Advertisement
ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 3 ಬಾರಿ ಚಾಂಪಿಯನ್ ಆದ ಹಿರಿಮೆ ಭಾರತದ್ದಾದರೆ, ಪ್ರಶಸ್ತಿ ಉಳಿಸಿಕೊಂಡ ಏಕೈಕ ತಂಡವೆಂಬುದು ಪಾಕಿಸ್ಥಾನ ಪಾಲಿನ ಹೆಗ್ಗಳಿಕೆ.
ಭಾರತ ಲೀಗ್ ಹಂತದ ಎಲ್ಲ 3 ಪಂದ್ಯಗಳನ್ನು ಗೆದ್ದ ಬಳಿಕ, ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿಯಿತು. ಇನ್ನೊಂದೆಡೆ ಪಾಕಿಸ್ಥಾನದ್ದು ಸೋಲಿನ ಆರಂಭ. ಮೊದಲ ಲೀಗ್ ಪಂದ್ಯದಲ್ಲೇ ಅಫ್ಘಾನಿಸ್ಥಾನ ಕೈಯಲ್ಲಿ ಹೊಡೆತ ಅನುಭವಿಸಿದ ಬಳಿಕ, ಶ್ರೀಲಂಕಾ ಮತ್ತು ಅಯರ್‌ಲ್ಯಾಂಡನ್ನು ಮಣಿಸಿ ನಾಕೌಟ್ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಬುಡಮೇಲು ಮಾಡಿತು. ಆದರೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಗೆಲುವೇನೂ ದೊಡ್ಡದಾಗಿರಲಿಲ್ಲ. ಕೇವಲ 3 ವಿಕೆಟ್‌ಗಳ ಅಂತರದ್ದಾಗಿತ್ತು. ಪಾಕಿಗೆ ಹೋಲಿಸಿದರೆ ಭಾರತದ್ದೆಲ್ಲವೂ ಅಧಿಕಾರಯುತ ಜಯಭೇರಿ ಆಗಿತ್ತು. ಈಗ ಫೈನಲ್‌ಗೆ ಲಗ್ಗೆ ಇರಿಸಿರುವ ಬಲಿಷ್ಠ ಆಸ್ಟ್ರೇಲಿಯವನ್ನು ಮೊದಲ ಲೀಗ್ ಪಂದ್ಯದಲ್ಲೇ 100 ರನ್ನುಗಳಿಂದ ಉರುಳಿಸಿತ್ತು. ಬಳಿಕ ಪಪುವಾ ನ್ಯೂ ಗಿನಿ ಹಾಗೂ ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಕೆಡವಿ ಮುನ್ನುಗ್ಗಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾಕ್ಕೆ 131 ರನ್ನುಗಳ ಆಘಾತವಿಕ್ಕಿತು. ಇದೇ ಸ್ಫೂರ್ತಿಯಲ್ಲಿ ಪಾಕಿಸ್ಥಾನವನ್ನು ಮಣಿಸುವುದು ದೊಡ್ಡ ಸಮಸ್ಯೆ ಆಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ. ಆದರೆ ಭಾರತ-ಪಾಕಿಸ್ಥಾನ ಪಂದ್ಯವೆಂದ ಮೇಲೆ ಅದರ ಜೋಶ್, ಥ್ರಿಲ್, ತೀವ್ರತೆ, ಪೈಪೋಟಿ ಬೇರೆಯೇ ಆಗಿರುತ್ತದೆ.
Related Articles
Advertisement
ಸಮತೋಲಿತ ಭಾರತ ತಂಡನಿರಂತರ 140-150 ಕಿ.ಮೀ. ವೇಗದಲ್ಲಿ ಬೌಲಿಂಗ್ ನಡೆಸುವ “ಯಂಗ್ ಗನ್’ ಕಮಲೇಶ್ ನಾಗರಕೋಟಿ, ಇವರ ಜತೆಗಾರ ಶಿವಂ ಮಾವಿ, ಎಡಗೈ ಸ್ಪಿನ್ನರ್‌ಗಳಾದ ಅನುಕೂಲ್ ರಾಯ್, ಅಭಿಷೇಕ್ ಶರ್ಮ ಅವರೆಲ್ಲ ಭಾರತದ ಅಂಡರ್-19 ತಂಡದ ಅಪಾಯಕಾರಿ ಬೌಲರ್‌ಗಳಾಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಸಾಧನೆಯಿಂದಾಗಿಯೇ ಇವರೆಲ್ಲರಿಗೂ ಮೊದಲ ಬಾರಿಗೆ ಐಪಿಎಲ್ ಬಾಗಿಲು ತೆರೆದಿದೆ. ಈ ಬೌಲರ್‌ಗಳೆಲ್ಲರ ಸಂಭ್ರಮ ಪಾಕ್ ವಿರುದ್ಧದ ಪಂದ್ಯದಲ್ಲಿ ಮೇಳೈಸಬೇಕಿದೆ. ಭಾರತದ ಬ್ಯಾಟಿಂಗ್ ವಿಭಾಗ ಶುಭಂ ಗಿಲ್, ಪೃಥ್ವಿ ಶಾ, ಮನೋಜ್ ಕಾಲಾ, ಹಾರ್ವಿಕ್ ದೇಸಾಯಿ, ಅಭಿಷೇಕ್ ಶರ್ಮ ಅವರಿಂದ ಹೆಚ್ಚು ಬಲಿಷ್ಠವಾಗಿದೆ. ಇವರಲ್ಲಿ ಗಿಲ್ ಅವರದು ಸ್ಥಿರ ಪ್ರದರ್ಶನ. ಆಸ್ಟ್ರೇಲಿಯ ವಿರುದ್ಧ 63, ಜಿಂಬಾಬ್ವೆ ವಿರುದ್ಧ ಅಜೇಯ 90, ಬಾಂಗ್ಲಾ ವಿರುದ್ಧ 86 ರನ್ ಸೇರಿದಂತೆ ಒಟ್ಟು 239 ರನ್ ಪೇರಿಸಿದ್ದಾರೆ. ಮೊದಲು ವಿಶ್ವಕಪ್: ದ್ರಾವಿಡ್
ಭಾರತಕ್ಕೆ 4ನೇ ವಿಶ್ವಕಪ್ ತಂದು ಕೊಡುವುದು, ಆ ಮೂಲಕ ಕಳೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಕಿರಿಯರು ತೋರ್ಪಡಿಸಿದ ಕಳಪೆ ಪ್ರದರ್ಶನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಕೋಚ್ ರಾಹುಲ್ ದ್ರಾವಿಡ್ ಗುರಿ. ಈ ಸಲದ ಸಾಧನೆಯಿಂದ ಅಂಡರ್-19 ಆಟಗಾರರನೇಕರು ಐಪಿಎಲ್‌ನಲ್ಲಿ ಆಡುತ್ತಿರುವುದೂ ಅವರ ಖುಷಿಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ದ್ರಾವಿಡ್ ಎಚ್ಚರಿಕೆಯ ಮಾತೊಂದನ್ನೂ ಹೇಳಿದ್ದಾರೆ. “ಐಪಿಎಲ್ ಹರಾಜು ಪ್ರತಿ ವರ್ಷ ಇರುತ್ತದೆ. ಆದರೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಎಲ್ಲ ವರ್ಷ ಇರದು, ಎಲ್ಲರಿಗೂ ಲಭಿಸದು. ಹೀಗಾಗಿ ವಿಶ್ವಕಪ್‌ಗೆ ಮೊದಲ ಆದ್ಯತೆ…’ ಎಂದಿದ್ದಾರೆ ದ್ರಾವಿಡ್.