Advertisement

ಬಾಂಗ್ಲಾ ಎದುರು ಭರ್ಜರಿ ಜಯ: ಭಾರತಕ್ಕೆ ನಿರಂತರ 6ನೇ ಟೆಸ್ಟ್‌ ಸರಣಿ

03:14 PM Feb 13, 2017 | udayavani editorial |

ಹೈದರಾಬಾದ್‌ : ಪ್ರವಾಸಿ ಬಾಂಗ್ಲಾದೇಶ ಎದುರಿನ ಏಕೈಕ ಟೆಸ್ಟ್‌ ಪಂದ್ಯವನ್ನು ಭಾರತ 208 ರನ್‌ಗಳಿಂದ ಭರ್ಜರಿಯಾಗಿ ಜಯಿಸಿದೆ. 

Advertisement

ಯಾವುದೇ ರೀತಿಯಲ್ಲಿ ಫ‌ಲಕಾರಿಯಾಗಿರದ ಇಲ್ಲಿನ ರಾಜೀವ್‌ ಗಾಂಧಿ ಕ್ರಿಕೆಟ್‌ ಅಂಗಣದ ಪಿಚ್‌ ಮೇಲೆ ಭಾರತೀಯ ಎಸೆಗಾರರು, ವಿಶೇವಾಗಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅತ್ಯಂತ ಸಹನೆಯ ಬೌಲಿಂಗ್‌ ನಡೆಸಿ ಭಾರತಕ್ಕೆ ವಿಜಯ ತಂದು ಕೊಡುವಲ್ಲಿ ಸಫ‌ಲರಾಗಿದ್ದಾರೆ. 

ಇದು ಭಾರತೀಯ ಕ್ರಿಕೆಟ್‌ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ  ಸಂದಿರುವ ನಿರಂತರ ಆರನೇ ಟೆಸ್ಟ್‌  ಸರಣಿ ವಿಜಯವಾಗಿದೆ. ಟೆಸ್ಟ್‌ ಗೆಲವಿನ ಈ ಸರಣಿಯು 2015ರಲ್ಲಿ ಲಂಕಾ ಎದುರಿನ ವಿಜಯದೊಂದಿಗೆ ಆರಂಭವಾಗಿತ್ತು. 2015ರಲ್ಲಿ ಗಾಲೆಯಲ್ಲಿ ಲಂಕಾ ವಿರುದ್ಧದ ಟೆಸ್ಟ್‌ ಪಂದ್ಯವನ್ನು ಸೋತ ಬಳಿಕದ 19 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಅಜೇಯವಾಗಿ ತನ್ನ ಸಾಧನೆಯನ್ನು ಮುಂದುವರಿಸಿಕೊಂಡು ಬಂದಿರುವುದು ಗಮನಾರ್ಹವಾಗಿದೆ. 

ಈ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಆರು ವಿಕೆಟ್‌ ನಷ್ಟಕ್ಕೆ 687 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ 388 ರನ್‌ಗಳಿಗೆ ಆಲೌಟಾಗಿತ್ತು. 

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ನಾಲ್ಕು ವಿಕೆಟಿಗೆ 159 ರನ್‌ ಬಾರಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ  ಈ ಟೆಸ್ಟ್‌ ಪಂದ್ಯ ಜಯಿಸಲು 459ರನ್‌ಗಳ ಗುರಿಯನ್ನು ನಿಗದಿಸಿತ್ತು.

Advertisement

ನಿನ್ನೆ ಚಹಾ ವಿರಾಮದ ಅನಂತರ ಈ ವಿಜಯದ ಗುರಿಯನ್ನು ಬೆಂಬತ್ತಲು ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾದೇಶ 103 ರನ್‌  ತೆಗೆಯುವಷ್ಟರಲ್ಲಿ  ಮೂರು ವಿಕೆಟ್‌ ಕಳೆದುಕೊಂಡಿತ್ತು. 

ಇಂದಿನ ಐದನೇ ಹಾಗೂ ಅಂತಿಮ ದಿನದ ಆಟದಲ್ಲಿ  ಭೋಜನ ವಿರಾಮದ ನಂತರದ ಆಟದಲ್ಲಿ  ತನ್ನ ಗಳಿಕೆಯನ್ನು 250 ರನ್‌ ಮೊತ್ತಕ್ಕೆ ಏರಿಸುವುದರೊಳಗೆ ಬಾಂಗ್ಲಾ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿತು.

ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ ಆಟದಲಲ್ಲಿ ಭಾರತದ ಸ್ಪಿನ್‌ ಎಸೆಗಾರ ರವಿಚಂದ್ರನ್‌ ಅಶ್ವಿ‌ನ್‌ 73 ರನ್‌ ವೆಚ್ಚಕ್ಕೆ ನಾಲ್ಕು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜ 78 ರನ್‌ ವೆಚ್ಚಕ್ಕೆ ನಾಲ್ಕು ವಿಕೆಟ್‌ ಕಿತ್ತರು. ಇಶಾಂತ್‌ ಶರ್ಮಾ ಅವರಿಗೆ ಎರಡು ವಿಕೆಟ್‌ ಸಿಕ್ಕಿತು. 

ಬಾಂಗ್ಲಾ ದೇಶದ ದಾಂಡಿಗರ ಪೈಕಿ ಮಹಮ್ಮದುಲ್ಲಾ 64 ರನ್‌ ಬಾರಿಸಿ ಗರಿಷ್ಠ  ಸ್ಕೋರರ್‌ ಎನಿಸಿದರೆ ಸೌಮ್ಯಾ ಸರ್ಕಾರ್‌ 42 ರನ್‌ ಬಾರಿಸಿದರು. 

ಬಾಂಗ್ಲಾ ಎರಡನೇ ಇನ್ನಿಂಗ್ಸ್‌ ಆಟ ಕೇವಲ 100.3 ಓವರ್‌ಗಳಿಗೆ ಸೀಮಿತವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next