Advertisement

ಭಾರತ-ವೆಸ್ಟ್‌ ಇಂಡೀಸ್‌ ಇಂದಿನಿಂದ ಏಕದಿನ ಸರಣಿ

09:45 PM Jul 21, 2022 | Team Udayavani |

ಪೋರ್ಟ್‌ ಆಫ್‌ ಸ್ಪೇನ್‌: ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ಟಿ20 ಹಾಗೂ ಏಕದಿನ ಸರಣಿಯನ್ನು ವಶಪಡಿಸಿಕೊಂಡ ಭಾರತ ತಂಡವೀಗ ವೆಸ್ಟ್‌ ಇಂಡೀಸ್‌ನಲ್ಲಿ ಬೀಡುಬಿಟ್ಟಿದೆ. ಶುಕ್ರವಾರ ಇಲ್ಲಿ 3 ಪಂದ್ಯಗಳ ಏಕದಿನ ಸರಣಿ ಮೊದ ಲ್ಗೊಳ್ಳಲಿದೆ. ಬಳಿಕ 5 ಪಂದ್ಯಗಳ ಟಿ20 ಮುಖಾಮುಖಿ ಏರ್ಪಡಲಿದೆ.

Advertisement

ಆದರೆ ಇಂಗ್ಲೆಂಡ್‌ ವಿರುದ್ಧ ಸಾಧಿಸಿದ ಗೆಲುವು ವಿಂಡೀಸ್‌ ಸರಣಿಗೆ ಸ್ಫೂರ್ತಿ ಆಗಲಿದೆ ಎಂದು ಭಾವಿಸುವುದು ತಪ್ಪಾದೀತು. ಕಾರಣ, ಅಲ್ಲಿ ಆಡಿದ ಸ್ಟಾರ್‌ ಆಟಗಾರರಿಗೆಲ್ಲ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಇವರಲ್ಲಿ ಪ್ರಮುಖರು. ಇವರಲ್ಲಿ ಹೆಚ್ಚಿನವರು ಇತ್ತೀಚಿನ ಸರಣಿಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರೆಂಬುದನ್ನು ಮರೆಯುವಂತಿಲ್ಲ. ಇವರ ಗೈರಲ್ಲಿ ಶಿಖರ್‌ ಧವನ್‌ ಟೀಮ್‌ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.

ಧವನ್‌ ಜತೆ ಋತುರಾಜ್‌ ಗಾಯಕ್ವಾಡ್‌ ಅಥವಾ ಶುಭಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಹೂಡಾ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಬೇಕಿದೆ. ಸಂಜು ಸ್ಯಾಮ್ಸನ್‌ ಕೂಡ ರೇಸ್‌ನಲ್ಲಿದ್ದಾರೆ.

ಸ್ಪಿನ್‌ ವಿಭಾಗ ಆಲ್‌ರೌಂಡರ್‌ ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌ ಮತ್ತು ಅಕ್ಷರ್‌ ಪಟೇಲ್‌ ಅವರನ್ನು ನೆಚ್ಚಿಕೊಂಡಿದೆ. ಜಡೇಜ ಉಪನಾಯಕರೂ ಆಗಿದ್ದಾರೆ.

ತವರಲ್ಲೇ 3-0 ವೈಟ್‌ವಾಶ್‌  : 

Advertisement

ಒಂದು ಕಾಲದ ದೈತ್ಯ ತಂಡವಾದ ವೆಸ್ಟ್‌ ಇಂಡೀಸ್‌ ಇಂದು ಲೆಕ್ಕ ಭರ್ತಿಯ ತಂಡವಾಗಿದೆ. ಆದರೂ ಆಗಾಗ ಅಪಾಯ ಒಡ್ಡುತ್ತಲೇ ಇರುತ್ತದೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ತವರಿನ ಏಕದಿನ ಸರಣಿಯಲ್ಲಿ 3-0 ವೈಟ್‌ವಾಶ್‌ ಅನುಭವಿಸಿದ ಸಂಕಟದಲ್ಲಿದೆ.

