Advertisement

ಟಿ20 ಕ್ಲೆ „ಮ್ಯಾಕ್ಸ್‌ , ಕ್ಷಣಗಣನೆ…

07:30 AM Feb 24, 2018 | |

ಕೇಪ್‌ಟೌನ್‌: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಜತೆಗೆ ಟೀಮ್‌ ಇಂಡಿಯಾದ 8 ವಾರಗಳ ಸುದೀರ್ಘ‌ ಅವಧಿಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ತೆರೆ ಸನ್ನಿಹಿತವಾಗಿದೆ. ಟೆಸ್ಟ್‌ ಸರಣಿಯಲ್ಲಿ ಕೊನೆಯ ಹಂತದಲ್ಲಿ ನೀಡಿದ ತಿರುಗೇಟು, ಏಕದಿನ ಸರಣಿಯಲ್ಲಿ 5-1 ವೈಭವ, ಟಿ20ಯಲ್ಲಿ ಸದ್ಯ ಸಮಬಲ ಸಾಧನೆ… ಇವು ಹರಿಣಗಳ ನಾಡಿನಲ್ಲಿ ಟೀಮ್‌ ಇಂಡಿಯಾದ ಗಮನಾರ್ಹ ಸಾಧನೆಗಳಾಗಿ ದಾಖಲಾಗಿವೆ. ಶನಿವಾರ ಕೇಪ್‌ಟೌನ್‌ನಲ್ಲಿ ಅಂತಿಮ ಟಿ20 ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡರೆ ಕೊಹ್ಲಿ ಪಡೆಯ ಆಫ್ರಿಕಾ ಪ್ರವಾಸ ಪರಿಪೂರ್ಣಗೊಳ್ಳಲಿದೆ. ಆದರೆ ಇದು ಸಾಧ್ಯವೇ ಎಂಬುದು “50-50′ ಉತ್ತರದ ಪ್ರಶ್ನೆ!

Advertisement

ಚುಟುಕು ಕ್ರಿಕೆಟ್‌ನಲ್ಲಿ ಏನೂ ಆಗಬಹುದು ಎಂಬುದಕ್ಕೆ ಬುಧವಾರದ ಸೆಂಚುರಿಯನ್‌ ಪಂದ್ಯವೇ ಸಾಕ್ಷಿ. ಒಬ್ಬ ಕ್ಲಾಸೆನ್‌, ಒಬ್ಬ ಚಾಹಲ್‌ ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಡಬಲ್ಲರು ಎಂಬುದು ಸಾಬೀತಾಗಿದೆ. ಹಾಗೆಯೇ ಶನಿವಾರದ ಪಂದ್ಯದಲ್ಲಿ ಮತ್ತೂಬ್ಬ ಸ್ಟಾರ್‌, ಮತ್ತೂಬ್ಬ ವಿಲನ್‌ ಸೃಷ್ಟಿಯಾಗಬಹುದು. ಫ‌ಲಿತಾಂಶವೂ ರೋಚಕವಾಗಿದ್ದೀತು. ಸರಣಿ ಗೆಲ್ಲಲು ಇತ್ತಂಡಗಳೂ ತುದಿಗಾಲಲ್ಲಿ ನಿಂತಿವೆ.

ಜೊಹಾನ್ಸ್‌ಬರ್ಗ್‌ನಲ್ಲಿ 28 ರನ್ನುಗಳಿಂದ ಗೆದ್ದ ಭಾರತ, ಸೆಂಚುರಿಯನ್‌ನಲ್ಲಿ 6 ವಿಕೆಟ್‌ಗಳಿಂದ ಶರಣಾಯಿತು. ಮೊದಲ ಪಂದ್ಯದಲ್ಲಿ ಶಿಖರ್‌ ಧವನ್‌-ಭುವನೇಶ್ವರ್‌ ಕುಮಾರ್‌, 2ನೇ ಮುಖಾಮುಖೀಯಲ್ಲಿ ಹೆನ್ರಿಚ್‌ ಕ್ಲಾಸೆನ್‌-ಜೆಪಿ ಡ್ಯುಮಿನಿ ಸ್ಟಾರ್‌ಗಳಾಗಿ ಮೂಡಿಬಂದಿದ್ದರು. ಸೆಂಚುರಿಯನ್‌ನಲ್ಲಿ ನೀಡಿದ ತಿರುಗೇಟಿನಿಂದಾಗಿ ಆತಿಥೇಯರ ಆತ್ಮವಿಶ್ವಾಸ ನೂರ್ಮಡಿಗೊಂಡಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ “ಪಿಂಕ್‌ ಡೇ’ ಏಕದಿನದಲ್ಲಿ ಹಳಿ ಏರಿದ ಹರಿಣಗಳ ಪಡೆ ಮತ್ತೆ ಹಳಿ ತಪ್ಪಿದ ದೃಷ್ಟಾಂತ ಕಣ್ಮುಂದೆಯೇ ಇದೆ. ಹೀಗಾಗಿ ಕೇಪ್‌ಟೌನ್‌ ಕದನ ಸಹಜವಾಗಿಯೇ ಹೆಚ್ಚಿನ ಕುತೂಹಲ ಮೂಡಿಸಿದೆ.

