ಕಾಬೂಲ್ : ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಕೈ ಮೇಲಾಗುತ್ತಿರುವಂತೆ ಭಾರತ ಸರಕಾರವು ಕಂದಹಾರ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯಿಂದ 50ಕ್ಕೂ ಹೆಚ್ಚು ರಾಜತಾಂತ್ರಿಕ ಸಿಬಂದಿ ಮತ್ತು ಅಧಿಕಾರಿಗಳನ್ನು ತೆರವುಗೊಳಿಸುವ ಎಚ್ಚರಿಕೆಯ ಹೆಜ್ಜೆ ಇರಿಸಿದೆ.
ಶನಿವಾರವೇ ವಾಯುಪಡೆಯು ವಿಶೇಷ ವಿಮಾನವನ್ನು ಕಳುಹಿಸಿ ಭಾರತೀಯ ಅಧಿಕಾರಿಗಳನ್ನು ಸ್ವದೇಶಕ್ಕೆ ಕರೆತರಲಾಗಿದೆ. ಅಫ್ಘಾನ್ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವೆ ಕಂದಹಾರ್ ಸಮೀಪವೇ ಹೋರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದು ತಾತ್ಕಾಲಿಕ ಕ್ರಮ. ಅಫ್ಘಾನ್ ನ ಭಾರತದ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚುವ ಪ್ರಸ್ತಾವ ಇಲ್ಲ. ಸದ್ಯ ಸ್ಥಳೀಯ ಸಿಬಂದಿಯನ್ನು ಬಳಸಿಕೊಂಡು ದೂತಾವಾಸ ಕಚೇರಿಗಳು ಕಾರ್ಯಾಚರಿಸಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ ಹೇಳಿದ್ದಾರೆ. ಯುದ್ಧಗ್ರಸ್ಥ ರಾಷ್ಟ್ರದಲ್ಲಿರುವ ಭಾರತೀಯ ಮೂಲದವರು ಅನಗತ್ಯವಾಗಿ ಮನೆಯಿಂದ ಹೊರಕ್ಕೆ ಬರಬಾರದು ಎಂದು ಸಲಹೆ ನೀಡಿದ್ದಾರೆ.
ಪಾಕ್ ವಾಯುಪ್ರದೇಶ ಬಳಕೆ ಇಲ್ಲ
ಭಾರತೀಯ ರಾಜತಾಂತ್ರಿಕರನ್ನು ಕರೆತರಲು ಕಳುಹಿಸಲಾಗಿದ್ದ ವಿಶೇಷ ವಿಮಾನವು ಪಾಕ್ ವಾಯುಪ್ರದೇಶವನ್ನು ಬಳಸದೆಯೇ ಸಂಚರಿಸಿದೆ. ಪಾಕಿಸ್ಥಾನವು ತಾಲಿಬಾನಿ ಉಗ್ರರಿಗೆ ಆಶ್ರಯ ನೀಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಾಕ್ ವಾಯು ಪ್ರದೇಶದಿಂದ ದೂರ ಉಳಿಯಲಾಯಿತು ಎಂದು ಮೂಲಗಳು ತಿಳಿಸಿವೆ.