ನವದೆಹಲಿ: ಭಾರತ ತನ್ನ ಆತಿಥ್ಯದಲ್ಲಿ ಮೊಟ್ಟಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯಾಟ ಒಂದಕ್ಕೆ ಸಾಕ್ಷಿಯಾಗಲಿರುವ ಕ್ಷಣಕ್ಕೆ ಮುಹೂರ್ತ ನಿಗದಿಯಾಗಿದೆ. ಇದೇ ನವಂಬರ್ 22ರಂದು ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು ಈ ಪಂದ್ಯದಲ್ಲಿ ಪಿಂಕ್ ಚೆಂಡನ್ನು ಬಳಸಲಾಗುತ್ತದೆ.
ಎರಡೂ ತಂಡಗಳ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಅದರಲ್ಲಿ ಎರಡನೇ ಟೆಸ್ಟ್ ಪಂದ್ಯಾಟ ನವಂಬರ್ 22ರಂದು ಕೊಲ್ಕೊತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯಾಟವನ್ನು ನಡೆಸುವ ಬಿಸಿಸಿಐ ಪ್ರಸ್ತಾಪಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಂದು ತನ್ನ ಒಪ್ಪಿಗೆಯನ್ನು ಸೂಚಿಸಿದೆ.
ಹೊನಲು ಬೆಳಕಿನ ಟೆಸ್ಟ್ ಪಂದ್ಯವೊಂದನ್ನು ಭಾರತ ಆಯೋಜಿಸಬೇಕೆಂಬ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕನಸು ಈ ಮೂಲಕ ನನಸಾಗಲಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೂ ಸಹ ಈ ಪಂದ್ಯಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಸಹ ಸೌರವ್ ಗಂಗೂಲಿ ಅವರು ವ್ಯಕ್ತಪಡಿಸಿದ್ದಾರೆ.
ಬಿಸಿಬಿ ಸಿಇಒ ನಿಝಾಮುದ್ದೀನ್ ಚೌಧರಿ ಅವರೊಂದಿಗೆ ಮಾತನಾಡಿದ ಬಳಿಕ ಸೌರವ್ ಗಂಗೂಲಿ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆದರೂ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ ತನ್ನ ಆಟಗಾರರೊಂದಿಗೆ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಚೌಧರಿ ಅವರು ತಿಳಿಸಿರುವುದಾಗಿ ಗಂಗೂಲಿ ಅವರು ತಿಳಿಸಿದ್ದಾರೆ.
ಈಡೆನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಈ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಪ್ರತೀ ವರ್ಷ ನಡೆಸುವ ಉದ್ದೇಶವೂ ಬಿಸಿಸಿಐ ಮುಂದಿದೆ ಎಂಬ ವಿಚಾರವನ್ನು ಗಂಗೂಲಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.