ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಇದೆಯೇ ಹೊರತು ಈವರೆಗೂ ಸಮುದಾಯ ಹಂತಕ್ಕೆ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ಸದ್ಯದ ಸ್ಥಿತಿಯಲ್ಲಿ ಕೋವಿಡ್ ಸೋಂಕು ಸಮುದಾಯ ಹಂತಕ್ಕೆ ಹರಡಿಲ್ಲ. ನಾವಿನ್ನೂ ಸ್ಥಳೀಯ ಹಂತದಲ್ಲಿದ್ದೇವೆ. ಒಂದು ವೇಳೆ ನಾವು “ಸಮುದಾಯ” ಶಬ್ದ ಉಪಯೋಗಿಸಿದರೆ ಅದು ಭೀತಿಗೆ ಕಾರಣವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ದೇಶದ ವಿವಿಧ ಆಸ್ಪತ್ರೆಯಲ್ಲಿ 3.34 ಲಕ್ಷ ಪಿಪಿಇ(ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ ಮೆಂಟ್) ಲಭ್ಯವಿದೆ. 60 ಸಾವಿರ ಪಿಪಿಇ ಕಿಟ್ ಅನ್ನು ಈಗಾಗಲೇ ಸರ್ಕಾರ ಸರಬರಾಜು ಮಾಡಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೀನಾದ ಖರೀದಿಸಿದ ಹತ್ತು ಸಾವಿರ ಪಿಪಿಇ ಅನ್ನು ವಿತರಿಸಲು ಬಾಕಿ ಇದೆ ಎಂದು ಹೇಳಿದರು.
ಒಂದು ವೇಳೆ ದೇಶದ ಶೇ.1ರಷ್ಟು ಜನರು ಲಾಕ್ ಡೌನ್ ಆದೇಶವನ್ನು ಪಾಲಿಸದೇ ಹೋದರೆ, ಶೇ.99ರಷ್ಟು ಮಾಡಿದ್ದ ಶ್ರಮ ವ್ಯರ್ಥವಾಗಲಿದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕಳೆದ 24ಗಂಟೆಯಲ್ಲಿ ಕೋವಿಡ್ 19 ಸೋಂಕಿಗೆ ನಾಲ್ಕು ಮಂದಿ ಸಾವನ್ನಪ್ಪಿದ್ದು, 92 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1071ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 29ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.