ಹರಾರೆ: ಜಿಂಬಾಬ್ವೆ ವಿರುದ್ಧ ಅವರದೇ ನೆಲದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯ ಗುರುವಾರ ನಡೆದ ಮೊದಲ ಪಂದ್ಯದಲ್ಲಿ 10 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭಾರತ ಸಾಮರ್ಥ್ಯ ತೋರಿ ದುರ್ಬಲವೆಂದು ಪರಿಗಣಿಸಲಾದ ಜಿಂಬಾಬ್ವೆ ತಂಡದ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ 40.3 ಓವರ್ ಗಳಲ್ಲಿ 189 ರನ್ ಗಳಿಗೆ ಜಿಂಬಾಬ್ವೆ ಯನ್ನು ಕಟ್ಟಿ ಹಾಕಿತು. ಭಾರತದ ಪರ ಬೌಲಿಂಗ್ ನಲ್ಲಿ ತಂಡಕ್ಕೆ ಮರಳಿದ ವೇಗಿ ದೀಪಕ್ ಚಹರ್ 3 ವಿಕೆಟ್ ಪಡೆದು ಗಮನ ಸೆಳೆದರು. ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ಕಡಿಮೆ ಸ್ಕೋರ್ ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕ ಜೋಡಿ ಶಿಖರ್ ಧವನ್ (ಔಟಾಗದೆ 81) ಮತ್ತು ಶುಭಮನ್ ಗಿಲ್ (ಔಟಾಗದೆ 82) ಕೇವಲ 30.5 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿದರು.
ಜಿಂಬಾಬ್ವೆ 31 ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. 110 ಕ್ಕೆ 8 ವಿಕೆಟ್ ಕಳೆದುಕೊಂಡು ಇನ್ನೇನು ಆಲೌಟ್ ಆಗುತ್ತದೆ ಎಂದು ನೀರಿಕ್ಷಿಸುವ ವೇಳೆ ಕೊನೆಯಲ್ಲಿ ಬಂದ ಬ್ರಾಡ್ ಇವಾನ್ಸ್ನಾಟ್ ಔಟಾಗದೆ 33, ನಾಗರವಾಬ್ 34 ರನ್ ಕೊಡುಗೆ ನೀಡಿ ತಂಡದ ಮೊತ್ತವನ್ನು 189 ರನ್ ಗಳಿಗೆ ವಿಸ್ತರಿಸಿದರು. ನಾಯಕ ರೇಗಿಸ್ ಚಕಬ್ವ ಗರಿಷ್ಠ 35 ರನ್ ಗಳಿಸಿದರು.