Advertisement

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

02:39 AM Apr 07, 2020 | Hari Prasad |

ಕೋವಿಡ್ 19 ವೈರಸ್ ಮಹಾಮಾರಿಗೆ ದೇಶದಲ್ಲಿ ಒಂದೇ ದಿನದಲ್ಲಿ 30 ಮಂದಿ ಸಾವಿಗೀಡಾಗಿದ್ದು, ಬರೋಬ್ಬರಿ 704 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ಸುದ್ದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೀಡಿದೆ. ದೇಶಾದ್ಯಂತ 4 ಸಾವಿರಕ್ಕೂ ಅಧಿಕ ಒಟ್ಟಾರೆ ಸೋಂಕಿತರ ಪೈಕಿ 1,445 ಪ್ರಕರಣಗಳು ತಬ್ಲೀಘಿ ಜಮಾತ್‌ ಸಮಾವೇಶಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿಯನ್ನೂ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ನೀಡಿದ್ದಾರೆ.

Advertisement

ಇದೇ ವೇಳೆ, ಕೋವಿಡ್ ನಿಂದ ಸಾವಿಗೀಡಾದವರ ಪೈಕಿ ಶೇ.73ರಷ್ಟು ಮಂದಿ ಪುರುಷರೇ ಆಗಿದ್ದು, ಮಹಿಳೆಯರ ಪ್ರಮಾಣ ಶೇ.27 ಇದೆ. ಅದರಲ್ಲೂ ಮೃತರಲ್ಲಿ ಬಹುತೇಕ ಮಂದಿ ಅಂದರೆ ಶೇ.63ರಷ್ಟು ಮಂದಿ 60 ವರ್ಷ ದಾಟಿದವರು ಎಂದೂ ಅಗರ್ವಾಲ್‌ ತಿಳಿಸಿದ್ದಾರೆ.

ಎಲ್ಲ ವಯೋಮಾನದವರಿಗೂ ಕೋವಿಡ್ 19 ಸೋಂಕು ತಗಲುತ್ತದೆ. ಆದರೆ ಅಸ್ತಮಾ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಅಂದರೆ ಹೆಚ್ಚಾಗಿ ಹಿರಿಯ ನಾಗರಿಕರಿಗೆ ಕೋವಿಡ್ ನಿಂದ ಹೆಚ್ಚು ಅಪಾಯ ಎಂದು ಅವರು ಹೇಳಿದ್ದಾರೆ.

ನಿಖರ ಸಾಕ್ಷ್ಯ ಸಿಕ್ಕಿಲ್ಲ: ಮಲೇರಿಯಾ ನಿಗ್ರಹ ಔಷಧ ಹೈಡ್ರೋಕ್ಸಿಕ್ಲೋರೋಕ್ವಿನ್‌ನ ಪರಿಣಾಮಕಾರಿತ್ವದ ಕುರಿತು ಇನ್ನೂ ನಿಖರ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ ಸದ್ಯಕ್ಕೆ ಅದನ್ನು ಸಾರ್ವಜನಿಕರಿಗೆ ನೀಡುವುದು ಸೂಕ್ತವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

4,554ಕ್ಕೇರಿದ ಸೋಂಕಿತರು: ದೇಶಾದ್ಯಂತ ಸೋಂಕಿತರ ಸಂಖ್ಯೆ ಸೋಮವಾರ 4,554ಕ್ಕೇರಿಕೆಯಾಗಿದೆ. ಅದೇ ರೀತಿ ಕೋವಿಡ್ ಗೆ ಈವರೆಗೆ 125 ಮಂದಿ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಮವಾರ ಒಂದೇ ದಿನ 33 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 781 ತಲುಪಿದೆ.

Advertisement

ಇನ್ನು ತಮಿಳುನಾಡಿನಲ್ಲಿ ಕೂಡ ಅಚ್ಚರಿಯೆಂಬಂತೆ 24 ಗಂಟೆಗಳ ಅವಧಿಯಲ್ಲಿ 50 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸಂಖ್ಯೆ 621ಕ್ಕೇರಿದೆ. ದಿಲ್ಲಿಯಲ್ಲಿ 20 ಮಂದಿಗೆ ಸೋಮವಾರ ಸೋಂಕು ದೃಢಪಟ್ಟಿದೆ. ಆಂಧ್ರದಲ್ಲಿ 51, ಕೇರಳದಲ್ಲಿ 13, ಉತ್ತರಪ್ರದೇಶದಲ್ಲಿ 27, ರಾಜಸ್ಥಾನದಲ್ಲಿ 22, ಕರ್ನಾಟಕದಲ್ಲಿ 12, ಹರ್ಯಾಣದಲ್ಲಿ 11 ಹೊಸ ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ.

ವಿಶ್ವಾದ್ಯಂತ 70,000 ಬಲಿ
ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿಗೆ 70 ಸಾವಿರ ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವಿಗೆ ಸಾಕ್ಷಿಯಾಗಿರುವುದು ಐರೋಪ್ಯ ಒಕ್ಕೂಟ ದೇಶಗಳಲ್ಲೇ. ಈ ಖಂಡವೊಂದರಲ್ಲೇ 50,215 ಮಂದಿ ಸಾವಿಗೀಡಾಗಿದ್ದಾರೆ.

ಹಿಂದೂ ನಾಯಕನ ವಿರುದ್ಧ ಕೇಸು
ತಬ್ಲೀಘಿ -ಎ-ಜಮಾತ್‌ ಸಂಘಟನೆಯ ವಿರುದ್ಧ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ ಕಾರಣಕ್ಕಾಗಿ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೂಜಾ ವಿರುದ್ಧ ಅಲಿಗಢದ ಸಮಾಜವಾದಿ ಪಕ್ಷದ ಶಾಸಕ ಹಾಜಿ ಜಮೀರ್‌ ಉಲ್ಲಾ ಖಾನ್‌ ಅವರು ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದಲ್ಲಿ ನಿರ್ಬಂಧ ಸಡಿಲಿಕೆ
ಲಾಕ್‌ ಡೌನ್‌ ನಿರ್ಬಂಧವನ್ನು ಸ್ವಲ್ಪಮಟ್ಟಿಗೆ ಸಡಿಲಿಸುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೋಮವಾರ ಘೋಷಿಸಿದ್ದಾರೆ. ವಾರಕ್ಕೊಂದು ಬಾರಿ ಮೊಬೈಲ್‌ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುತ್ತೇವೆ. ಆ ಮೂಲಕ ಸಾರ್ವಜನಿಕರಿಗೆ ಮೊಬೈಲ್‌ ರೀಚಾರ್ಜ್‌ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಂತೆಯೇ ಮೋಟಾರು ವರ್ಕ್‌ ಶಾಪ್‌ಗಳನ್ನು ಕೂಡ ತೆರೆಯಲು ಒಪ್ಪಿಗೆ ನೀಡಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next