ಪಲ್ಲೆಕೆಲೆ: ವಿಶ್ವ ಚಾಂಪಿಯನ್ ಭಾರತ ಸುದೀರ್ಘ ಭವಿಷ್ಯದ ಗುರಿ ಹಾಗೂ ಯೋಜನೆಗಳೊಂದಿಗೆ ನೂತನ ಟಿ20 ಸರಣಿಯನ್ನು ಆರಂಭಿಸಲಿದೆ. ಶ್ರೀಲಂಕಾ ವಿರುದ್ಧ ಶನಿವಾರ ಪಲ್ಲೆಕಿಲೆಯಲ್ಲಿ ಮೊದಲ ಪಂದ್ಯ ಆಡಲಿದೆ. ಇದರೊಂದಿಗೆ ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ನೂತನ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗ ಆರಂಭಗೊಳ್ಳಲಿದೆ.
ದಕ್ಷಿಣ ಆಫ್ರಿಕಾವನ್ನು ಮಣಿಸಿ ಟಿ20 ವಿಶ್ವ ಚಾಂಪಿಯನ್ ಆದ ಬಳಿಕ ಭಾರತ ತಂಡ ಜಿಂಬಾಬ್ವೆಗೆ ಪ್ರವಾಸ ಕೈಗೊಂಡಿತ್ತಾದರೂ ಇದೊಂದು ದ್ವಿತೀಯ ದರ್ಜೆಯ ಟೀಮ್ ಆಗಿತ್ತು. ಶುಭಮನ್ ಗಿಲ್ ಸಾರಥ್ಯದ ಈ ತಂಡದಲ್ಲಿ ಐಪಿಎಲ್ ಹೀರೋಗಳೇ ತುಂಬಿದ್ದರು. ಆದರೀಗ ಸೂರ್ಯಕುಮಾರ್ ನೇತೃತ್ವದ ತಂಡ ಪೂರ್ಣ ಸಾಮರ್ಥ್ಯದ್ದಾಗಿದೆ. ಸವಾಲು ಕೂಡ ಸುಲಭದ್ದಲ್ಲ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರ ನಿವೃತ್ತಿ ಬಳಿಕ ಭಾರತ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ದೃಷ್ಟಿಯಲ್ಲಿರಿಸಿಕೊಂಡೇ ತಂಡವನ್ನು ಕಟ್ಟಿದೆ. ಇದರಲ್ಲಿ ಸಾಕಷ್ಟು ಅಚ್ಚರಿಯನ್ನೂ ಗಮನಿಸಬಹುದಾಗಿದೆ. ಟಿ20 ವಿಶ್ವಕಪ್ ವೇಳೆ ಉಪನಾಯಕರಾಗಿದ್ದ, ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದು, ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮ ಅವರನ್ನು ಕೈಬಿಟ್ಟದ್ದು, ಜಿಂಬಾಬ್ವೆಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ರಿಯಾನ್ ಪರಾಗ್ ಅವರನ್ನು ಉಳಿಸಿಕೊಂಡದ್ದು… ಹೀಗೆ ಪಟ್ಟಿ ಬೆಳೆಯುತ್ತದೆ.
ಗಿಲ್, ಜೈಸ್ವಾಲ್, ಸೂರ್ಯ, ಪಂತ್, ಸಂಜು, ಪಾಂಡ್ಯ, ರಿಂಕು ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಸರದಿ ಬಲಾಡ್ಯವಾಗಿಯೇ ಕಾಣುತ್ತದೆ. ಆದರೆ ಪ್ರಧಾನ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ವೇಗದ ಬೌಲಿಂಗ್ ವಿಭಾಗ ತುಸು ದುರ್ಬಲವೇನೋ ಅನಿಸುತ್ತದೆ. ಸಿರಾಜ್, ಅರ್ಷದೀಪ್ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು.
ತಂಡದ ಸ್ಪಿನ್ ವಿಭಾಗ ವೈವಿಧ್ಯಮಯ. ಅಕ್ಷರ್, ಬಿಷ್ಣೋಯಿ, ವಾಷಿಂಗ್ಟನ್ ಲಂಕಾ ಟ್ರ್ಯಾಕ್‌ಗಳಲ್ಲಿ ಮಿಂಚುವ ಎಲ್ಲ ಸಾಧ್ಯತೆ ಇದೆ. ಇವರಲ್ಲಿಬ್ಬರು ಆಲ್‌ರೌಂಡರ್. ಸವ್ಯಸಾಚಿಗಳ ಯಾದಿಯಲ್ಲಿ ಪಾಂಡ್ಯ, ದುಬೆ ಕೂಡ ಇದ್ದಾರೆ.
ಲಂಕೆಗೂ ನೂತನ ಕೋಚ್, ಕ್ಯಾಪ್ಟನ್
ಶ್ರೀಲಂಕಾ ಕೂಡ ನೂತನ ನಾಯಕ ಹಾಗೂ ತರಬೇತುದಾರನೊಂದಿಗೆ ಕಣಕ್ಕಿಳಿ ಯಲಿದೆ. ನಾಯಕ ಚರಿತ ಅಸಲಂಕ ಅವರಿಗೆ ಇದು ನಿಜವಾದ ಅಗ್ನಿಪರೀಕ್ಷೆ. ಮಾಜಿ ಹೀರೋ ಸನತ್ ಜಯಸೂರ್ಯ ಶ್ರೀಲಂಕಾದ ತಾತ್ಕಾಲಿಕ ಕೋಚ್ ಆಗಿ ಜವಾಬ್ದಾರಿ ವಹಿಸಲಿದ್ದಾರೆ. ಟಿ20 ವಿಶ್ವಕಪ್‌ನಿಂದ ಬೇಗನೇ ಹೊರಬಿದ್ದ ಲಂಕಾ, ಚಾಂಪಿಯನ್ ತಂಡವನ್ನು ಎದುರಿಸುವ ಒತ್ತಡದಲ್ಲಿದೆ. ಅದೂ ತವರಿನಲ್ಲಿ. ಸರಣಿ ಗೆದ್ದರೆ ಅದೊಂದು ಮಹಾನ್ ಸಾಧನೆಯಾಗಲಿದೆ.
ಆರಂಭ: ರಾತ್ರಿ 7.00
ಪ್ರಸಾರ: ಸೋನಿ ಸ್ಪೋರ್ಟ್ಸ್