ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,41, 986 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 285 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ ಒಟ್ಟು 4,83,463ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ಜನವರಿ 08) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ಉದ್ದೇಶಪೂರ್ವಕ ನಿರ್ಧಾರವಲ್ಲವೇ: ಡಿ.ಕೆ ಶಿವಕುಮಾರ್ ಪ್ರಶ್ನೆ
ಒಂದೇ ದಿನದಲ್ಲಿ 1,00,806 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 4,72,169ಕ್ಕೆ ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.
24ಗಂಟೆಯಲ್ಲಿ ದೇಶದಲ್ಲಿ 40,895 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಭಾರತದಾದ್ಯಂತ ಈವರೆಗೆ ಒಟ್ಟು 3,44,12,740 ಮಂದಿ ಗುಣಮುಖರಾಗಿದ್ದಾರೆ ಎಂದು ಅಂಕಿಅಂಶದಲ್ಲಿ ತಿಳಿಸಿದೆ.
ಒಂದು ದಿನದಲ್ಲಿ 64 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 3,071ಕ್ಕೆ ಏರಿಕೆಯಾಗಿದೆ. ಅಲ್ಲದೇ ಕನಿಷ್ಠ 1,203 ಮಂದಿ ಚೇತರಿಸಿಕೊಂಡಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಒಮಿಕ್ರಾನ್ ಸೋಂಕು (876) ಪತ್ತೆಯಾಗಿದ್ದು, ದೆಹಲಿಯಲ್ಲಿ 513, ಕರ್ನಾಟಕದಲ್ಲಿ 333, ರಾಜಸ್ಥಾನದಲ್ಲಿ 291, ಕೇರಳದಲ್ಲಿ 284 ಮತ್ತು ಗುಜರಾತ್ ನಲ್ಲಿ 204 ಪ್ರಕರಣ ವರದಿಯಾಗಿದೆ.