Advertisement

ಭಾರತ ಎದ್ದು ನಿಲ್ಲಬೇಕು; ಡಿಜಿಟಲ್‌ ಕೃಷಿಯಿಂದ ವಿರಳ ಭಸ್ಮಗಳ ವರೆಗೆ

06:58 PM Aug 16, 2020 | Karthik A |

ಅದ್ಯಾವುದೋ ಕೃಷಿ ಸಂಬಂಧಿ ಕಾರಣಕ್ಕೆ ರೂಪುಗೊಂಡ ವಾಟ್ಸಾಪ್‌ ಗುಂಪಿನಲ್ಲಿ ಆಸಕ್ತ ಕೃಷಿಕರೊಬ್ಬರು ಕೃಷಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆಯನ್ನು ಕೇಳಿದರು.

Advertisement

ಕೇಂದ್ರೀಯ ತೋಟಗಾರಿಕೆ ಬೆಳೆಯ ಸಂಶೋಧನ ವಿಜ್ಞಾನಿಗಳು ಕೂಡ ಆ ಗುಂಪಿನ ಸದಸ್ಯರಾದ ಕಾರಣ ಸಮರ್ಪಕ ಉತ್ತರದ ನಿರೀಕ್ಷೆ ತುಸು ಹೆಚ್ಚೇ ಇತ್ತು.

ಅತ್ತ ಕಡೆಯಿಂದ ಉತ್ತರವೂ ಬಂತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲ್ಪಟ್ಟ ಎರಡು ವೈಜ್ಞಾನಿಕ ಲೇಖನಗಳು! ಇದು ನಮ್ಮ ಮುಂದಿರುವ ವಾಸ್ತವದ ಚಿತ್ರಣ.

ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಇದುವರೆಗೆ ಅದೆಷ್ಟು ಚರ್ಚೆಗಳು, ಲೇಖನಗಳು, ಸಂವಾದಗಳು ಹುಟ್ಟಿಕೊಂಡಿರ ಬಹುದು ಅಂದರೆ “ಈ ಲೇಖನವೂ ಸೇರಿ ಅಸಂಖ್ಯಾಕ’ ಎಂಬ ಉತ್ತರ ನಮಗೆ ನಾವೇ ಹೇಳಿಕೊಳ್ಳ ಬೇಕಾದೀತು. ಆದರೆ ಕೃಷಿಕ ಹಾಗೂ ವ್ಯವಸ್ಥೆಯ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸುವ ಪ್ರಯತ್ನಗಳು ತೀರಾ ವಿರಳ.

ವಿಜ್ಞಾನಿ ಹಾಗೂ ಕೃಷಿಕನ ನಡುವೆ ಇರುವ ಅಂತರದ ಕುರಿತು ನಾವು ಒತ್ತಿ ಹೇಳಲೇಬೇಕಾದ ಅನಿವಾರ್ಯತೆ ಇದೆ. ನೆದರ್‌ಲ್ಯಾಂಡ್‌ನ‌ಂತಹ ಪುಟ್ಟ ದೇಶವೂ ತಂತ್ರಜ್ಞಾನ ಆಧಾರಿತ ಕೃಷಿಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿರುವುದು ನಮಗೇ ನಾವೇ ಅಳವಡಿಸಿಕೊಳ್ಳಬಹುದಾದ ಮಾದರಿಗಳು.

Advertisement

 ಡಿಜಿಟಲ್‌ ಮಿಥ್ಯಾ ಬೇಲಿ
ತಂತ್ರಜ್ಞಾನದ ಬಳಕೆಯ ಕುರಿತು ಒಂದು ಸರಳ ಉದಾಹರಣೆ ನೋಡೋಣ. ಮನೆ ಮುಂದಿನ ಬಾಳೆ ಗಿಡ ತಿಂದ ದನ ಯಾರದೆಂದು ತಲೆ ಕೆರೆದುಕೊಳ್ಳುವ ಕಾಲಕ್ಕೆ Virtual fencing (ಮಿಥ್ಯಾ ಬೇಲಿ) ನಂತಹ ಸರಳ ತಂತ್ರಗಳು ಸಾರ್ವತ್ರಿಕವಾಗಬೇಕಾದ ಅಗತ್ಯದ ಕುರಿತು ಆಲೋಚಿಸಿದ್ದು. ಇದೊಂಥರಾ ರೇಡಿಯೋ ಕಾಲರ್‌ಇದ್ದ ಹಾಗೆ. ನಾವೇ ನಿರ್ಮಿಸಿದ ಡಿಜಿಟಲ್‌ ಮಿಥ್ಯಾ ಬೇಲಿಯ ಒಳಗೆ ದನ, ಆಡು ಮುಂತಾದ ಸಾಕುಪ್ರಾಣಿಗಳ ಚಲನವಲನಗಳನ್ನು ನಿಯಂತ್ರಿಸುವ ವಿಧಾನ. GPS ತಂತ್ರಜ್ಞಾನದ ಮೂಲಕ ಸಾಕುಪ್ರಾಣಿಯ ಕೊರಳಿಗೆ ಹಾಕಿದ ಕಾಲರನ್ನು ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ನೆರವಿನಿಂದ ಮಾನಿಟರ್‌ ಮಾಡಲಾಗುತ್ತದೆ.

