ ಪೂಜಾರ    ಔಟಾಗದೆ    40
ವಿರಾಟ್‌ ಕೊಹ್ಲಿ    ಸಿ ಫಿಂಚ್‌ ಬಿ ಲಿಯೋನ್‌    34
ಆಜಿಂಕ್ಯ ರಹಾನೆ    ಔಟಾಗದೆ    1

ಇತರ        14
ಒಟ್ಟು  (3 ವಿಕೆಟಿಗೆ)        151
ವಿಕೆಟ್‌ ಪತನ: 1-63, 2-76, 3-147.

ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        10-3-18-1
ಜೋಶ್‌ ಹ್ಯಾಝಲ್‌ವುಡ್‌        16-9-25-1
ಪ್ಯಾಟ್‌ ಕಮಿನ್ಸ್‌        11-4-33-0
ನಥನ್‌ ಲಿಯೋನ್‌        22-3-48-1
ಟ್ರ್ಯಾವಿಸ್‌ ಹೆಡ್‌        2-0-13-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ರಿಷಬ್‌ ಪಂತ್‌ 6 ಕ್ಯಾಚ್‌ ಪಡೆದರು. ಇದು ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಭಾರತೀಯ ವಿಕೆಟ್‌ ಕೀಪರ್‌ ಪಡೆದ ಸರ್ವಾಧಿಕ ಕ್ಯಾಚ್‌ಗಳ ಜಂಟಿ ದಾಖಲೆ. ನ್ಯೂಜಿಲ್ಯಾಂಡ್‌ ಎದುರಿನ 2009ರ ವೆಲ್ಲಿಂಗ್ಟನ್‌ ಟೆಸ್ಟ್‌ನಲ್ಲಿ  ಮಹೇಂದ್ರ ಸಿಂಗ್‌ ಧೋನಿ ಕೂಡ 6 ಕ್ಯಾಚ್‌ ಪಡೆದಿದ್ದರು.

ವಿರಾಟ್‌ ಕೊಹ್ಲಿ 18 ಇನ್ನಿಂಗ್ಸ್‌ಗಳಿಂದ ಆಸ್ಟ್ರೇಲಿಯದಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. ಕಡಿಮೆ ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲಿ ಇದು ಭಾರತೀಯ ದಾಖಲೆ. ವಿದೇಶಿ ಬ್ಯಾಟ್ಸ್‌ಮನ್‌ಗಳ ಒಟ್ಟಾರೆ ಸಾಧನೆಯಲ್ಲಿ ಕೊಹ್ಲಿಗೆ 5ನೇ ಸ್ಥಾನ.

ಕೊಹ್ಲಿ ಆಸ್ಟ್ರೇಲಿಯದಲ್ಲಿ ಸಾವಿರ ರನ್‌ ಗಳಿಸಿದ ಭಾರತದ 4ನೇ ಬ್ಯಾಟ್ಸ್‌ಮನ್‌. ಉಳಿದ ವರೆಂದರೆ ತೆಂಡುಲ್ಕರ್‌, ದ್ರಾವಿಡ್‌, ಲಕ್ಷ್ಮಣ್‌.

ಕೊಹ್ಲಿ ವಿದೇಶಗಳಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ ಮೊದಲ ನಾಯಕನಾಗಿ ಮೂಡಿಬಂದರು.

ಕೊಹ್ಲಿ ನಂ.1 ಬ್ಯಾಟ್ಸ್‌ಮನ್‌ ಆಗಿ ಟೆಸ್ಟ್‌ ಹಾಗೂ ಏಕದಿನಗಳೆರಡರಲ್ಲೂ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾವಿರ ರನ್‌ ಪೇರಿಸಿದ ಸಾಧನೆಗೈದರು.

ನಥನ್‌ ಲಿಯೋನ್‌ ಅತೀ ಹೆಚ್ಚು 6 ಸಲ ವಿರಾಟ್‌ ಕೊಹ್ಲಿ ವಿಕೆಟ್‌ ಉರುಳಿಸಿದರು. ಜೇಮ್ಸ್‌ ಆ್ಯಂಡರ್ಸನ್‌, ಸ್ಟುವರ್ಟ್‌ ಬ್ರಾಡ್‌ 5 ಸಲ ಕೊಹ್ಲಿ ವಿಕೆಟ್‌ ಉರುಳಿಸಿದ್ದಾರೆ.

ಮೊದಲೆರಡು ಇನ್ನಿಂಗ್ಸ್‌ ಸೇರಿದಂತೆ ಒಟ್ಟು 8 ಬೌಲರ್‌ಗಳು 2 ಪ್ಲಸ್‌ ವಿಕೆಟ್‌ ಉರುಳಿಸಿದರು (ಭಾರತದ ನಾಲ್ವರು, ಆಸ್ಟ್ರೇಲಿಯದ ನಾಲ್ವರು). ಇದು ಟೆಸ್ಟ್‌ ಇತಿಹಾಸದ 18ನೇ ನಿದರ್ಶನವಾದರೆ, ಆಸ್ಟ್ರೇಲಿಯ ಟೆಸ್ಟ್‌ ಚರಿತ್ರೆಯ 4ನೇ ದೃಷ್ಟಾಂತ.

ಕೆ.ಎಲ್‌. ರಾಹುಲ್‌-ಮುರಳಿ ವಿಜಯ್‌ 63 ರನ್‌ ಜತೆಯಾಟ ನಿಭಾಯಿಸಿದರು. ಇದು 2004ರ ಸಿಡ್ನಿ ಟೆಸ್ಟ್‌ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಭಾರತ ಮೊದಲ ವಿಕೆಟಿಗೆ ಪೇರಿಸಿದ ಅತ್ಯಧಿಕ ರನ್‌. ಅಂದು ವೀರೇಂದ್ರ ಸೆಹವಾಗ್‌-ಆಕಾಶ್‌ ಚೋಪ್ರಾ 123 ರನ್‌ ಒಟ್ಟುಗೂಡಿಸಿದ್ದರು.

ಭಾರತ 2008ರ ಬಳಿಕ ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್‌ ಮುನ್ನಡೆ ಸಂಪಾದಿಸಿತು. ಅಂದಿನ ಪರ್ತ್‌ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಲೀಡ್‌ ಗಳಿಸಿದ ಭಾರತ, ಗೆಲುವನ್ನೂ ಸಾಧಿಸಿತ್ತು. ಆ ಬಳಿಕ ಭಾರತದೆದುರು ತವರಿನಲ್ಲಿ ಆಡಿದ ಎಲ್ಲ 9 ಟೆಸ್ಟ್‌ಗಳಲ್ಲೂ ಆಸ್ಟ್ರೇಲಿಯವೇ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.