Advertisement

ಭಾರತ-ದಕ್ಷಿಣ ಆಫ್ರಿಕಾ 3 ಪಂದ್ಯಗಳ ಟಿ20 ಸರಣಿ

06:00 AM Feb 18, 2018 | |

ಜೊಹಾನ್ಸ್‌ಬರ್ಗ್‌: ಏಕದಿನ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 5-1 ಅಂತರದಿಂದ ಬಗ್ಗುಬಡಿದ ಭಾರತ, ಇದೇ ಹುರುಪಿನಲ್ಲಿ ಟಿ20 ಸರಣಿಯಲ್ಲೂ ಮ್ಯಾಜಿಕ್‌ ಮಾಡುವ ಉಮೇದಿನಲ್ಲಿದೆ. 3 ಪಂದ್ಯಗಳ ಚುಟುಕು ಸರಣಿ ರವಿವಾರದಿಂದ ಜೊಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿದ್ದು, ಮಳೆ ಸಹಕರಿಸಿದರೆ ಉತ್ತಮ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.

Advertisement

ಟಿ20 ಸರಣಿಗಾಗಿ ಆರಿಸಲಾದ ಭಾರತ ತಂಡದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗಿವೆ. ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಒಂದು ವರ್ಷದ ಬಳಿಕ ಕಾಣಿಸಿಕೊಂಡಿದ್ದಾರೆ. ಈ ಸಲದ ಐಪಿಎಲ್‌ ಹರಾಜಿನಲ್ಲಿ ಬಂಪರ್‌ ಬೆಲೆಗೆ ಮಾರಾಟವಾದ ಎಡಗೈ ವೇಗಿ ಜೈದೇವ್‌ ಉನಾದ್ಕತ್‌, ಕರ್ನಾಟಕದ ಆರಂಭಕಾರ ಕೆ.ಎಲ್‌. ರಾಹುಲ್‌ ರೇಸ್‌ನಲ್ಲಿದ್ದಾರೆ. ಉಳಿದಂತೆ ಏಕದಿನ ಸರಣಿಯಲ್ಲಿ ಹರಿಣಗಳನ್ನು ಬೇಟೆಯಾಡಿದ ಬಹುಪಾಲು ಆಟಗಾರರೇ ಟೀಮ್‌ ಇಂಡಿಯಾದಲ್ಲಿ ತುಂಬಿದ್ದಾರೆ. ಇವರಿಗೆಲ್ಲ ದಕ್ಷಿಣ ಆಫ್ರಿಕಾ ಟ್ರ್ಯಾಕ್‌ ಈಗಾಗಲೇ ಚಿರಪರಿಚಿತ. ಏಕದಿನ ಸರಣಿಯ ಲಯವನ್ನು ಮುಂದುವರಿಸಿಕೊಂಡು ಹೋದರೆ ಚುಟುಕು ಕ್ರಿಕೆಟ್‌ನಲ್ಲೂ ಮೇಲುಗೈ ಸಾಧಿಸುವುದು ಭಾರತಕ್ಕೆ ಅಸಾಧ್ಯವೇನಲ್ಲ.

ಶತಕವೀರರಾದ ಕೊಹ್ಲಿ, ಧವನ್‌, ರೋಹಿತ್‌ ಮತ್ತೂಮ್ಮೆ ಬ್ಯಾಟಿಂಗ್‌ ಮಿಂಚು ಹರಿಸುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಪಾಂಡೆ-ಪಾಂಡ್ಯ ಸಿಡಿಯುವುದನ್ನು, ಚಾಹಲ್‌-ಕುಲದೀಪ್‌ ಸ್ಪಿನ್‌ ಮ್ಯಾಜಿಕ್‌ ಮಾಡುವುದನ್ನು ಕಾತರದಿಂದ ಕಾಯುತ್ತಿದ್ದಾರೆ.

ಮಧುರ ನೆನಪುಗಳು…
ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟಿ20 ನೆನಪು ಮಧುರ, ಸ್ಮರಣೀಯ. ಭಾರತ ತನ್ನ ಟಿ20 ಇತಿಹಾಸದ ಮೊದಲ ಪಂದ್ಯವನ್ನು ಜಯಿಸಿದ್ದು ಇದೇ ವಾಂಡರರ್ ಅಂಗಳದಲ್ಲಿ (2006). ಮರು ವರ್ಷವೇ ಧೋನಿ ಪಡೆ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ್ದು ಕೂಡ ದಕ್ಷಿಣ ಆಫ್ರಿಕಾದಲ್ಲೇ. ಹರಿಣಗಳ ನಾಡಿನಲ್ಲಿ ಆಡಿದ ಈವರೆಗಿನ 4 ಟಿ20 ಪಂದ್ಯಗಳಲ್ಲಿ ಭಾರತ ಮೂರನ್ನು ಜಯಿಸಿದೆ, ಒಂದರಲ್ಲಷ್ಟೇ ಸೋತಿದೆ.

