Advertisement

ಮಾನವ ಹಕ್ಕು ರಕ್ಷಿಸುವುದ್ಯಾರು?ಆತ್ಮಾವಲೋಕನ ಮಾಡಿಕೊಳ್ಳಲಿ…

12:35 PM Jun 22, 2018 | Team Udayavani |

ವಿಶ್ವಸಂಸ್ಥೆ ಮಾನವ ಹಕ್ಕು  ಮಂಡಳಿ (ಯುಎನ್‌ಎಚ್‌ಆರ್‌ಸಿ) ಯಿಂದ ಹೊರ ಬರಲು ಅಮೆರಿಕ ನಿರ್ಧರಿಸಿದೆ. ಅಮೆರಿಕದ ಈ ನಿರ್ಧಾರ ನೋಡಿ ಜಗತ್ತಿನ ಅನೇಕ ರಾಷ್ಟ್ರಗಳು ಅಚ್ಚರಿ-ಬೇಸರ ವ್ಯಕ್ತಪಡಿಸುತ್ತಿವೆ. ಇದರಿಂದಾಗಿ ಜಾಗತಿಕ ಮಾನವಹಕ್ಕುಗಳ ಉಲ್ಲಂಘನೆಗಳು ಹೆಚ್ಚಾಗಬಹುದು
ಎನ್ನುವ ಆತಂಕ ಅನೇಕ ರಾಷ್ಟ್ರಗಳನ್ನು ಮತ್ತು ಮಾನವ ಹಕ್ಕು ಸಂಘಟನೆಗಳನ್ನು ಕಾಡುತ್ತಿದೆ. ಆದರೆ ಅಮೆರಿಕ ಹೇಳುತ್ತಿರುವುದೇ ಬೇರೆ. ಯುಎನ್‌ಎಚ್‌ಆರ್‌ಸಿಯಲ್ಲಿರುವ ಸದಸ್ಯ ರಾಷ್ಟ್ರಗಳೆಲ್ಲ ಇಸ್ರೇಲ್‌ ಬಗ್ಗೆ ಪೂರ್ವಗ್ರಹ ಪೀಡಿತವಾಗಿವೆ ಮತ್ತು ಈ ಆಯೋಗದಲ್ಲಿ ಮಾನವ ಹಕ್ಕು
ಉಲ್ಲಂಘನೆ ಮಾಡುತ್ತಿರುವ ಅನೇಕ ರಾಷ್ಟ್ರಗಳಿವೆ ಎನ್ನುವುದು ಅಮೆರಿಕದ ಅಸಮಾಧಾನಕ್ಕೆ ಕಾರಣವಂತೆ.

Advertisement

“ಮಾನವಹಕ್ಕು ಉಲ್ಲಂಘನೆಯ ಮಾತನಾಡುವ ಅಮೆರಿಕ ತನ್ನ ಸ್ವಹಿತಾಸಕ್ತಿಗಾಗಿ ಅನ್ಯದೇಶಗಳಲ್ಲಿ ಮಾಡುತ್ತಿರುವುದೇನು? ತನ್ನ ಅಥವಾ ತನ್ನ ಮಿತ್ರ ರಾಷ್ಟ್ರದ(ಇಸ್ರೇಲ್‌) ವಿಷಯ ಬಂದಾಗ ಅದಕ್ಕೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ “ಪೂರ್ವಗ್ರಹ’  ಕಾಣಿಸುತ್ತದೆಯಷ್ಟೆ’ ಎನ್ನುವುದು ಅಸಮಾಧಾನ ವ್ಯಕ್ತಪಡಿಸುತ್ತಿರುವವರ ವಾದ. ಈ ವಾದವನ್ನೂ ತಳ್ಳಿ ಹಾಕುವಂತಿಲ್ಲ. ಇತ್ತೀಚೆಗಷ್ಟೇ ಟ್ರಂಪ್‌ ಅವರು ಮಾನವ
ಹಕ್ಕು ಉಲ್ಲಂಘನೆಗೆ ಖ್ಯಾತರಾದ ಕಿಮ್‌ ಜಾಂಗ್‌ ಉನ್‌ರ ಕೈ ಕುಲುಕಿ ಬಂದದ್ದು ನೆನಪಿಸಿಕೊಂಡಾಗ, ಅಮೆರಿಕದ ಇಬ್ಬಗೆ ಗುಣ ಗೋಚರ ವಾಗುತ್ತದೆ.

ಮಾನವ ಹಕ್ಕು ಉಲ್ಲಂಘನೆ ಮಹಾಪರಾಧವೇ, ಯಾರು ಮಾಡಿದರೂ ಅದನ್ನು ಖಂಡಿಸಲೇಬೇಕು. ಆದರೆ ವಿಶ್ವ ಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಕೆಲ ವರ್ಷಗಳಿಂದ ಬಹುತೇಕ ಇಸ್ರೇಲ್‌ ಅನ್ನೇ ಗುರಿಯಾಗಿಸುತ್ತಾ ಬರುತ್ತಿರುವುದು ಸ್ಪಷ್ಟ. ಸೌದಿ ಅರೇಬಿಯಾ, ಚೀನಾ, ರಷ್ಯಾ, ಅಲ್ಜೀರಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಕ್ಯೂಬಾ, ವೆನಿಜುವೆಲಾದಂಥ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಯ
ಬಗ್ಗೆ ಹೆಚ್ಚು ಚರ್ಚೆಗಳಾಗಿಯೇ ಇಲ್ಲ. ಇದನ್ನೇ ಅಮೆರಿಕ ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿತ್ತು.

