ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ 19 ಅಲೆ ಹೆಚ್ಚಳವಾಗುತ್ತಿದ್ದು, ಕಳೆದ 24ಗಂಟೆಯಲ್ಲಿ 24,882 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ದೇಶದಲ್ಲಿ 2.02 ಲಕ್ಷ ಸಕ್ರಿಯ ಕೋವಿಡ್ 19 ಪ್ರಕರಣ ವರದಿಯಾಗಿದೆ ಎಂದು ಶನಿವಾರ(ಮಾರ್ಚ್ 13) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾವನ್ನು ಮತ್ತೆ ಕುಟುಕಿದ ಮೈಕಲ್ ವಾನ್! ಸರಿಯಾಗಿ ತಿರುಗೇಟು ಕೊಟ್ಟ ಜಾಫರ್
ಕೋವಿಡ್ 19 ಸೋಂಕು ಪ್ರಕರಣ ಆರಂಭವಾದ ಸಂದರ್ಭದಿಂದ ಈವರೆಗೆ ಭಾರತದಲ್ಲಿ 1,13,33,728 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 1,09,73,260 ಮಂದಿ ಚೇತರಿಸಿಕೊಂಡಿದ್ದರು. ಒಟ್ಟು 1,58, 446 ಮಂದಿ ಕೋವಿಡ್ ವೈರಸ್ ನಿಂದಾಗಿ ಸಾವನ್ನಪ್ಪಿದ್ದರು. ದೇಶದಲ್ಲಿ ಈಗ 2,02,022 ಸಕ್ರಿಯ ಕೋವಿಡ್ ಪ್ರಕರಣಗಳಿರುವುದಾಗಿ ವರದಿ ವಿವರಿಸಿದೆ.
ವರದಿ ಪ್ರಕಾರ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದಾಗಿ ತಿಳಿಸಿದೆ.
ಗುರುವಾರ(ಮಾರ್ಚ್ 11) ಭಾರತದಲ್ಲಿ 23,285 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿತ್ತು. ಮಹಾರಾಷ್ಟ್ರದಲ್ಲಿ 14,317 ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿದ್ದು, ಕೇರಳದಲ್ಲಿ ದಿನಂಪ್ರತಿ 2,133 ಕೋವಿಡ್ ಪ್ರಕರಣ ಪತ್ತೆಯಾಗುತ್ತಿದೆ ಎಂದು ವರದಿ ಹೇಳಿದೆ.
ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.