ಭಾರತ ಈವರೆಗೆ ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್‌’ನಲ್ಲಿ ಟಿ20 ಪಂದ್ಯ ಆಡಿಲ್ಲ. ಹಾಗೆಯೇ ಇಲ್ಲಿ ದಕ್ಷಿಣ ಆಫ್ರಿಕಾ ದಾಖಲೆ ಗಳೂ ಗಮನಾರ್ಹ ಮಟ್ಟದಲ್ಲಿಲ್ಲ. ಆಡಿದ 8 ಪಂದ್ಯಗಳಲ್ಲಿ ಐದನ್ನು ಸೋತಿದೆ. ಇಲ್ಲಿನ 2 ಗೆಲುವುಗಳು 2007ರ ಟಿ20 ವಿಶ್ವಕಪ್‌ ವೇಳೆ ದಾಖಲಾಗಿವೆ. ದ್ವಿಪಕ್ಷೀಯ ಸರಣಿಯ ಏಕೈಕ ಜಯ 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ದಾಖಲಾಗಿತ್ತು. ಆದರೆ ಟಿ20 ಕ್ರಿಕೆಟ್‌ನಲ್ಲಿ ದಾಖಲೆ, ಇತಿಹಾಸಕ್ಕೆಲ್ಲ ಯಾವುದೇ ಮಹತ್ವವಿಲ್ಲ. ಶನಿವಾರದ್ದು ಇನ್ನೊಂದು ಹೊಸ ಪಂದ್ಯ, ಅಷ್ಟೇ. ಇಲ್ಲಿ ಏನೂ ಸಂಭವಿಸಬಹುದು.

ಜಸ್‌ಪ್ರೀತ್‌ ಬುಮ್ರಾ ಅನುಮಾನ
ಟಿ20 ಸ್ಪೆಷಲಿಸ್ಟ್‌ ಬುಮ್ರಾ ಕಿಬ್ಬೊಟ್ಟೆ ನೋವಿನಿಂದ ಹಿಂದಿನ ಪಂದ್ಯದಿಂದ ಹೊರಗುಳಿದದ್ದು ಭಾರತಕ್ಕೆ ದೊಡ್ಡ ಹೊಡೆತ ವಾಗಿ ಪರಿಣಮಿಸಿತ್ತು. ಅವರಿನ್ನೂ ಪೂರ್ತಿಯಾಗಿ ಚೇತರಿಸಿ ಕೊಂಡಿಲ್ಲ ಎಂಬ ಸುದ್ದಿ ಕೇಳಿ ಬಂದಿದೆ. ಅಕಸ್ಮಾತ್‌ ಬುಮ್ರಾ ಆಡಲಿಳಿದರೆ ಜೈದೇವ್‌ ಉನಾದ್ಕತ್‌ ಜಾಗ ಬಿಡಬೇಕಾಗುತ್ತದೆ. ಸೆಂಚುರಿಯನ್‌ನಲ್ಲಿ ಉತ್ತಮ ನಿಯಂತ್ರಣ ಸಾಧಿಸಿದ ಶಾದೂìಲ್‌ ಠಾಕೂರ್‌ ಸ್ಥಾನ ಉಳಿಸಿಕೊಳ್ಳಬಹುದು.ಭಾರತದ ಸ್ಪಿನ್‌ ವಿಭಾಗದಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಹೆಚ್ಚು. ದುಬಾರಿಯಾದ ಚಾಹಲ್‌ ಬದಲು ಕುಲದೀಪ್‌ ಅವಕಾಶ ಪಡೆಯಲೂಬಹುದು. ಅಕ್ಷರ್‌ ಪಟೇಲ್‌ ಹೆಸರೂ ಹರಿದಾಡುತ್ತಿದೆ. ಅಂದಹಾಗೆ, ಏಕದಿನ ಸರಣಿಯ ಕೇಪ್‌ಟೌನ್‌ ಪಂದ್ಯದಲ್ಲಿ ಭಾರತ ಮುನ್ನೂರರ ಗಡಿ ದಾಟಿತ್ತು. ಜವಾಬಿತ್ತ ದಕ್ಷಿಣ ಆಫ್ರಿಕಾ ಕುಲದೀಪ್‌-ಚಾಹಲ್‌ ದಾಳಿಗೆ ತತ್ತರಿಸಿ 124 ರನ್ನು ಗಳ ಭಾರೀ ಸೋಲಿಗೆ ತುತ್ತಾಗಿತ್ತು. ಇಬ್ಬರೂ ತಲಾ 4 ವಿಕೆಟ್‌ ಉರುಳಿಸಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಯಾರು ಯಾರಿಗೆ ಕುಟುಕುವರೋ?!

