ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 6,531 ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 315 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 578ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಫ್ಗಾನ್ ಮಹಿಳೆಯರಿಗೆ ದೂರದೂರಿಗೆ ಪ್ರಯಾಣಿಸಲೂ ನಿರ್ಬಂಧ ಹೇರಿದ ತಾಲಿಬಾನ್
ಕಳೆದ 24ಗಂಟೆಗಳ ಅವಧಿಯಲ್ಲಿ 925 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಇದರೊಂದಿಗೆ ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 75,841ಕ್ಕೆ ಇಳಿಕೆಯಾಗಿರುವುದಾಗಿ ವರದಿ ಹೇಳಿದೆ.
ದೇಶದಲ್ಲಿ 24 ಗಂಟೆಗಳಲ್ಲಿ 7,141 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೇ ಈವರೆಗೆ ದೇಶಾದ್ಯಂತ ಕೋವಿಡ್ ಸೋಂಕಿನಿಂದ 4,79,997 ಮಂದಿ ಸಾವನ್ನಪ್ಪಿರುವುದಾಗಿ ಅಂಕಿಅಂಶದಲ್ಲಿ ವಿವರಿಸಿದೆ.
ಕೋವಿಡ್ 19 ಸೋಂಕಿನಿಂದ ಒಟ್ಟು 3,42,37,495 ಮಂದಿ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಒಮಿಕ್ರಾನ್ ಭಾರತದಲ್ಲಿಯೂ ಪತ್ತೆಯಾಗತೊಡಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 578ಕ್ಕೆ ಏರಿಕೆಯಾಗಿದೆ. ಅಲ್ಲದೇ ಕನಿಷ್ಠ 151 ಮಂದಿ ಗುಣಮುಖರಾಗಿದ್ದಾರೆ ಎಂದು ಅಂಕಿಅಂಶದಲ್ಲಿ ತಿಳಿಸಿದೆ.