ಇದರ ಹೊರತಾಗಿಯೂ ಮಾನವಹಕ್ಕು ಆಯೋಗದ ವಿರುದ್ಧದ ಅಮೆರಿಕದ ಅಸಮಾಧಾನಕ್ಕೆ ದೊಡ್ಡ ಇತಿಹಾಸವೇ ಇದೆ. 2006ರಲ್ಲಿ ಯುಎನ್‌ಎಚ್‌ಆರ್‌ಸಿ ಅಸ್ತಿತ್ವಕ್ಕೆ ಬಂದಾಗ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್‌ ಬುಷ್‌ ತಮ್ಮ ದೇಶವನ್ನು ಇದರ ಭಾಗವಾಗಿಸಲು ನಿರಾಕರಿಸಿ 
ದ್ದರು. ಏಕೆಂದರೆ ಅದಕ್ಕೂ ಮುನ್ನ ವಿಶ್ವಸಂಸ್ಥೆಯಲ್ಲಿ ಇದೇ ರೀತಿಯ ಒಂದು ಸಂಸ್ಥೆಯಿತ್ತು. ಆ ಸಂಸ್ಥೆಯಲ್ಲೂ ಮಾನವ ಹಕ್ಕು ಉಲ್ಲಂಘನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಿದ್ದವು, ಯುಎನ್‌ಎಚ್‌ಆರ್‌ಸಿ ಅದರ ಮುಂದುವರಿದ ಭಾಗವಷ್ಟೇ ಎಂದಿತ್ತು ಅಮೆರಿಕ. 2009ರಲ್ಲಿ ಒಬಾಮಾ ಆಡಳಿತಾವಧಿಯಲ್ಲಿ ಅಮೆರಿಕ ಯುಎನ್‌ಎಚ್‌ ಆರ್‌ಸಿ ಸದಸ್ಯತ್ವ ಪಡೆಯಿತು. ಒಬಾಮಾರ ಈ ನಿರ್ಧಾರವನ್ನು ಆಗ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಜಾನ್‌ ಬೋಲ್ಟನ್‌ ವಿರೋಧಿಸಿದ್ದರು. “”ಅಮೆರಿಕ ಮುಳುಗುತ್ತಿರುವ ಹಡಗಿನಲ್ಲಿ ಹತ್ತಿ ಕುಳಿತಂತಿದೆ” ಎಂದು ಕುಟುಕಿದ್ದರು. ಈಗ ಅದೇ ಜಾನ್‌ ಬೋಲ್ಟನ್‌ ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹೆಗಾರ ಎನ್ನುವುದು ಗಮನಿಸಬೇಕಾದ ಸಂಗತಿ. ಅಮೆರಿಕದ ಈಗಿನ ನಿರ್ಧಾರದ ಹಿಂದೆ ಬೋಲ್ಟನ್‌ ಪಾತ್ರ ಪ್ರಮುಖ ಎನ್ನಲಾಗುತ್ತಿದೆ.

ಇದೇನೇ ಇದ್ದರೂ ಜಾಗತಿಕ ಶಾಂತಿಗಾಗಿ, ಮಾನವೀಯ ಮೌಲ್ಯ ಗಳನ್ನು ಎತ್ತಿಹಿಡಿಯುವುದಕ್ಕಾಗಿ ಸ್ಥಾಪಿತವಾದ ಇಂಥ ಸಂಸ್ಥೆಗಳು ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ಇದಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅಮೆರಿಕದ ನಿರ್ಧಾರದಿಂದ ಜಾಗತಿಕ ಶಾಂತಿಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದೆ ಎನ್ನುವ ಮಾತಿನಲ್ಲಿ ಎಷ್ಟು ಸತ್ಯವಿದೆಯೋ, ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ(ಯುಎನ್‌ಎಚ್‌ಆರ್‌ಸಿ)ಯು ಪೂರ್ವ ಗ್ರಹದಿಂದ ಕಾರ್ಯ ನಿರ್ವಹಿಸುತ್ತಿದೆ, ಅದರಲ್ಲಿರುವ ಅನೇಕ
ರಾಷ್ಟ್ರಗಳು ನಿರ್ವಿಘ್ನವಾಗಿ ಮಾನವ ಹಕ್ಕು ಉಲ್ಲಂ ಸುತ್ತಿವೆ, ಕೇವಲ ಇಸ್ರೇಲ್‌ ಅನ್ನೇ ಗುರಿ ಮಾಡುತ್ತಿವೆ ಎನ್ನುವ ಅಮೆರಿಕದ ಆರೋಪದಲ್ಲೂ ಸತ್ಯಾಂಶವಿದೆ. ವಿಶ್ವಸಂಸ್ಥೆ ಈಗಲಾದರೂ ಯುಎನ್‌ಎಚ್‌ಆರ್‌ಸಿಯ ಸದಸ್ಯ ರಾಷ್ಟ್ರಗಳ ನಿಜ ಸ್ವರೂಪವನ್ನು ಕಣ್ಣುತೆರೆದು ನೋಡುವಂತಾಗಲಿ: ಮೊದಲು ಈ ಜಾಗತಿಕ ವೇದಿಕೆ ಸ್ವತ್ಛವಾಗಬೇಕು, ಆಗ ಮಾತ್ರ ಜಗತ್ತು ಸ್ವತ್ಛವಾಗಬಲ್ಲದು, ಶಾಂತವಾಗಬಲ್ಲದು.

Advertisement
Advertisement

Udayavani is now on Telegram. Click here to join our channel and stay updated with the latest news.

Next