ಮಿಥ್ಯಾ ಬೇಲಿಯ ಹೊರಗೆ ದಾಟುವಾಗ ಮೊದಲಿಗೆ ಒಂದು ಧ್ವನಿ ಸಂಕೇತ ಹೊರಹೊಮ್ಮುತ್ತದೆ. ಅವಾಗ ಸಾಕುಪ್ರಾಣಿ ಹಿಂದಿರುಗದಿದ್ದರೆ ಮತ್ತೆ ಒಂದು ಸೆಕೆಂಡ್‌ ವಿದ್ಯುತ್‌ ಶಾಕ್‌ ನೀಡಲಾಗುತ್ತದೆ. ಹೀಗೆ ಐದಾರು ಸಲ ಶಾಕ್‌ನ ಅನುಭವವಾದಾಗ ಪ್ರಾಥಮಿಕ ಧ್ವನಿ ಸಂಕೇತಕ್ಕೇ ಹಿಂದಿರುಗಿ ಬರಲು ಸಾಕುಪ್ರಾಣಿ ಕಲಿತು ಬಿಡುತ್ತದೆ. ಸರಳವಾದ, ಕಡಿಮೆ ಖರ್ಚಿನ ಇಂತಹ ತಂತ್ರಗಳು ನಮ್ಮಲ್ಲಿ ಯಾಕೆ ಸಾರ್ವತ್ರಿಕವಾಗಿಲ್ಲ ಎಂದು ಮುಂದೆಯೂ ನಮಗೆ ನಾವೇ ಕೇಳದೆ, ಅವುಗಳನ್ನು ಅಳವಡಿಸಿಕೊಂಡು ಮುಂದುವರಿಯುವುದು ನಮ್ಮ ಮುಂದಿರುವ ತುರ್ತು.

ಇಂಟರ್‌ನೆಟ್‌ ಕ್ರಾಂತಿ ಮತ್ತು ಕಂದಕ
ನಾವು ಒಂದಿಡೀ ತಲೆಮಾರು ಇಂಟರ್‌ನೆಟ್‌ಗೆ ಆತು ಕೊಂಡಾಗಿದೆ. ಮೊದಮೊದಲು ಒಂದು ಹೆಬ್ಬೆರಳಾಗಿದ್ದು ಈಗ ಎರಡು ಹೆಬ್ಬೆರಳು ಜಗತ್ತನ್ನು ಹಂಚಿಕೊಂಡಿವೆ. ಕಳೆದ ಒಂದು ದಶಕದ ಬದಲಾವಣೆ ಮುಂದಿನ ದಶಕದ ಬದಲಾವಣೆಗೆ ಮುನ್ನುಡಿ ಬರೆದಿಟ್ಟಿದೆ. ಅನಂತ ಸಾಧ್ಯತೆಗಳ ನಡುವೆ ಆತಂಕವನ್ನು ಕೂಡ ಹುಟ್ಟಿಹಾಕಿದೆ. ನಾಳೆಗಳ ಶಾಲೆಗಳು, ಕಾಲೇಜುಗಳು ಇಂಟರ್‌ನೆಟ್‌ ಇಲ್ಲದೆ ಮುನ್ನಡೆಯಲಾರವು ಎಂಬುದನ್ನು ಕೋವಿಡ್‌ ಕಾಲದ ಅನುಭವ ಕಲಿಸಿದೆ. ಬಹುಶಃ ವಿಜ್ಞಾನ ಹಾಗೂ ತಂತ್ರಜ್ಞಾನದ ಎಲ್ಲ ಆವಿಷ್ಕಾರಗಳು ಒಂದೆಡೆ ಸಮ್ಮಿಳಿತವಾಗಿ ಪ್ರತ್ಯಕ್ಷವಾದ ಅನುಭವವಿದ್ದರೆ ಅದು ಮೊಬೈಲ್‌ ಇಂಟರ್‌ನೆಟ್‌. ಕೋವಿಡ್‌ ಕಾಲದ ಅನಿವಾರ್ಯತೆ ವರ್ಕ್‌ ಫ್ರಂ ಹೋಮ್‌ನಂತಹ ಸಾರ್ವತ್ರಿಕವಾದ ಬೆಳವಣಿಗೆಯನ್ನು ಸೃಷ್ಟಿಸಿದೆ.

