ಪೊಚೆಫ್ ಸ್ಟ್ರೂಮ್: ಅಂಡರ್-19 ಟಿ20 ವಿಶ್ವಕಪ್ ಸೂಪರ್ ಸಿಕ್ಸ್ “ಎ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸುವ ಮೂಲಕ ಭಾರತ ಗೆಲುವಿನ ಹಳಿ ಏರಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾಕ್ಕೆ 20 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ 59 ರನ್ ಮಾತ್ರ. ಭಾರತ 7.2 ಓವರ್‌ಗಳಲ್ಲಿ 3 ವಿಕೆಟಿಗೆ 60 ರನ್ ಬಾರಿಸಿತು.
ಶ್ರೀಲಂಕಾ ಪತನದಲ್ಲಿ ಲೆಗ್‌ಸ್ಪಿನ್ನರ್ ಪಾರ್ಶವಿ ಚೋಪ್ರಾ ಪ್ರಮುಖ ಪಾತ್ರ ವಹಿಸಿದರು. ನಿಗದಿತ 4 ಓವರ್‌ಗಳಲ್ಲಿ ಒಂದು ಮೇಡನ್ ಮಾಡಿದ ಅವರು ಕೇವಲ 5 ರನ್ ವೆಚ್ಚದಲ್ಲಿ 4 ವಿಕೆಟ್ ಕೆಡವಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಮನ್ನತ್ ಕಶ್ಯಪ್ 2 ವಿಕೆಟ್, ತಿತಾಸ್ ಸಾಧು ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್ ಕಿತ್ತರು.
25 ರನ್ ಮಾಡಿದ ನಾಯಕಿ ವಿಶ್ಮಿ ಗುಣರತ್ನೆ ಶ್ರೀಲಂಕಾ ಸರದಿಯ ಟಾಪ್ ಸ್ಕೋರರ್. ಎರಡಂಕೆಯ ಗಡಿ ತಲುಪಿದ ಮತ್ತೋರ್ವ ಆಟಗಾರ್ತಿ ಉಮಯಾ ರತ್ನಾಯಕೆ (13).
ಚೇಸಿಂಗ್ ವೇಳೆ ನಾಯಕಿ ಶಫಾಲಿ ವರ್ಮ 15, ಶ್ವೇತಾ ಸೆಹ್ರಾವತ್ 13 ಮಾಡಿದರೆ, ವನ್‌ಡೌನ್‌ನಲ್ಲಿ ಬಂದ ರಿಚಾ ಘೋಷ್ ಕೇವಲ ಒಂದು ರನ್ ಮಾಡಿ ವಾಪಸಾದರು. ಮೂರೂ ವಿಕೆಟ್ ದೇವಿ¾ ವಿಹಂಗಾ ಉರುಳಿಸಿದರು. ಭಾರತದ ಗೆಲುವಿನ ವೇಳೆ ಸೌಮ್ಯಾ ತಿವಾರಿ 28 ರನ್ ಮಾಡಿ ಅಜೇಯರಾಗಿದ್ದರು.
ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ 87ಕ್ಕೆ ಉದುರಿದ ಭಾರತ 7 ವಿಕೆಟ್‌ಗಳಿಂದ ಸೋತಿತ್ತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-20 ಓವರ್‌ಗಳಲ್ಲಿ 9 ವಿಕೆಟಿಗೆ 59 (ವಿಶ್ಮಿ ಗುಣರತ್ನೆ 25, ಉಮಯಾ ರತ್ನಾಯಕೆ 13, ಪಾರ್ಶವಿ ಚೋಪ್ರಾ 5ಕ್ಕೆ 4, ಮನ್ನತ್ ಕಶ್ಯಪ್ 16ಕ್ಕೆ 2). ಭಾರತ-7.2 ಓವರ್‌ಗಳಲ್ಲಿ 3 ವಿಕೆಟಿಗೆ 60 (ಸೌಮ್ಯಾ ತಿವಾರಿ ಔಟಾಗದೆ 28, ಶಫಾಲಿ ವರ್ಮ 15, ಶ್ವೇತಾ ಸೆಹ್ರಾವತ್ 13, ದೇವಿ¾ ವಿಹಂಗಾ 34ಕ್ಕೆ 3). ಪಂದ್ಯಶ್ರೇಷ್ಠ: ಪಾರ್ಶವಿ ಚೋಪ್ರಾ.