Advertisement

ವಾಂಖೇಡೆ: ಆರಂಭವಾಗಲಿ ಗೆಲುವಿನ ನಡೆ

06:15 AM Oct 22, 2017 | Team Udayavani |

ಮುಂಬಯಿ: ಮೊನ್ನೆ ಮೊನ್ನೆ ಏಕದಿನ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು 4-1 ಅಂತರದಿಂದ ಹೊಡೆದುರುಳಿಸಿದ ಭಾರತವಿನ್ನು ವಿಶ್ವಕಪ್‌ ರನ್ನರ್ ಅಪ್‌ ತಂಡವಾದ ನ್ಯೂಜಿಲ್ಯಾಂಡ್‌ ವಿರುದ್ಧ ತನ್ನ ಪರಾಕ್ರಮ ಪ್ರದರ್ಶಿಸಲು ಹೊರಡಲಿದೆ. ಇದು 3 ಪಂದ್ಯಗಳ ಸರಣಿಯಾಗಿದ್ದು, ರವಿವಾರ ಮುಂಬಯಿಯ ಐತಿಹಾಸಿಕ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮೊದಲ ಮುಖಾಮುಖೀ ಸಾಗಲಿದೆ.

Advertisement

ವಿಶ್ವ ಕ್ರಿಕೆಟ್‌ನಲ್ಲಿ ಆರಕ್ಕೆರದ, ಮೂರಕ್ಕಿಳಿಯದ ತಂಡವಾಗಿಯೇ ಗುರುತಿಸಲ್ಪಡುವ ನ್ಯೂಜಿಲ್ಯಾಂಡ್‌ ಹೇಳಿಕೊಳ್ಳುವಂಥ ಅಪಾಯಕಾರಿ ತಂಡವಲ್ಲ. ತವರು ನೆಲದಲ್ಲಿ ಹುಲಿಯಂತಿದ್ದರೂ ಬೇರೆ ನಾಡಿಗೆ ತೆರಳಿದಾಗ “ಬ್ಲ್ಯಾಕ್‌ ಕ್ಯಾಪ್ಸ್‌’ ಭೀತಿ ಹುಟ್ಟಿಸಿದ ಸಂದರ್ಭ ತೀರಾ ವಿರಳ. ಆದರೆ ಟೆಸ್ಟ್‌ ಕ್ರಿಕೆಟಿಗೆ ಹೋಲಿಸಿದರೆ ಸೀಮಿತ ಓವ‌ರ್‌ಗಳ ಪಂದ್ಯದಲ್ಲಿ ಒಂದು ಹೆಜ್ಜೆ ಮೇಲಿದೆ ಎನ್ನಬಹುದು. ಹೀಗಾಗಿ ಕೇನ್‌ ವಿಲಿಯಮ್ಸನ್‌ ಪಡೆಯನ್ನು ಭಾರತ ತೀರಾ ಲಘುವಾಗಿ ಪರಿಗಣಿಸುವಂತಿಲ್ಲ. 2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸಿದ್ಧತೆ ಹಾಗೂ ಪ್ರಯೋಗಗಳ ದೃಷ್ಟಿಯಲ್ಲಿ ಇದು ಎರಡೂ ತಂಡಗಳಿಗೆ ಮತ್ತೂಂದು ಮಹತ್ವದ ಸರಣಿ.

ಟೀಮ್‌ ಇಂಡಿಯಾ ಫೇವರಿಟ್‌
ಕೆಲವು ದಿನಗಳ ಹಿಂದಷ್ಟೇ ಆಸ್ಟ್ರೇಲಿಯ ವಿರುದ್ಧ ಮೊಳಗಿಸಿದ 4-1 ಜಯಭೇರಿ, ನಾಯಕ ವಿರಾಟ್‌ ಕೊಹ್ಲಿ ಸಹಿತ ಪ್ರಮುಖ ಬ್ಯಾಟ್ಸ್‌ಮನ್‌ಗಳ ಟಾಪ್‌ ಫಾರ್ಮ್, ಸೀಮ್‌-ಸ್ಪಿನ್‌ ಬೌಲಿಂಗ್‌ ದಾಳಿಯ ಅತ್ಯುತ್ತಮ ಕಾಂಬಿನೇಶನ್‌ಗಳನ್ನೆಲ್ಲ ಕಂಡಾಗ ಭಾರತವೇ ಈ ಸರಣಿಯ ನೆಚ್ಚಿನ ತಂಡವೆಂಬುದರಲ್ಲಿ ಎರಡು ಮಾತಿಲ್ಲ.