Advertisement

ಆತಿಥೇಯರಲ್ಲಿ ಹೊಸ ಹುರುಪು
ಸೆಂಚುರಿಯನ್‌ ಗೆಲುವು ಸಹಜವಾಗಿಯೇ ಆಫ್ರಿಕಾ ಪಾಳೆಯದಲ್ಲಿ ಸಂಭ್ರಮ, ಹೊಸ ಹುರುಪನ್ನು ಮೂಡಿಸಿದೆ. ಕ್ಲಾಸೆನ್‌, ಡ್ಯುಮಿನಿ ಅವರ ಸ್ಫೋಟಕ ಬ್ಯಾಟಿಂಗ್‌, ಇವರು ಚಾಹಲ್‌ ಅವರನ್ನು ದಂಡಿಸಿದ ಪರಿ ಈಗಲೂ ಕಣ್ಮುಂದೆ ಸುಳಿಯುತ್ತಿದೆ. ಆದರೂ ಆತಿಥೇಯ ತಂಡ ಪರಿಪೂರ್ಣವೇನಲ್ಲ. ಆರಂಭಕಾರ ಜಾನ್‌-ಜಾನ್‌ ಸ್ಮಟ್ಸ್‌, ಬಿಗ್‌ ಹಿಟ್ಟರ್‌ ಡೇವಿಡ್‌ ಮಿಲ್ಲರ್‌ ಫಾರ್ಮ್ ಶಂಕಾಸ್ಪದ. ಕ್ಲಾಸೆನ್‌ ಅಥವಾ ಡ್ಯುಮಿನಿ ಬ್ಯಾಟಿಂಗ್‌ ರಭಸವನ್ನು ಉಳಿಸಿಕೊಳ್ಳಬಲ್ಲರೇ ಎಂಬುದು ಮುಖ್ಯ ಪ್ರಶ್ನೆ. ಹಾಗೆಯೇ ಬೆಹದೀìನ್‌, ಫೆಲುಕ್ವಾಯೊ, ಮಾರಿಸ್‌ ಕೂಡ ಬಿಗ್‌ ಹಿಟ್ಟರ್‌ಗಳೆಂಬುದನ್ನು ನಿರೂಪಿಸುವ ಅಗತ್ಯವಿದೆ. ನಿರ್ಣಾಯಕ ಪಂದ್ಯ ಕ್ಕಾಗಿ ದಕ್ಷಿಣ ಆಫ್ರಿಕಾ ಗೆಲುವಿನ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ವನಿತೆಯರಿಗೂ ಇಂದು ಫೈನಲ್‌ !
ಭಾರತದ ಪುರುಷರ ತಂಡ ಟಿ20 ಸರಣಿ ಗೆಲುವಿಗೆ ಹೋರಾಟ ನಡೆಸುವ ಮೊದಲು ಇದೇ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ವನಿತೆಯರ 5ನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಲಿದೆ. ಆದರೆ ಕೊಹ್ಲಿ ಪಡೆಗೆ ಹೋಲಿಸಿದರೆ ಹರ್ಮನ್‌ಪ್ರೀತ್‌ ಕೌರ್‌ ಬಳಗದ ಮೇಲೆ ಹೆಚ್ಚಿನ ಒತ್ತಡವಿಲ್ಲ. ಕಾರಣ, 2-1 ಮುನ್ನಡೆಯಲ್ಲಿರುವ ಭಾರತದ ವನಿತೆಯರಿಗೆ ಸರಣಿ ಸೋಲಿನ ಭೀತಿ ಇಲ್ಲ. ಸರಣಿಯ ಮೊದಲೆರಡು ಪಂದ್ಯಗಳನ್ನು ಅಧಿಕಾರ ಯುತವಾಗಿ ಗೆದ್ದ ಭಾರತದ ವನಿತೆಯರು, 3ನೇ ಪಂದ್ಯದಲ್ಲಿ ಎಡವಿದರು. ಬುಧವಾರದ 4ನೇ ಪಂದ್ಯ ಮಳೆಯಿಂದ ರದ್ದುಗೊಂಡಿತು. ಹೀಗಾಗಿ ಶನಿವಾರ ಗೆದ್ದರೆ ಆಗ ದಕ್ಷಿಣ ಆಫ್ರಿಕಾದಲ್ಲಿ ಅವಳಿ ಸರಣಿ ವಶಪಡಿಸಿಕೊಂಡ ಹಿರಿಮೆ ಭಾರತದ್ದಾಗಲಿದೆ. ಇದಕ್ಕೂ ಮುನ್ನ ಭಾರತ ಏಕದಿನ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡಿತ್ತು.

