ನಾಗ್ಪುರ: ಲಡಾಖ್ ಗಡಿಯಲ್ಲಿ ಭೂಮಿ ಅತಿಕ್ರಮಿಸಲು ಚೀನಾ ನಡೆಸಿದ ಎಲ್ಲಾ ಹುನ್ನಾರಗಳಿಗೆ ಭಾರತ ಸಮರ್ಥವಾಗಿ ಉತ್ತರ ನೀಡಿದೆ. ಭಾರತದ ಪ್ರತ್ಯುತ್ತರದಿಂದ ಬೀಜಿಂಗ್ ಗೆ ಆತಂಕ ಆರಂಭವಾಗಿದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದರು.
ನಾಗ್ಪುರದಲ್ಲಿ ನಡೆದ ಆರ್ ಎಸ್ಎಸ್ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಶಕ್ತಿ, ಸಾಮರ್ಥ್ಯ, ವ್ಯಾಪ್ತಿಯಲ್ಲಿ ಭಾರತವು ಚೀನಾಕ್ಕಿಂತ ದೊಡ್ಡದಾಗಿರಬೇಕು ಎಂದು ಹೇಳಿದರು.
ಸಿಎಎ ಯಾವುದೇ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯಲ್ಲ. ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸಹೋದರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕಾನೂನು. ಸಿಎಎ ಹೆಸರಿನಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಕೀಳು ರಾಜಕೀಯವನ್ನು ದೇಶದ ಜನತೆ ಸ್ಪಷ್ಟವಾಗಿ ತಿರಸ್ಕರಿಸಿರುವುದು ಸಂತೋಷದ ಸಂಗತಿ. ಮುಸ್ಲಿಂ ಸಹೋದರರು ಸುಳ್ಳು ರಾಜಕೀಯ ದಾಳಕ್ಕೆ ಬಲಿಯಾಗಬಾರದು ಎಂದು ಮೋಹನ್ ಭಾಗ್ವತ್ ಹೇಳಿದರು.
ಇದನ್ನೂ ಓದಿ:ನೇಪಾಲದ 7 ಗಡಿಜಿಲ್ಲೆಗಳ ಭೂಪ್ರದೇಶ ನುಂಗಿದ ಚೀನ
ಕೋವಿಡ್-19 ಸೋಂಕು ಹಾವಳಿಯಿಂದ ದೇಶ ನಲುಗಿದ್ದು ,ಆದರೂ ಕೇಂದ್ರ ಸರ್ಕಾರದ ಶಿಸ್ತುಬದ್ಧ ನೀತಿ ಮತ್ತು ಜನತೆಯ ಸಹಕಾರದಿಂದ ಅದರ ಅಬ್ಬರವನ್ನು ತಗ್ಗಿಸಲು ಸಾಧ್ಯವಾಗಿದೆ. ತಮ್ಮ ಕುಟುಂಬ ಸದಸ್ಯರೊಂದಿಗೇ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೋವಿಡ್ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಎಂದು ಹೇಳಿದರು.