ಭಾರತ-ವೆಸ್ಟ್‌ ಇಂಡೀಸ್‌ ಕಳೆದ ಫೆಬ್ರವರಿಯಲ್ಲಿ ಕೊನೆಯ ಸಲ ಮುಖಾ ಮುಖೀ ಆಗಿದ್ದವು. ಭಾರತ ಏಕದಿನ ಹಾಗೂ ಟಿ20 ಸರಣಿ ಗಳೆರಡನ್ನೂ 3-0 ಅಂತರದಿಂದ ವಶಪಡಿಸಿಕೊಂಡಿತ್ತು. ಇದಕ್ಕೆ ತವರಲ್ಲಿ ಸೇಡು ತೀರಿಸಲು ವಿಂಡೀಸ್‌ ಪ್ರಯತ್ನಿಸುವುದರಲ್ಲಿ ಅನುಮಾನ ವಿಲ್ಲ.

ಆರಂಭಿಕರಾದ ಶೈ ಹೋಪ್‌-ಬ್ರ್ಯಾಂಡನ್‌ ಕಿಂಗ್‌, ಕೈಲ್‌ ಮೇಯರ್, ನಾಯಕ ನಿಕೋಲಸ್‌ ಪೂರಣ್‌, ಶಮರ್‌ ಬ್ರೂಕ್ಸ್‌, ರೋವ್ಮನ್‌ ಪೊವೆಲ್‌, ಕೇಸಿ ಕಾರ್ಟಿ, ತಂಡಕ್ಕೆ ಮರಳಿದ ಜೇಸನ್‌ ಹೋಲ್ಡರ್‌ ಅವರೆಲ್ಲ ಡೇಂಜರಸ್‌ ಬ್ಯಾಟರ್‌ಗಳೇ.

ಬೌಲಿಂಗ್‌ ವಿಭಾಗದ ಪ್ರಮುಖ ರೆಂದರೆ ಅಲ್ಜಾರಿ ಜೋಸೆಫ್‌, ಕೀಮೊ ಪೌಲ್‌, ಸ್ಪಿನ್ನರ್‌ ಗುಡಕೇಶ್‌ ಮೋಟಿ. ಆದರೆ ಸ್ಥಿರತೆ ಹಾಗೂ ಬದ್ಧತೆ ಕೆರಿಬಿಯನ್ನರ ದೊಡ್ಡ ಸಮಸ್ಯೆ. ಇವೆರಡನ್ನೂ ಕಾಯ್ದುಕೊಳ್ಳುವುದರಲ್ಲಿ ಇವರು ಬಹಳ ಹಿಂದೆ.

2019ರ ವಿಶ್ವಕಪ್‌ ಬಳಿಕ ಆಡಲಾದ 39 ಏಕದಿನ ಪಂದ್ಯಗಳಲ್ಲಿ ಕೇವಲ ಆರರಲ್ಲಷ್ಟೇ ಪೂರ್ತಿ 50 ಓವರ್‌ ಬ್ಯಾಟಿಂಗ್‌ ನಡೆಸಿದೆ ಎಂಬುದು ವೆಸ್ಟ್‌ ಇಂಡೀಸ್‌ ಸ್ಥಿತಿಯನ್ನು ಸಾರುತ್ತದೆ.

ಧವನ್‌: ವರ್ಷದ 7ನೇ ನಾಯಕ! :

ಶಿಖರ್‌ ಧವನ್‌ ವೆಸ್ಟ್‌ ಇಂಡೀಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅವರು 2022ರ ಎಲ್ಲ ಮಾದರಿಗಳಲ್ಲಿ ಭಾರತೀಯ ಕ್ರಿಕೆಟ್‌ನ 7ನೇ ನಾಯಕರಾಗಿದ್ದಾರೆ. ಇದ ರೊಂದಿಗೆ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ ನಾಯಕ ರನ್ನು ನೇಮಿಸಿದ ಶ್ರೀಲಂಕಾದ 2017ರ ದಾಖಲೆಯನ್ನು ಭಾರತ ಸರಿದೂಗಿಸಿತು. 2022ರಲ್ಲಿ ಟೀಮ್‌ ಇಂಡಿಯಾ ಕಂಡ ಉಳಿದ 6 ನಾಯಕರೆಂದರೆ ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ ಮತ್ತು ಜಸ್‌ಪ್ರೀತ್‌ ಬುಮ್ರಾ.

