ಪಣಜಿ: ಗೋವಾದ ಸುಪುತ್ರ ದಿ. ಮನೋಹರ್ ಪರೀಕರ್ ರವರು ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಯೋಗದಾನ ನೀಡಿದ್ದಾರೆ. ಪರೀಕರ್ ರವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ತಮ್ಮ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನುಡಿದರು
ಗುರುವಾರ ಗೋವಾದ ಧಾರಾಬಾಂದೋಡಾದಲ್ಲಿ ರಾಷ್ಟ್ರೀಯ ಫಾರೆನ್ಸಿಕ್ ಸೈನ್ಸ್ ವಿದ್ಯಾಪೀಠದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೋದಿಜಿಯವರೊಂದಿಗೆ ಕೆಲಸ ಮಾಡುತ್ತಿರುವಾಗ ಪರೀಕರ್ ರವರು ಹಲವು ಪ್ರಮುಖ ನಿರ್ಣಯ ತೆಗೆದುಕೊಂಡಿದ್ದರು. ಕಾಶ್ಮೀರ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ನಮ್ಮ ಗಡಿಯ ಸುರಕ್ಷತೆಗಾಗಿ ಹೆಚ್ಚಿನ ಪ್ರಯತ್ನ ನಡೆಸಿದ್ದರು. ಮೋದಿಜಿಯರ ನೇತೃತ್ವದಲ್ಲಿ ಪಾಕಿಸ್ತಾನದಲ್ಲಿ ಭಾರತೀಯ ಯೋಧರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನುಡಿದರು.
ಕೇಂದ್ರ ಗೃಹಮಂತ್ರಿ ಅಮಿತ್ ಶಾ- ನಾನು ಈ ಹಿಂದೆ ಗೋವಾಕ್ಕೆ ಹೆಚ್ಚಾಗಿ ಆಗಮಿಸಿಲ್ಲ. ಆದರೆ ಗೋವಾದ ಸ್ವಾತಂತ್ರ್ಯದ ಸಂಘರ್ಷದ ಕಥೆಯನ್ನು ನಾನು ಓದಿದ್ದೇನೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗೋವಾದಲ್ಲಿ ಯಾವ ಮಹಾಪುರುಷರು ತಮ್ಮ ಪ್ರಾಣಾಹುತಿ ನೀಡಿದ್ದಾರೋ ಅವರಿಗೆ ನಾನು ನನ್ನ ಮೊದಲ ನಮನ ಸಲ್ಲಿಸುತ್ತೇನೆ ಎಂದು ಹೇಳುತ್ತ ತಮ್ಮ ಭಾಷಣ ಆರಂಭಿಸಿದರು.
ನ್ಯಾಶನಲ್ ಫಾರೆನ್ಸಿಕ್ ಲ್ಯಾಬ್ ಮಾಧ್ಯಮದ ಮೂಲಕ ಗೋವಾದ ಅಭಿವೃದ್ಧಿಗೆ ಚಾಲನೆ ಸಿಗಲಿದೆ. ನ್ಯಾಶನಲ್ ಫಾರೆನ್ಸಿಕ್ ಲ್ಯಾಬ್ ಸೈನ್ಸ್ ಲ್ಯಾಬ್ ಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿದ್ದರು. ಫಾರೆನ್ಸಿಕ್ ಸೈನ್ಸ್ ಅಭ್ಯಾಸ ಮಾಡಲು ಗೋವಾದ ವಿದ್ಯಾರ್ಥಿಗಳಿಗೆ ಸರ್ಕಾರವು ಪ್ರೋತ್ಸಾಹ ನೀಡಬೇಕು. ಗೋವಾ ರಾಜ್ಯವು ದೇಶದಲ್ಲಿಯೇ ಸಣ್ಣ ರಾಜ್ಯವಾಗಿದೆ, ಆದರೆ ದೇಶದ ಅಭಿವೃದ್ಧಿಯಲ್ಲಿ ಗೋವಾದ ಪಾತ್ರ ಮಹತ್ವದ್ದಾಗಿದೆ. ಗೋವಾ ರಾಜ್ಯಕ್ಕೆ ಜಗತ್ತಿನೆಲ್ಲೆಡೆಯ ಪ್ರವಾಸಿಗರು ಆಗಮಿಸುತ್ತಾರೆ, ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಎಂದು ಅಮಿತ್ ಶಾ ನುಡಿದರು.
ಕಳೆದ ಸುಮಾರು 10 ವರ್ಷದ ಕಾಲಾವಧಿಯಲ್ಲಿ ಗೋವಾ ರಾಜ್ಯವು ಹೆಚ್ಚಿನ ಅಭಿವೃದ್ಧಿ ಕಂಡಿದೆ. ಇದರಿಂದಾಗಿ ಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ರಾಜ್ಯಸಭಾ ಸದಸ್ಯ ವಿನಯ್ ತೆಂಡುಲ್ಕರ್, ಉಪಮುಖ್ಯಮಂತ್ರಿ ಬಾಬು ಕವಳೇಕರ್ ಮತ್ತಿತರರು ಉಪಸ್ಥಿತರಿದ್ದರು.