ರಾಜ್‌ಕೋಟ್: ಪ್ರವಾಸಿ ಐರ್ಲೆಂಡ್ ಮೇಲೆ ಪ್ರಭುತ್ವ ಸಾಧಿಸಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತದ ವನಿತೆಯರೀಗ ಕ್ಲೀನ್ ಸ್ವೀಪ್ ಯೋಜನೆಯೊಂದಿಗೆ ಬುಧವಾರದ ಅಂತಿಮ ಪಂದ್ಯವನ್ನು ಆಡಲಿಳಿಯಲಿದ್ದಾರೆ. ತೀವ್ರ ಒತ್ತಡಕ್ಕೆ ಸಿಲುಕಿರುವ ಐರ್ಲೆಂಡ್ ಕೊನೆಯಲ್ಲಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
ಭಾರತವೀಗ ಪವರ್‌ಫುಲ್ ಬ್ಯಾಟಿಂಗ್ ಮೂಲಕ ಎದುರಾಳಿ ಮೇಲೆ ಸವಾರಿ ಮಾಡಲಾರಂಭಿಸಿದೆ. ಶಫಾಲಿ ವರ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಓಪನರ್ ಪ್ರತೀಕಾ ರಾವಲ್ 4 ಇನ್ನಿಂಗ್ಸ್‌ಗಳಲ್ಲಿ 3 ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಸ್ಮತಿ ಮಂಧನಾ ಕೂಡ ಅಮೋಘ ಬ್ಯಾಟಿಂಗ್ ಲಯದಲ್ಲಿದ್ದಾರೆ. ಇವರಿಬ್ಬರು ಸೇರಿಕೊಂಡು 5 ಇನ್ನಿಂಗ್ಸ್‌ಗಳಲ್ಲಿ ಮೊದಲ ವಿಕೆಟಿಗೆ 3 ಶತಕದ ಜತೆಯಾಟ ನಿಭಾಯಿಸಿರುವುದು ವಿಶೇಷ. ಕಳೆದ ಪಂದ್ಯದಲ್ಲಿ 156 ರನ್ ಪೇರಿಸಿದ್ದರು.
ಜೆಮಿಮಾ ರೋಡ್ರಿಗಸ್ ಚೊಚ್ಚಲ ಶತಕದ ಮೂಲಕ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಗೈರಲ್ಲಿ ಇವರಿಗೆ 4ನೇ ಕ್ರಮಾಂಕಕ್ಕೆ ಭಡ್ತಿ ನೀಡಲಾಗಿತ್ತು. ಹರ್ಲೀನ್ ದೇವಲ್ ಕಳೆದ ಪಂದ್ಯದಲ್ಲಿ 89 ರನ್ ಹೊಡೆದು ಫಾರ್ಮ್ ಪ್ರದರ್ಶಿಸಿದ್ದಾರೆ.
ಬೌಲಿಂಗ್ ಸ್ವಲ್ಪ ದುರ್ಬಲ
ರೇಣುಕಾ ಸಿಂಗ್ ಹಾಗೂ ಪೂಜಾ ವಸ್ತ್ರಾಕರ್ ಗೈರಲ್ಲಿ ಭಾರತದ ಬೌಲಿಂಗ್ ಸ್ವಲ್ಪ ಮಟ್ಟಿಗೆ ಶಕ್ತಿಗುಂದಿರುವುದು ನಿಜ. ದ್ವಿತೀಯ ಪಂದ್ಯದಲ್ಲಿ ಐರ್ಲೆಂಡ್‌ಗೆ 254 ರನ್ ಬಿಟ್ಟುಕೊಟ್ಟದ್ದು ಇದಕ್ಕೊಂದು ನಿದರ್ಶನ. ಅದೂ 7 ವಿಕೆಟಿಗೆ. ಇದನ್ನು ಗಮನಿಸುವಾಗ ಐರ್ಲೆಂಡ್‌ನ ಬ್ಯಾಟಿಂಗ್ ಬಗ್ಗೆ ಒಂದಿಷ್ಟು ಭರವಸೆ ಇರಿಸಬಹುದು. ಆದರೆ ಫೀಲ್ಡಿಂಗ್ ಮತ್ತು ಬೌಲಿಂಗ್ ವಿಶ್ವ ದರ್ಜೆಗಿಂತ ಬಹಳಷ್ಟು ಹಿಂದಿದೆ.