ಪಂದ್ಯಕ್ಕೆ ಮಳೆ ಭೀತಿ :

“ಕ್ವೀನ್ಸ್‌ ಪಾರ್ಕ್‌ ಓವಲ್‌’ ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಮಳೆ ಯಿಂದ ಭಾರತೀಯರ ಬುಧ ವಾರದ ಹೊರಾಂಗಣ ಅಭ್ಯಾಸ ರದ್ದುಗೊಂಡಿತ್ತು. ಹೀಗಾಗಿ ಒಳಾಂಗಣದಲ್ಲಿ ಒಂದಿಷ್ಟು ಅಭ್ಯಾಸ ನಡೆಸಿದರು.

ಸಂಭಾವ್ಯ ತಂಡಗಳು :

ಭಾರತ: ಧವನ್‌ (ನಾಯಕ), ಋತುರಾಜ್‌ ಗಾಯಕ್ವಾಡ್‌/ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌, ಆವೇಶ್‌ ಖಾನ್‌/ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್‌, ಮೊಹಮ್ಮದ್‌ ಸಿರಾಜ್‌.

ವೆಸ್ಟ್‌ ಇಂಡೀಸ್‌: ಶೈ ಹೋಪ್‌, ಬ್ರ್ಯಾಂಡನ್‌ ಕಿಂಗ್‌,  ಶಮರ್‌ ಬ್ರೂಕ್ಸ್‌, ಕೈಲ್‌ ಮೇಯರ್, ನಿಕೋಲಸ್‌ ಪೂರಣ್‌ (ನಾಯಕ), ರೋವ್ಮನ್‌ ಪೊವೆಲ್‌, ಜೇಸನ್‌ ಹೋಲ್ಡರ್‌, ಅಖೀಲ್‌ ಹೊಸೇನ್‌, ಅಲ್ಜಾರಿ ಜೋಸೆಫ್‌, ಗುಡಕೇಶ್‌  ಮೋಟಿ, ಜೇಡನ್‌ ಸೀಲ್ಸ್‌.

ವೇಳಾಪಟ್ಟಿ  :

ದಿನಾಂಕ            /ಪಂದ್ಯ/             ಸ್ಥಳ      /ಆರಂಭ

ಜು. 22   1ನೇ ಏಕದಿನ     ಪೋರ್ಟ್‌ ಆಫ್‌ ಸ್ಪೇನ್‌   ರಾತ್ರಿ 7.00

ಜು. 24   2ನೇ ಏಕದಿನ     ಪೋರ್ಟ್‌ ಆಫ್‌ ಸ್ಪೇನ್‌   ರಾತ್ರಿ 7.00

ಜು. 27   3ನೇ ಏಕದಿನ     ಪೋರ್ಟ್‌ ಆಫ್‌ ಸ್ಪೇನ್‌   ರಾತ್ರಿ 7.00

ಜು. 29   1ನೇ ಟಿ20             ಟರೂಬ              ರಾತ್ರಿ 8.00

ಆ. 1       2ನೇ ಟಿ20             ಬಸೆಟರ್‌             ರಾತ್ರಿ 8.00

ಅ. 2       3ನೇ ಟಿ20             ಬಸೆಟರ್‌             ರಾತ್ರಿ 8.00

ಅ. 6       4ನೇ ಟಿ20             ಲೌಡರ್‌ಹಿಲ್‌    ರಾತ್ರಿ 8.00

ಅ. 7       5ನೇ ಟಿ20             ಲೌಡರ್‌ಹಿಲ್‌    ರಾತ್ರಿ 8.00

 

Advertisement

Udayavani is now on Telegram. Click here to join our channel and stay updated with the latest news.

Next