ಮಂಧನಾ, ಮಿಥಾಲಿ, ವೇದಾ, ಹರ್ಮನ್‌ಪ್ರೀತ್‌ ಅವರ ನ್ನೊಳಗೊಂಡ ಭಾರತದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಇಲ್ಲದಿರುವುದೊಂದು ಕೊರತೆ. 4ನೇ ಪಂದ್ಯದಲ್ಲಿ ಆಫ್ರಿಕಾ ಆರಂಭಿಕರಾದ ಲೀ-ನೀಕರ್ಕ್‌ ಶತಕದ ಜತೆಯಾಟ ನಡೆಸಿ ಒತ್ತಡ ಹೇರಿದ್ದರು. ನ್ಯೂಲ್ಯಾಂಡ್ಸ್‌ನಲ್ಲಿ ಮೇಲುಗೈ ಸಾಧಿಸಬೇ ಕಾದರೆ ಭಾರತದ ಬೌಲಿಂಗ್‌ ದಾಳಿ ಹರಿತಗೊಳ್ಳಬೇಕಿದೆ.

ಪಂದ್ಯ ಸಂಜೆ 4.30ಕ್ಕೆ ಆರಂಭವಾಗಲಿದೆ.

ಭಾರತ: ಧವನ್‌, ರೋಹಿತ್‌ ಶರ್ಮ, ರೈನಾ, ವಿರಾಟ್‌ ಕೊಹ್ಲಿ (ನಾಯಕ), ಮನೀಷ್‌ ಪಾಂಡೆ, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೈದೇವ್‌ ಉನಾದ್ಕತ್‌/ ಬುಮ್ರಾ, ಶಾದೂìಲ್‌ ಠಾಕೂರ್‌, ಕುಲದೀಪ್‌ ಯಾದವ್‌/ಅಕ್ಷರ್‌ ಪಟೇಲ್‌/ ಚಾಹಲ್‌.

ದಕ್ಷಿಣ ಆಫ್ರಿಕಾ: ರೀಝ ಹೆಂಡ್ರಿಕ್ಸ್‌, ಜಾನ್‌ ಸ್ಮಟ್ಸ್‌, ಜೆಪಿ ಡ್ಯುಮಿನಿ (ನಾಯಕ), ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಫ‌ರ್ಹಾನ್‌ ಬೆಹದೀìನ್‌, ಆ್ಯಂಡಿಲ್‌ ಫೆಲುಕ್ವಾಯೊ, ಕ್ರಿಸ್‌ ಮಾರಿಸ್‌, ಡೇನ್‌ ಪ್ಯಾಟರ್ಸನ್‌, ಜೂನಿಯರ್‌ ಡಾಲ, ತಬ್ರೈಜ್‌ ಶಂಸಿ.

Advertisement

Udayavani is now on Telegram. Click here to join our channel and stay updated with the latest news.

Next