Advertisement
ನಿಕೊಲಸ್ ಪೂರಣ್ (89) ಹಾಗೂ ನಾಯಕ ಕೈರನ್ ಪೊಲಾರ್ಡ್ (74 ನಾಟೌಟ್) ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ನಿಗದಿತ 50 ಓವರ್ ಗಳಲ್ಲಿ 05 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಯುವ ಇನ್ ಫಾರ್ಮ್ ಬ್ಯಾಟ್ಸ್ ಮನ್ ನಿಕೊಲಸ್ ಪೂರಣ್ (89) ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಟೀಂ ಇಂಡಿಯಾ ಬೌಲರ್ ಗಳನ್ನು ಮನಬಂದಂತೆ ಚಚ್ಚಿದ ಪೂರಣ್ ಕೇವಲ 64 ಎಸೆತಗಳಲ್ಲಿ 89 ರನ್ ಸಿಡಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು. ಪೂರಣ್ ತಮ್ಮ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಿಡಿಸಿದರು.
ಚೇಸ್ ಔಟಾದ ನಂತರ ಬ್ಯಾಟಿಂಗ್ ಮಾಡಲು ಬಂದ ನಾಯಕ ಕೈರನ್ ಪೊಲಾರ್ಡ್ ಅವರು ಆರಂಭದಲ್ಲಿ ಪೂರಣ್ ಅವರಿಗೆ ಬೆಂಬಲ ನೀಡಿದರೆ ಬಳಿಕ ತಮ್ಮ ಎಂದಿನ ಸ್ಪೋಟಕ ಆಟಕ್ಕೆ ತೊಡಗಿಕೊಂಡರು. ಸ್ಲ್ಯಾಗ್ ಓವರ್ ನಲ್ಲಿ ಸಿಡಿದುನಿಂತ ಪೊಲಾರ್ಡ್ ಕೇವಲ 51 ಎಸೆತೆಗಳಲ್ಲಿ 71 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 07 ಭರ್ಜರಿ ಸಿಕ್ಸರ್ ಸಹ ಸೇರಿತ್ತು. ಪೂರಣ್ ಹಾಗೂ ಪೊಲಾರ್ಡ್ ಅವರು 135 ರನ್ ಗಳ ಅಮೂಲ್ಯ ಜೊತೆಯಾಟ ನೀಡಿದರು.
ಕೊನೆಯ 2.1 ಓವರ್ ಗಳಲ್ಲಿ (13 ಎಸೆತಗಳಲ್ಲಿ) ಪೊಲಾರ್ಡ್ ಮತ್ತು ಹೋಲ್ಡರ್ ಜೋಡಿಯ ಜೊತೆಯಾಟದಲ್ಲಿ 36 ರನ್ ಹರಿದು ಬಂತು. ಇದರಲ್ಲಿ ಪೊಲಾರ್ಡ್ 08 ಎಸೆತ ಎದುರಿಸಿ 29 ರನ್ ಬಾರಿಸಿದರು.
ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಮತ್ತು ಕಳೆದ ಪಂದ್ಯದ ಹ್ಯಾಟ್ರಿಕ್ ಹೀರೋ ಕುಲದೀಪ್ ಯಾದವ್ ಸಹಿತ ಭಾರತದ ಬೌಲರ್ ಗಳು ದುಬಾರಿಯಾದರು. ಪ್ರಥಮ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ನವದೀಪ್ ಸೈನಿ 02 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್, ಶಮಿ ಮತ್ತು ಜಡೇಜಾ ತಲಾ 01 ವಿಕೆಟ್ ಪಡೆದರು.