ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 18,840 ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ದೇಶಾದ್ಯಂತ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,36,04,394ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಜುಲೈ 09) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ತಿಂಗಳ ಹಿಂದೆ ಕಾಣೆಯಾಗಿದ್ದ ಕಮಾಂಡೋ ವಿಂಗ್ ಸೇನಾಧಿಕಾರಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ
ಒಂದೇ ದಿನದಲ್ಲಿ ಕೋವಿಡ್ ನಿಂದ 43 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,25,386ಕ್ಕೆ ಹೆಚ್ಚಳವಾಗಿದೆ.
ದೇಶದ ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಕೇರಳದಲ್ಲಿ 3,310, ಪಶ್ಚಿಮಬಂಗಾಳದಲ್ಲಿ 2,950, ಮಹಾರಾಷ್ಟ್ರದಲ್ಲಿ 2,944, ತಮಿಳುನಾಡಿನಲ್ಲಿ 2,722 ಹಾಗೂ ಕರ್ನಾಟಕದಲ್ಲಿ 1,037 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಅಂಕಿಅಂಶ ವಿವರಿಸಿದೆ.
ಈ ಐದು ರಾಜ್ಯಗಳಲ್ಲಿಯೇ ಸುಮಾರು ಶೇ.68.81ರಷ್ಟು ಕೋವಿಡ್ ಪ್ರಕರಣ ವರದಿಯಾಗಿದ್ದು, ಕೇರಳ ರಾಜ್ಯದಲ್ಲಿ ಶೇ.17.57ರಷ್ಟು ಕೋವಿಡ್ ಪ್ರಕರಣ ಪತ್ತೆಯಾಗಿದೆ ಎಂದು ಸಚಿವಾಲಯದ ವರದಿ ತಿಳಿಸಿದೆ.
24 ಗಂಟೆಯಲ್ಲಿ 16,104 ರೋಗಿಗಳು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶಾದ್ಯಂತ ಈವರೆಗೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,29,53,980ಕ್ಕೆ ಹೆಚ್ಚಳವಾಗಿದೆ.