ಆಸ್ಟ್ರೇಲಿಯ ವಿರುದ್ಧದ ಸರಣಿಯ ವೇಳೆ ಹೊರಗುಳಿದಿದ್ದ ಎಡಗೈ ಆರಂಭಕಾರ ಶಿಖರ್‌ ಧವನ್‌ ಮರಳಿರುವುದು ಭಾರತದ ಬ್ಯಾಟಿಂಗ್‌ ಬಲವನ್ನು ಸಹಜವಾಗಿಯೇ ಹೆಚ್ಚಿಸಿದೆ. ಇದರಿಂದ ಮತ್ತೆ ರೋಹಿತ್‌-ಧವನ್‌ ಜೋಡಿ ಉತ್ತಮ ಅಡಿಪಾಯ ನಿರ್ಮಿಸುವುದನ್ನು ಕಾಣಬಹುದು. ಆದರೆ ಧವನ್‌ ಗೈರಲ್ಲಿ ಆಸೀಸ್‌ ವಿರುದ್ಧ ಆರಂಭಿಕನಾಗಿ ಕಾಣಿಸಿಕೊಂಡು ಸತತ 4 ಅರ್ಧ ಶತಕ ಸಹಿತ 244 ರನ್‌ ಬಾರಿಸಿ ಮೆರೆದ ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನವಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಹಾನೆ ಅವರನ್ನು ಕೇವಲ ಆರಂಭಿಕನನ್ನಾಗಿಯೇ ಏಕೆ ಪರಿಗಣಿಸಬೇಕು, ಅಷ್ಟೇನೂ ಗಟ್ಟಿ ಇಲ್ಲದ “ಮಿಡ್ಲ್ ಆರ್ಡರ್‌’ಗೆ ಬಲ ತುಂಬಲು ರಹಾನೆ ಅವರನ್ನು ಕಳುಹಿಸಬಹುದಲ್ಲ, ಏನೇನೋ ಪ್ರಯೋಗ ಮಾಡುತ್ತಿರುವ ಭಾರತ ಇದನ್ನೂ ಮಾಡಿನೋಡಬಾರದೇಕೆ ಎಂಬ ಕ್ರಿಕೆಟ್‌ ಅಭಿಮಾನಿಗಳ ಸಲಹೆ ಖಂಡಿತವಾಗಿಯೂ ಕಡೆಗಣಿಸುವಂಥದ್ದಲ್ಲ.

ಸದ್ಯ ಮನೀಷ್‌ ಪಾಂಡೆ ಮತ್ತು ಕೇದಾರ್‌ ಜಾಧವ್‌ ಭಾರತದ ಮಧ್ಯಮ ಸರದಿಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇವರಲ್ಲಿ ಜಾಧವ್‌ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಆಗಾಗ ಮ್ಯಾಚ್‌ ವಿನ್ನರ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪಾಂಡೆ ಪ್ರದರ್ಶನ ಈವರೆಗೆ ತೃಪ್ತಿಕರವಾಗಿ ಕಂಡಿಲ್ಲ. ಕರ್ನಾಟಕದ ಈ ಬ್ಯಾಟ್ಸ್‌ಮನ್‌ ಯುವರಾಜ್‌-ರೈನಾ ಅವರಷ್ಟು ಪವರ್‌ಫ‌ುಲ್‌ ಆಗಿ ಗೋಚರಿಸಿಲ್ಲ. ಆದರೂ ಪಾಂಡೆಗೆ ಇನ್ನೂ ಕೆಲವು ಅವಕಾಶ ಸಿಗುವ ನಿರೀಕ್ಷೆ ಇದೆ. ಇದನ್ನವರು ಚೆನ್ನಾಗಿ ಬಳಸಿಕೊಳ್ಳಬೇಕಿದೆ.

