Advertisement

ಅಮೆರಿಕದಲ್ಲಿ ಭಾರತ-ಪಾಕ್‌ ಮಾತುಕತೆಗೆ ವೇದಿಕೆ ಸಿದ್ಧ

06:00 AM Sep 21, 2018 | Team Udayavani |

ಹೊಸದಿಲ್ಲಿ: ಭಾರತ-ಪಾಕಿಸ್ಥಾನವು ಪರಸ್ಪರ ಶಾಂತಿ ಮಾತುಕತೆ ನಡೆಸಿ ವಿವಾದಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆಹ್ವಾನಕ್ಕೆ ಭಾರತವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಎರಡೂ ದೇಶಗಳ ನಡುವಿನ ಮಾತುಕತೆ ಬಗ್ಗೆ ಇಮ್ರಾನ್‌ ಖಾನ್‌ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಶಾಂತಿ ಸ್ಥಾಪಿಸುವ ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ನೆರೆಯ ರಾಷ್ಟ್ರದ ಕೋರಿಕೆ ಮೇರೆಗೆ ನ್ಯೂಯಾರ್ಕ್‌ನಲ್ಲಿ ಮುಂದಿನ ವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕ್‌ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಷಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದೆ. ಇದೇ ವೇಳೆ, ಈ ವಿಚಾರದಲ್ಲಿ ಇಲಾಖೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದು, ಇದೊಂದು ಭೇಟಿ ಮಾತ್ರ, ಯಾವುದೇ ರೀತಿಯಲ್ಲಿ ಮಾತುಕತೆ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

ಪತ್ರದಲ್ಲಿ ಏನಿದೆ?: ಪಾಕಿಸ್ಥಾನ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಜಯ ಸಾಧಿಸಿದ  ವೇಳೆ ಪ್ರಧಾನಿ ಮೋದಿ ಶುಭ ಕೋರಿ ಪತ್ರ ಬರೆದಿದ್ದರು. ಅದಕ್ಕೆ ಪೂರಕವಾಗಿ ಸೆ.14ರಂದು ಮರು ಪತ್ರ ಬರೆದಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಮತ್ತು ಬಾಂಧವ್ಯ ಪುನಾರಂಭಕ್ಕೆ ಅನುವು ಮಾಡಿಕೊಡಬೇಕು. 

ನ್ಯೂಯಾರ್ಕ್‌ನಲ್ಲಿ ಪಾಕ್‌-ಭಾರತ ವಿದೇಶಾಂಗ ಸಚಿವರ ನಡುವೆ ಪೂರ್ವ ಭಾವಿಯಾಗಿ ಮಾತುಕತೆ ನಡೆಯಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. “ಎರಡೂ ದೇಶಗಳ ಮುಂದಿನ ಜನಾಂಗದ ಹಿತದೃಷ್ಟಿ ಇರಿಸಿಕೊಂಡು ಜಮ್ಮು ಮತ್ತು ಕಾಶ್ಮೀರ, ಭಯೋತ್ಪಾದನೆ  ಸೇರಿದಂತೆ ಎಲ್ಲಾ ದ್ವಿಪಕ್ಷೀಯ ವಿಚಾರಗಳನ್ನು ಬಗೆಹರಿಸಿಕೊಳ್ಳಬೇಕು. ಸದ್ಯ ಇರುವ ಬಿಕ್ಕಟ್ಟನ್ನು ಬಗೆಹರಿಸಿಕೊಂಡು ಪರಸ್ಪರ ಅನುಕೂಲವಾಗಿರುವ ನಿರ್ಧಾರಗಳಿಗೆ ಬರಬೇಕು’ ಎಂದು ಖಾನ್‌ ಬರೆದಿದ್ದಾರೆ. 