ಭಾರತ-ದಕ್ಷಿಣ ಆಫ್ರಿಕಾ ನಡುವೆ ಈವರೆಗೆ 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ ಆರನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ನಾಲ್ಕರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ.

Advertisement

ಒತ್ತಡದಲ್ಲಿ ಹರಿಣಗಳ ಪಡೆ
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಪಾಲಿಗೆ ಇದು ತೀವ್ರ ಒತ್ತಡದ ಸರಣಿ. ಏಕದಿನ ಸರಣಿಯ ಸೋಲು ದುಃಸ್ವಪ್ನವಾಗಿ ಕಾಡುತ್ತಿರುವಾಗಲೇ ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ಬಲಿಷ್ಠವಾಗಿರುವ ಭಾರತದ ಸವಾಲನ್ನು ಎದುರಿಸಬೇಕಾಗಿದೆ. ತಂಡದ ಬಹುತೇಕ ಆಟಗಾರರಿಗೆ ಅನುಭವದ ಕೊರತೆ ಕಾಡುತ್ತಿದೆ. ಡು ಪ್ಲೆಸಿಸ್‌, ಡಿ ಕಾಕ್‌ ಮೊದಲಾದ ಹಾರ್ಡ್‌ ಹಿಟ್ಟರ್‌ಗಳು ಈ ಸರಣಿಯಿಂದಲೂ ಬೇರ್ಪಟ್ಟಿದ್ದಾರೆ. ಎಬಿಡಿ ಮೇಲೆ ಹೆಚ್ಚಿನ ಭಾರ ಬೀಳಲಿದೆ. ನಾಯಕ ಜೆಪಿ ಡ್ಯುಮಿನಿ ಉತ್ತಮ ಆಲ್‌ರೌಂಡರ್‌ ಆದರೂ ಇವರ ಫಾರ್ಮ್ ಬಗ್ಗೆ ನಂಬಿಕೆ ಸಾಲದು. ಆದರೂ ಏಕದಿನ ಸರಣಿಯ ಕಹಿಯನ್ನು ಹೊಡೆದೋಡಿಸಲು ಡ್ಯುಮಿನಿ ಪಡೆ ಗೆಲುವಿನ ಹಳಿಯನ್ನು ಏರಲೇಬೇಕಿದೆ.

ಟಿ20 ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಸುರೇಶ್‌ ರೈನಾ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಜೈದೇವ್‌ ಉನಾದ್ಕತ್‌, ಶಾದೂìಲ್‌ ಠಾಕೂರ್‌.

ದಕ್ಷಿಣ ಆಫ್ರಿಕಾ: ಜೆಪಿ ಡ್ಯುಮಿನಿ (ನಾಯಕ), ಫ‌ರ್ಹಾನ್‌ ಬೆಹದೀìನ್‌, ಜೂನಿಯರ್‌ ಡಾಲ, ಎಬಿ ಡಿ ವಿಲಿಯರ್, ರೀಝ ಹೆಂಡ್ರಿಕ್ಸ್‌, ಕ್ರಿಸ್ಟಿಯನ್‌ ಜಾನ್‌ಕರ್‌, ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮಾರಿಸ್‌, ಡೇನ್‌ ಪ್ಯಾಟರ್ಸನ್‌, ಆರನ್‌ ಫ್ಯಾಂಗಿಸೊ, ಆ್ಯಂಡಿಲ್‌ ಫೆಲುಕ್ವಾಯೊ, ತಬ್ರೈಜ್‌ ಶಂಸಿ, ಜಾನ್‌-ಜಾನ್‌ ಸ್ಮಟ್ಸ್‌.

ಆರಂಭ: ಸಂಜೆ 6.00
ಪ್ರಸಾರ: ಸೋನಿ ಟೆನ್‌ 1

Advertisement

Udayavani is now on Telegram. Click here to join our channel and stay updated with the latest news.

Next