Advertisement

ಮಧ್ಯಮ ಸರದಿ ಅಷ್ಟೊಂದು ಗಟ್ಟಿ ಇಲ್ಲದ ಕಾರಣ ಹಾರ್ಡ್‌ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ಭಡ್ತಿ ನೀಡುವ ಕಾರ್ಯವೂ ಸಾಗಿದೆ. ತಾನು ಯಾವಾ ಕ್ರಮಾಂಕಕ್ಕೂ ಸಲ್ಲುತ್ತೇನೆ ಎಂಬುದನ್ನು ಅವರು ನಿರೂಪಿಸಿದ್ದಾರೆ. ಆದರೆ ಪಾಂಡ್ಯ ಅವರನ್ನು ಧೋನಿಗೂ ಮೊದಲೇ ಬ್ಯಾಟಿಂಗಿಗೆ ಕಳಿಸುವ ಬಗ್ಗೆ ಅಲ್ಲಲ್ಲಿ ಅಪಸ್ವರ ಎದ್ದಿರುವುದು ಸುಳ್ಳಲ್ಲ. ತಂಡದ ಹಿತದೃಷ್ಟಿಯಿಂದ ಇಂಥ ಪ್ರಯೋಗಗಳನ್ನು ಸ್ವಾಗತಿಸಬೇಕಾಗುತ್ತದೆ.

ವೈವಿಧ್ಯಮಯ ಬೌಲಿಂಗ್‌
ಭಾರತದ ಬೌಲಿಂಗ್‌ ಆಕ್ರಮಣ ಈಗ ಹೆಚ್ಚು ವೈವಿಧ್ಯಮಯವಾಗಿದೆ. ಮುಖ್ಯವಾಗಿ ತ್ರಿವಳಿ ಸ್ಪಿನ್‌ ದಾಳಿಗೆ ಈ ಮಾತು ಅನ್ವಯಿಸುತ್ತದೆ. ಚೈನಾಮನ್‌ ಕುಲದೀಪ್‌, ಲೆಗ್‌ಸ್ಪಿನ್ನರ್‌ ಚಾಹಲ್‌, ಎಡಗೈ ಆಫ್ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಎಷ್ಟೇ ಬಲಿಷ್ಠ ಎದುರಾಳಿಯನ್ನೂ ತಮ್ಮ ಬಲೆಗೆ ಬೀಳಿಸಬಲ್ಲರು. ಹೀಗಾಗಿ ಅಶ್ವಿ‌ನ್‌, ಜಡೇಜ ಗೈರು ಟೀಮ್‌ ಇಂಡಿಯಾ ಪಾಲಿಗೆ ಕೊರತೆಯಾಗಿ ಕಂಡುಬಂದಿಲ್ಲ. ವೇಗಿ ಭುವನೇಶ್ವರ್‌, ಡೆತ್‌ ಓವರ್‌ ಸ್ಪೆಷಲಿಸ್ಟ್‌ ಬುಮ್ರಾ ಅವರನ್ನು ನಿಭಾಯಿಸುವುದು ಸುಲಭವಲ್ಲ.

ಕಿವೀಸ್‌ ಕತೆ ಏನು?
ನ್ಯೂಜಿಲ್ಯಾಂಡ್‌ ಸಾಕಷ್ಟು ಮಂದಿ ಯುವ ಆಟಗಾರರನ್ನು ಹೊಂದಿರುವ ತಂಡ. ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿ ರಾಸ್‌ ಟಯ್ಲರ್‌, ನಾಯಕ ವಿಲಿಯಮ್ಸನ್‌, ಆರಂಭಿಕರಾದ ಗಪ್ಟಿಪ್‌-ಲ್ಯಾಥಂ ಅವರನ್ನು ಹೆಚ್ಚು ಅವಲಂಬಿಸಿದೆ. ಇವರು ಸರಣಿ ಉದ್ದಕ್ಕೂ ತಮ್ಮ ಫಾರ್ಮ್ ಕಾದಿರಿಸಿಕೊಳ್ಳುವುದು ಅಗತ್ಯ.ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾದ ಬೌಲ್ಟ್, ಸೌಥಿ ಹೆಚ್ಚು ಅಪಾಯಕಾರಿಗಳು. ಗ್ರ್ಯಾಂಡ್‌ಹೋಮ್‌ ಆಲ್‌ರೌಂಡರ್‌ ಆಗಿ ಮಿಂಚಬಲ್ಲರು. ಆದರೆ ಸ್ಯಾಂಟ್ನರ್‌, ಸೋಧಿ ಅವರ ಸ್ಪಿನ್‌ ಭಾರತಕ್ಕೆ ಸವಾಲಾದೀತೆಂಬ ನಂಬಿಕೆ ಇಲ್ಲ.