ಅಟಲ್‌ ಹೆಸರು ಪ್ರಸ್ತಾವ: ಎರಡೂ ದೇಶಗಳ ಬಾಂಧವ್ಯ ಸುಧಾರಿಸಲು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಶ್ರಮಿಸಿದ್ದರು ಎಂದು ಇಮ್ರಾನ್‌ ಖಾನ್‌ ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ. ಪಾಕ್‌ ಚುನಾವಣೆ ಫ‌ಲಿತಾಂಶದ ಬಳಿಕ ಮಾಡಿದ ಭಾಷಣದಲ್ಲೂ, “ಸಂಬಂಧ ಸುಧಾರಣೆಗೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕಿಸ್ಥಾನ ಎರಡು ಹೆಜ್ಜೆ ಮುಂದೆ ಇರಿಸಲಿದೆ’ ಎಂದು ಇಮ್ರಾನ್‌ ಘೋಷಿಸಿದ್ದರು. ಪಾಕ್‌ನ ಕರ್ತಾರ್ಪುರ್‌ನಲ್ಲಿರುವ  ಸಿಖ್‌ ಪ್ರಾರ್ಥನಾ ಕೇಂದ್ರಕ್ಕೆ ಯಾತ್ರಿಗಳ ಪ್ರವಾಸಕ್ಕೆ ಅನುಮೋದನೆ ನೀಡಬೇಕೆಂಬ ಬೇಡಿಕೆ ನಡುವೆಯೇ ಈ ಬೆಳವಣಿಗೆ ನಡೆದಿದೆ. 

2015ರಲ್ಲಿ ಭೇಟಿ: 2015ರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿದ್ದ “ಹಾರ್ಟ್‌ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ, ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತ್ರ ಚರ್ಚೆ ನಡೆದಿತ್ತು. 2016ರ ಜ.2ರಂದು ಪಠಾಣ್‌ಕೋಟ್‌ನಲ್ಲಿ ಮತ್ತು ಅದೇ ವರ್ಷದ ಸೆ.18ರಂದು ಉರಿಯಲ್ಲಿ ಪಾಕ್‌ ಪ್ರೇರಿತ ಉಗ್ರರಿಂದ ನಡೆದ ದಾಳಿಯ ಬಳಿಕ ಎರಡೂ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು. ಹೀಗಾಗಿಯೇ 2016ರ ನವೆಂಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯ ಬೇಕಾಗಿದ್ದ ಸಾರ್ಕ್‌ ಸಮ್ಮೇಳನದಲ್ಲಿ ಭಾಗವಹಿಸದೇ ಇರಲೂ ಭಾರತ ನಿರ್ಧರಿಸಿತ್ತು.

Advertisement

ಭೇಟಿ ಮಾತ್ರ; ಮಾತುಕತೆ ನಿಗದಿಯಾಗಿಲ್ಲ
ಪಾಕಿಸ್ಥಾನ ಪ್ರಧಾನಿಯ ಪತ್ರಕ್ಕೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌, “ಸಚಿವೆ ಸುಷ್ಮಾ ಸ್ವರಾಜ್‌ ನ್ಯೂಯಾರ್ಕ್‌ನಲ್ಲಿ ಸಾರ್ಕ್‌ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಪಾಕಿಸ್ಥಾನದ ಕೋರಿಕೆ ಮೇರೆಗೆ ಅಲ್ಲಿನ ವಿದೇಶಾಂಗ ಸಚಿವರನ್ನು ಭೇಟಿಯಾಗಲಿದ್ದಾರೆ. ಯಾವುದೇ ರೀತಿಯ ಮಾತುಕತೆ ನಿಗದಿಯಾಗಿಲ್ಲ’ ಎಂದಿದ್ದಾರೆ.  ಈ ಬಗ್ಗೆ ಭಾರತದ ನಿಲುವಿನಲ್ಲಿ ಬದಲಾವಣೆ ಯಾಗಿಲ್ಲ ಎಂದಿದ್ದಾರೆ. ಸೆ.26 ಅಥವಾ 27ರಂದು ಸಾರ್ಕ್‌ ವಿದೇಶಾಂಗ ಸಚಿವರ ಸಮ್ಮೇಳನ ನಡೆಯುವ ಸಾಧ್ಯತೆ ಇದೆ. ಇದೇ ವೇಳೆ, ಈ ಭೇಟಿ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಅಲ್ಲ ಎಂದು ಹೇಳಲು ವಿದೇಶಾಂಗ ಇಲಾಖೆ ವಕ್ತಾರ ಮರೆಯಲಿಲ್ಲ. 

ಪಾಕ್‌ ಸೇನಾ ಪಡೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಿ ಎಂದು ಬಿಎಸ್‌ಎಫ್ಗೆ ಆದೇಶ ನೀಡಿದ್ದೇನೆ. ಯೋಧನ ಹತ್ಯೆ ಕ್ರಮ ಖಂಡನೀಯ.
ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next