ಭುವನೇಶ್ವರ: ಭಾರತವು ಬುಧವಾರದಂದು ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. 5000 ಕಿ.ಮೀ ದೂರದವರೆಗಿನ ಶತ್ರುವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಲ್ಲ ಈ ಕ್ಷಿಪಣಿಯನ್ನು ಒಡಿಶಾದ ಅಬ್ದುಲ್ ಕಲಾಂ ದ್ವೀಪದಿಂದ ಸಂಜೆ 7.50ಕ್ಕೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಅಗ್ನಿ 5 ಕ್ಷಿಪಣಿಯು 3 ಹಂತದ ಘನ ಇಂಧನ ಇಂಜಿನ್ ಹೊಂದಿದೆ. ಶತ್ರುವಿನ ಸ್ಥಳದ ಮೇಲೆ ನಿಖರ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ.
ಡಿಆರ್‌ಡಿಒ ನಿರ್ಮಿಸಿರುವ ಈ ಕ್ಷಿಪಣಿಯನ್ನು ಈ ಹಿಂದೆ ಏಳು ಬಾರಿ ಪರೀಕ್ಷಿಸಲಾಗಿದೆ. 2018ರ ಡಿಸೆಂಬರ್ 10ರಂದು ಕೊನೆಯ ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ:ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ
ಜಲಾಂತರ್ಗಾಮಿಗಳಿಂದಲೂ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಭಾರತ ಸಿದ್ಧಪಡಿಸುತ್ತಿದ್ದು, ಸಂಭಾವ್ಯ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿದೆ.
ಈ ಕ್ಷಿಪಣಿಯು ಏಷ್ಯಾವನ್ನು ಇಡಿಯಾಗಿ, ಯೂರೋಪ್ ಮತ್ತು ಆಫ್ರಿಕಾದ ಕೆಲ ಭಾಗಗಳನ್ನು ಗುರಿಯಾಗಿಸಬಲ್ಲದು. ಈ ಕ್ಷಿಪಣಿಯು ಬಳಸುವ ಎಂಜಿನ್ ಸಹ ವೈಶಿಷ್ಟ್ಯಪೂರ್ಣವಾದುದು. ಎಂಐಆರ್ವಿ ತಂತ್ರಜ್ಞಾನದ ಈ ಎಂಜಿನ್ ಬಳಸಿ ಉಡಾಯಿಸಿದ ಕ್ಷಿಪಣಿಯು ಹಲವು ಗುರಿಗಳನ್ನು ಏಕಕಾಲಕ್ಕೆ ಧ್ವಂಸ ಮಾಡಬಲ್ಲದು.