ಸಿಡ್ನಿ: ಆಸೀಸ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮೊತ್ತ ಕಲೆ ಹಾಕಿದೆ.
ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಇಂದು 130 ರಿಂದ ಆಟ ಮುಂದುವರಿಸಿ 193 ಕ್ಕೆ ಔಟಾಗುವ ಮೂಲಕ ದ್ವಿಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಹನುಮ ವಿಹಾರಿ 42 ಕ್ಕೆ ಔಟಾದರು.
ರಿಷಭ್ ಪಂತ್ ಅವರು ಭರ್ಜರಿ ಶತಕ ಸಿಡಿಸಿದರು. ಇದು ಟೆಸ್ಟ್ ಕ್ರಿಕೆಟ್ ಬದುಕಿನ 2 ನೇ ಶತಕವಾಗಿದೆ. 159 ರನ್‌ಗಳಿಸಿರುವ ಪಂಥ್ ಉತ್ತಮ ಆಟ ತೋರಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ ಅವರು 81 ರನ್‌ಗಳಿಸಿ ಔಟಾದರು.
7 ವಿಕೆಟ್ ನಷ್ಟಕ್ಕೆ 622 ರನ್‌ಗಳನ್ನು ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು.ಇದು ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಕಲೆ ಹಾಕಿದ 2 ನೇ ಹೆಚ್ಚಿನ ಮೊತ್ತವಾಗಿದೆ.
ಈಗಾಗಲೇ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಪಡೆದಿರುವ ಭಾರತ ಈ ಪಂದ್ಯ ಡ್ರಾ ಮಾಡಿಕೊಂಡರೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ.