Advertisement

ಮೊದಲ ದಿನದ ಗೌರವ ಪಡೆದ ಲಬುಶೇನ್‌, ನಟರಾಜನ್‌

12:40 AM Jan 16, 2021 | Team Udayavani |

ಬ್ರಿಸ್ಬೇನ್‌: ತನ್ನ ಟೆಸ್ಟ್‌ ಇತಿಹಾಸದ ಅತ್ಯಂತ ಅನನುಭವಿ ಬೌಲಿಂಗ್‌ ಪಡೆಯೊಂದಿಗೆ ದಾಳಿಗಿಳಿದ ಭಾರತ, ಬ್ರಿಸ್ಬೇನ್‌ ಪಂದ್ಯದ ಮೊದಲ ದಿನ ಆಸ್ಟ್ರೇಲಿಯವನ್ನು ನಿಯಂತ್ರಿಸುವಲ್ಲಿ ಸಾಮಾನ್ಯ ಯಶಸ್ಸು ಪಡೆದಿದೆ. ಆಸೀಸ್‌ 5 ವಿಕೆಟಿಗೆ 274 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ.

Advertisement

ಸ್ಟೈಲಿಶ್‌ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಬುಶೇನ್‌ ಅವರ ಶತಕ (108) ಆಸ್ಟ್ರೇಲಿಯ ಸರದಿಯ ಆಕರ್ಷಣೆಯಾಗಿತ್ತು. ಭಾರತದ ಪರ ಟೆಸ್ಟ್‌ ಪದಾರ್ಪಣೆ ಮಾಡಿದ ಟಿ. ನಟರಾಜನ್‌ ಈ ಬಹುಮೂಲ್ಯ ವಿಕೆಟ್‌ ಜತೆಗೆ ಮ್ಯಾಥ್ಯೂ ವೇಡ್‌ (45) ಅವ ರನ್ನೂ ಔಟ್‌ ಮಾಡಿ ಗಮನ ಸೆಳೆದರು. ಟೆಸ್ಟ್‌ಕ್ಯಾಪ್‌ ಧರಿಸಿದ ಮತ್ತೋರ್ವ ಆಟಗಾರ ವಾಷಿಂಗ್ಟನ್‌ ಸುಂದರ್‌ ಅಪಾಯಕಾರಿ ಸ್ಮಿತ್‌ಗೆ (36) ಪೆವಿಲಿಯನ್‌ ಹಾದಿ ತೋರಿಸಿದರು.

ಎರಡು ವರ್ಷಗಳ ಹಿಂದಿನ ಟೆಸ್ಟ್‌ ಪ್ರವೇಶದಲ್ಲಿ ಕೇವಲ 10 ಎಸೆತ ಎಸೆದು ಗಾಯಾಳಾಗಿ ಹೊರಬಿದ್ದಿದ್ದ ಶಾದೂìಲ್‌ ಠಾಕೂರ್‌ ಅವರ ಪುನರಾಗಮನ ಅಮೋಘವಾಗಿತ್ತು. ಅವರು ಮೊದಲ ಎಸೆತದಲ್ಲೇ ಮಾರ್ಕಸ್‌ ಹ್ಯಾರಿಸ್‌ (5) ವಿಕೆಟ್‌ ಉಡಾಯಿಸಿದರು. ಎಡಗೈ ಆರಂಭಕಾರ ಡೇವಿಡ್‌ ವಾರ್ನರ್‌ ಕೇವಲ ಒಂದು ರನ್‌ ಮಾಡಿ ಮೊದಲ ಓವರಿನಲ್ಲೇ ಸಿರಾಜ್‌ ಬಲೆಗೆ ಬಿದ್ದರು.

ಕಾಡಿದ ಲಬುಶೇನ್‌ :

ಆಸೀಸ್‌ ಆರಂಭಿಕರಿಬ್ಬರೂ 17 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆದರೆ ಲಬುಶೇನ್‌ ಇನ್ನಷ್ಟು ಕುಸಿತವನ್ನು ತಪ್ಪಿಸಿದರು. ಭಾರತದ ಅನನುಭವಿ ಬೌಲಿಂಗ್‌ ಪಡೆಯ ಸಂಪೂರ್ಣ ಲಾಭವೆತ್ತಿದ ಅವರು ಸ್ಮಿತ್‌ ಜತೆ 3ನೇ ವಿಕೆಟಿಗೆ 70 ರನ್‌ ಒಟ್ಟುಗೂಡಿಸಿದರು.

Advertisement

87ಕ್ಕೆ 3 ವಿಕೆಟ್‌ ಉರುಳಿಸಿ ಮೇಲುಗೈ ಸಾಧಿಸುವ ಹಾದಿ ಯಲ್ಲಿದ್ದ ರಹಾನೆ ಪಡೆಯನ್ನು ಲಬುಶೇನ್‌-ವೇಡ್‌ ಜೋಡಿ ತೀವ್ರವಾಗಿ ಕಾಡಿತು. ಸ್ಕೋರ್‌ ಇನ್ನೂರಕ್ಕೆ ಏರಿತು. ಬೇರೂರಿ ನಿಂತಿದ್ದ ಈ ಜೋಡಿಯನ್ನು ಬೇರ್ಪಡಿಸಿದ ಯಶಸ್ಸು ನಟರಾಜನ್‌ ಅವರದ್ದಾಯಿತು. ಮೊದಲು ವೇಡ್‌ ವಿಕೆಟ್‌ ಕಿತ್ತ ಅವರು, 13 ರನ್‌ ಅಂತರದಲ್ಲಿ ಶತಕವೀರ ಲಬುಶೇನ್‌ ಆಟಕ್ಕೂ ತೆರೆ ಎಳೆದರು. 108 ರನ್ನಿಗೆ 204 ಎಸೆತ ಎದುರಿಸಿ ನಿಂತ ಲಬುಶೇನ್‌ 9 ಬೌಂಡರಿ ಬಾರಿಸಿದರು. ಇದು 18  ಟೆಸ್ಟ್‌ ಗಳಲ್ಲಿ ಲಬುಶೇನ್‌ ಬಾರಿಸಿದ 5ನೇ ಸೆಂಚುರಿ.

ಈ ಹಂತದಲ್ಲಿ ಭಾರತಕ್ಕೆ ಮತ್ತೆ ಹಿಡಿತ ಸಾಧಿಸುವ ಅವಕಾಶ ಒದಗಿ ಬಂತು. ಆದರೆ ಕ್ಯಾಮರಾನ್‌ ಗ್ರೀನ್‌ (ಬ್ಯಾಟಿಂಗ್‌ 28) ಮತ್ತು ನಾಯಕ ಟಿಮ್‌ ಪೇನ್‌ (ಬ್ಯಾಟಿಂಗ್‌ 38) ಇದಕ್ಕೆ ಅಡ್ಡಗಾಲಿಕ್ಕಿದರು.

ನವದೀಪ್‌ ಸೈನಿ ಗಾಯಾಳು :

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಹಾಗೂ-ಹೀಗೂ ಹನ್ನೊಂದರ ಬಳಗವನ್ನು ಅಂತಿಮಗೊಳಿಸಿದರೂ ಭಾರತೀಯ ಕ್ರಿಕೆಟಿಗರ ಗಾಯದ ಸಮಸ್ಯೆ ಮಾತ್ರ ಮುಗಿದಿಲ್ಲ. ದ್ವಿತೀಯ ಅವಧಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದ ವೇಳೆ ಪೇಸರ್‌ ನವದೀಪ್‌ ಸೈನಿ ತೊಡೆಸಂದು ನೋವಿಗೆ ಸಿಲುಕಿ ಅಂಗಳ ತ್ಯಜಿಸಿದರು.  ಇನ್ನಿಂಗ್ಸಿನ 36ನೇ ಓವರ್‌ ವೇಳೆ ಈ ಘಟನೆ ಸಂಭವಿಸಿತು. 8ನೇ ಓವರ್‌ ಎಸೆಯಲಿಳಿದಿದ್ದ ಸೈನಿ, 5 ಎಸೆತ ಪೂರೈಸಿದ ಬಳಿಕ ಈ ಸಮಸ್ಯೆಗೆ ಸಿಲುಕಿದರು. ಬಿಸಿಸಿಐ ವೈದ್ಯಕೀಯ ತಂಡ ಪರಿಶೀಲಿಸಿದ ಬಳಿಕ ಸೈನಿಗೆ ಸ್ಕ್ಯಾನಿಂಗ್‌ ಮಾಡಲಾಗಿದೆ. ಇದರ ವರದಿ ಇನ್ನಷ್ಟೇ ಕೈಸೇರಬೇಕಿದೆ. ಅಂಗಳ ಬಿಡುವ ಮೊದಲು ಸೈನಿಗೆ ಲಬುಶೇನ್‌ ವಿಕೆಟ್‌ ಲಭಿಸಬೇಕಿತ್ತು. ಆದರೆ ರಹಾನೆ ಕ್ಯಾಚ್‌ ಕೈಚೆಲ್ಲಿದರು.

ಸಾವಿರ ವಿಕೆಟ್‌ಗಳ ಅಂತರ! :

ಎರಡೂ ತಂಡಗಳ ಬೌಲಿಂಗ್‌ ಅನುಭವ ಅಜಗಜಾಂತರ ಆಗಿರುವುದು ಈ ಪಂದ್ಯದ ವಿಶೇಷ. ಬ್ರಿಸ್ಬೇನ್‌ ಮುಖಾಮುಖೀಗಾಗಿ ಅಂಗಳಕ್ಕಿಳಿಯುವ ವೇಳೆ ಭಾರತದ ಎಲ್ಲ ಬೌಲರ್  ಸೇರಿ ಉರುಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆ ಕೇವಲ 13. ಆದರೆ ಆಸ್ಟ್ರೇಲಿಯದ ಬೌಲರ್ 1,033 ವಿಕೆಟ್‌ ಹಾರಿಸಿದ ಅನುಭವಿಗಳಾಗಿದ್ದಾರೆ. ಟೆಸ್ಟ್‌ ಇತಿಹಾಸದಲ್ಲಿ ನೂರಕ್ಕೂ ಕಡಿಮೆ ವಿಕೆಟ್‌ ಉರುಳಿಸಿದ ಅನನುಭವಿ ಬೌಲರ್‌ಗಳನ್ನು ಹೊಂದಿರುವ ತಂಡವೊಂದು ಸಾವಿರಕ್ಕೂ ಅಧಿಕ ವಿಕೆಟ್‌ ಕಿತ್ತ ಅನುಭವಿ ತಂಡದ ವಿರುದ್ಧ ಆಡಿದ ಮೊದಲ ನಿದರ್ಶನ ಇದಾಗಿದೆ.

ಇಲ್ಲಿ ಆಸ್ಟ್ರೇಲಿಯ-ಭಾರತ ತಂಡಗಳ ನಡುವಿನ ವಿಕೆಟ್‌ ಬೇಟೆಯ ವ್ಯತ್ಯಾಸ 1,020. ಇತ್ತಂಡಗಳ ನಡುವಿನ ಅತ್ಯಧಿಕ ವಿಕೆಟ್‌ ಅಂತರದ ದಾಖಲೆ 2005-06ರ ಆಸೀಸ್‌-ವಿಂಡೀಸ್‌ ನಡುವಿನ ಅಡಿಲೇಡ್‌ ಟೆಸ್ಟ್‌ ನಲ್ಲಿ ನಿರ್ಮಾಣಗೊಂಡಿದೆ (1,306 ವಿಕೆಟ್‌). ಆಸೀಸ್‌ ಬೌಲರ್ 1,521 ಹಾಗೂ ವಿಂಡೀಸ್‌ ಬೌಲರ್ 215 ವಿಕೆಟ್‌ ಉರುಳಿಸಿದ್ದರು.

ಅನನುಭವಿ ಬೌಲಿಂಗ್‌  :

ಟೆಸ್ಟ್‌ ಇತಿಹಾಸದ ಮೊದಲ ಪಂದ್ಯವನ್ನು ಹೊರತುಪಡಿಸಿ ಭಾರತದ 2ನೇ ಅತ್ಯಂತ ಅನನುಭವಿ ಬೌಲಿಂಗ್‌ ಪಡೆಯೊಂದು ಬ್ರಿಸ್ಬೇನ್‌ನಲ್ಲಿ ದಾಳಿಗಿಳಿಯಿತು. ಇಲ್ಲಿನ ಬೌಲರ್ ಉರುಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆ ಕೇವಲ 13. ಇಂಗ್ಲೆಂಡ್‌ ಎದುರಿನ 1946ರ ಲಾರ್ಡ್ಸ್‌ ಪಂದ್ಯದಲ್ಲಿ ಭಾರತದ ಬೌಲರ್ ಕೇವಲ 5 ವಿಕೆಟ್‌ ಉರುಳಿಸಿದ ಅನುಭವ ಹೊಂದಿದ್ದರು (ಲಾಲಾ ಅಮರಾನಾಥ್‌ 4, ಸಿ.ಎಸ್‌. ನಾಯ್ಡು 1 ವಿಕೆಟ್‌).

20: ಸರಣಿಯಲ್ಲೇ  ಸರ್ವಾಧಿಕ ಆಟಗಾರರು :

ಭಾರತ ಈ ಸರಣಿಯಲ್ಲಿ ಒಟ್ಟು 20 ಆಟಗಾರರನ್ನು ಆಡಿಸಿತು. ಇದು ಟೆಸ್ಟ್‌ ಇತಿಹಾಸಲ್ಲೇ ವಿದೇಶಿ ಸರಣಿಯೊಂದರ ವೇಳೆ ತಂಡವೊಂದು ಆಡಿಸಿದ ಅತ್ಯಧಿಕ ಸಂಖ್ಯೆಯ ಆಟಗಾರರ ದಾಖಲೆಯಾಗಿದೆ.

ಇದಕ್ಕೂ ಹಿಂದಿನ ದಾಖಲೆ 18 ಆಟಗಾರರದ್ದಾಗಿತ್ತು. 2013-14ರ ಆ್ಯಶಸ್‌ ಸರಣಿ ವೇಳೆ ಇಂಗ್ಲೆಂಡ್‌ ಹಾಗೂ 1998-99ರ ಇಂಗ್ಲೆಂಡ್‌ ಎದುರಿನ ಸರಣಿ ವೇಳೆ ವೆಸ್ಟ್‌ ಇಂಡೀಸ್‌ ತಲಾ 18 ಕ್ರಿಕೆಟಿಗರನ್ನು ಕಣಕ್ಕಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next