ನವದೆಹಲಿ: ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಏರುತ್ತಿರುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ವಿದೇಶದಿಂದ ಆಮದು ಮಾಡಿಕೊಳ್ಳುವ ಕೋವಿಡ್ ಲಸಿಕೆ ಮೇಲೆ ಶೇ.19ರಷ್ಟು ಆಮದು ಶುಲ್ಕ ಮನ್ನಾ ಮಾಡಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಲಾಕ್‌ಡೌನ್ ಆತಂಕ ಹಿನ್ನೆಲೆ: ಕೃಷ್ಣ ಟಾಕೀಸ್ ಪ್ರದರ್ಶನ ಬಂದ್
ಶೀಘ್ರವಾಗಿ ರಷ್ಯಾದಿಂದ ಸ್ಫುಟ್ನಿಕ್-5 ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಫೈಜರ್, ಮೊಡೆರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯನ್ನು ಭಾರತದಲ್ಲಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ ಎಂದು ವರದಿ ವಿವರಿಸಿದೆ.
ಈಗಾಗಲೇ ಅನುಮತಿ ಪಡೆದಿರುವ ಲಸಿಕೆಗಳನ್ನು ತೆರೆದ ಮಾರುಕಟ್ಟೆಯಲ್ಲಿ ಸರ್ಕಾರದ ಯಾವುದೇ ಮಧ್ಯಪ್ರವೇಶ ಇಲ್ಲದೆಯೇ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೂ ಅವಕಾಶ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೇ ಬೆಲೆ ನಿಗದಿಪಡಿಸುವ ಸ್ವಾತಂತ್ರ್ಯವನ್ನು ನೀಡಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ.
ದೇಶದಲ್ಲಿ ಎಲ್ಲಾ ವಿಧದ ಕೋವಿಡ್ 19 ಲಸಿಕೆಯ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವೇ ನಿಯಂತ್ರಿಸುತ್ತಿದೆ. ವಿದೇಶಿ ಲಸಿಕೆ ಮಾರಾಟದ ವಿಚಾರದ ಕುರಿತಂತೆ ಹಣಕಾಸು ಸಚಿವಾಲಯ ವಕ್ತಾರರು ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.