ವಾಂಖೇಡೆಯಲ್ಲಿ ಮೊದಲ ಪಂದ್ಯ
ಇದು ಭಾರತ-ನ್ಯೂಜಿಲ್ಯಾಂಡ್‌ ನಡುವೆ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವೆಂಬುದು ವಿಶೇಷ.ಆದರೆ ನ್ಯೂಜಿಲ್ಯಾಂಡಿಗೆ ಇದು ವಾಂಖೇಡೆಯಲ್ಲಿ 2ನೇ ಪಂದ್ಯವಾಗಿದೆ. 2011ರ ವಿಶ್ವಕಪ್‌ ಪಂದ್ಯಾವಳಿಯ ವೇಳೆ ಶ್ರೀಲಂಕಾವನ್ನು ಲೀಗ್‌ ಹಂತದಲ್ಲಿ ಎದುರಿಸಿದ್ದ ನ್ಯೂಜಿಲ್ಯಾಂಡ್‌ 112 ರನ್ನುಗಳ ಸೋಲನುಭವಿಸಿತ್ತು. ಲಂಕೆಯ 9ಕ್ಕೆ 265 ರನ್ನಿಗೆ ಉತ್ತರವಾಗಿ 153ಕ್ಕೆ ಕುಸಿದಿತ್ತು.

ಭಾರತ ಈವರೆಗೆ ವಾಂಖೇಡೆಯಲ್ಲಿ 17 ಏಕದಿನ ಪಂದ್ಯಗಳನ್ನಾಡಿದ್ದು, ಹತ್ತರಲ್ಲಿ ಜಯ ಸಾಧಿಸಿದೆ. ಉಳಿದ ಏಳರಲ್ಲಿ ಸೋಲನುಭವಿಸಿದೆ. 2015ರಲ್ಲಿ ಕೊನೆಯ ಸಲ ಇಲ್ಲಿ ಆಡಿದ್ದ ಭಾರತ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 214 ರನ್ನುಗಳ ಸೋಲಿಗೆ ತುತ್ತಾಗಿತ್ತು. ಇದು ವಾಂಖೇಡೆಯಲ್ಲಿ ಟೀಮ್‌ ಇಂಡಿಯಾ ಅನುಭವಿಸಿದ ಘೋರ ಪರಾಭವ.

ಸರಣಿ ನಿರ್ಣಾಯಕ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 4ಕ್ಕೆ 438 ರನ್‌ ಪೇರಿಸಿದರೆ, ಧೋನಿ ನಾಯಕತ್ವದ ಭಾರತ 36 ಓವರ್‌ಗಳಲ್ಲಿ 224 ರನ್ನಿಗೆ ಆಲೌಟ್‌ ಆಗಿತ್ತು.

ಭಾರತ-ನ್ಯೂಜಿಲ್ಯಾಂಡ್‌ 99ನೇ ಪಂದ್ಯ
ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 98 ಪಂದ್ಯಗಳನ್ನಾಡಿದ್ದು, ಮುಂಬಯಿಯಲ್ಲಿ ರವಿವಾರ ನಡೆಯಲಿರುವುದು 99ನೇ ಮುಖಾಮುಖೀ. ಇತ್ತಂಡಗಳ ನಡುವಿನ 100ನೇ ಪಂದ್ಯಕ್ಕೆ ಬುಧವಾರ ಪುಣೆ ಸಾಕ್ಷಿಯಾಗಲಿದೆ.

ಈವರೆಗಿನ 98 ಪಂದ್ಯಗಳಲ್ಲಿ ಭಾರತ 49 ಜಯ ಸಾಧಿಸಿದರೆ, ನ್ಯೂಜಿಲ್ಯಾಂಡ್‌ 43ರಲ್ಲಿ ಗೆದ್ದಿದೆ. ಒಂದು ಟೈ ಆಗಿದ್ದು, ಉಳಿದ 5 ಪಂದ್ಯಗಳು ರದ್ದುಗೊಂಡಿವೆ.

ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಶಾದೂìಲ್‌ ಠಾಕೂರ್‌.

ನ್ಯೂಜಿಲ್ಯಾಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಟಿನ್‌ ಗಪ್ಟಿಲ್‌, ಟಾಮ್‌ ಲ್ಯಾಥಂ, ಕಾಲಿನ್‌ ಮುನ್ರೊ, ಜಾರ್ಜ್‌ ವರ್ಕರ್‌, ರಾಸ್‌ ಟಯ್ಲರ್‌, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್, ಆ್ಯಡಂ ಮಿಲೆ°, ಟಿಮ್‌ ಸೌಥಿ, ಐಶ್‌ ಸೋಧಿ, ಗ್ಲೆನ್‌ ಫಿಲಿಪ್ಸ್‌.

ಆರಂಭ: ಮಧ್ಯಾಹ್ನ 1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next