ಕೋರ್ಸುಗಳು, ಪರೀಕ್ಷೆಗಳು ಇಂಟರ್‌ನೆಟ್‌- ಮೂಲಕ ಎಂಬ ಸುದ್ದಿಗಳು ಮಾಡಿದ ಸದ್ದು ಸಣ್ಣದಲ್ಲ. ಶಾಲೆಗಳು ಮುಂದೆ ಹೀಗೆ ಇರಬಹುದೇ ಎಂಬ ಕುತೂಹಲ ಕೂಡ ಹುಟ್ಟಿಕೊಂಡುಬಿಟ್ಟಿದೆ. ಝೂಮ…, ಗೂಗಲ್‌ ಮೀಟ್‌ ಇತ್ಯಾದಿ ಈ ಹಿಂದೆಯೇ ಸಾಧ್ಯವಿದ್ದರೂ ಬಳಸದ ಸಾಧ್ಯತೆಗಳನ್ನು ಬಹುತೇಕರು ಪರೀಕ್ಷಿಸಿ ಆಗಿದೆ. ವರ್ಕ್‌ ಫ್ರಂ ಹೋಮ್‌ ನಡುವೆ ಕೃಷಿಯೂ ಸಾಧ್ಯ ಎಂದು ಹಲವರಿಗೆ ಅರಿವಾಗಿದೆ. ಹೀಗೆ ಕಂಡುಕೊಂಡ ಕಲಿತುಕೊಂಡ ಬದಲಾವಣೆಗಳು ಕೋವಿಡ್‌ ಸಂಕಟದ ಬಳಿಕವೂ ಮುಂದುವರಿಯಬಹುದು. ಭವಿಷ್ಯದ ಇಂತಹ ಬದಲಾವಣೆಗಳಿಗೆ ನಾವು ಹಾಗೂ ನಮ್ಮ ಸರಕಾರಗಳು ಈಗಲೇ ಸಿದ್ಧವಾಗಬೇಕಿದೆ.

 ವಿರಳ ಭಸ್ಮ ಧಾತುಗಳು
ಟಿಕ್‌ಟಾಕ್‌ ಬ್ಯಾನ್‌ ಒಂದಷ್ಟು ಸುದ್ದಿ ಮಾಡಿದ್ದು ನಮಗೆಲ್ಲ ಗೊತ್ತೇ ಇದೆ. ಆ ಒಂದು ನಿರ್ಧಾರ ಚೀನಗೆ ಸಣ್ಣ ಕಂಪನವನ್ನು ಹುಟ್ಟಿಸಿರಬಹುದು. ಆದರೆ ಚೀನದ ಮಟ್ಟಿಗೆ ದೊಡ್ಡ ಭೂಕಂಪವನ್ನೇ ಸೃಷ್ಟಿಸಬಹುದಾದ ಸಾಧ್ಯತೆ ಇಲ್ಲಿದೆ ನೋಡಿ. ಹೌದು rare earth elements (ವಿರಳ ಭಸ್ಮ ಧಾತುಗಳು) ಎಂದು ಕರೆಯಲ್ಪಡುವ ಹದಿನೇಳು ಮೂಲಧಾತುಗಳ ಕುರಿತಾಗಿ ಈಗ ಹೇಳ ಹೊರಟಿರುವುದು.

ಯಿಟ್ರಿಯಮ…, ಸ್ಕಾಂಡಿಯಮ್‌ ಹಾಗೂ ಹದಿನೈದು ಲ್ಯಾಂಥನೈಡುಗಳು ಸೇರಿ ಒಟ್ಟು ಹದಿನೇಳು ಧಾತುಗಳು ಅವುಗಳ ಅನನ್ಯವಾದ ಗುಣವಿಶೇಷತೆಗಳಿಂದಾಗಿ ನಮ್ಮ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿವೆ. ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ವಿಂಡ್‌ ಟರ್ಬೆçನ್‌, ಸೋಲಾರ್‌ ಸೆಲ್‌ ಹೀಗೆ ಹತ್ತು ಹಲವುಗಳಿಗೆ ಈ ಧಾತುಗಳು ಜೀವಧಾತು ಇದ್ದ ಹಾಗೆ. ಹೆಚ್ಚೇಕೆ ಜೆಟ್‌ ಫೈಟರ್‌ ಎಂಜಿನ್‌, ಮಿಸೈಲ್‌ ಗೈಡಿಂಗ್‌ ಸಿಸ್ಟಮ್‌, ಸ್ಯಾಟಲೈಟ್‌ ಸಿಸ್ಟಮ್‌ ಸಹಿತ ಹಲವಾರು ರಕ್ಷಣ ವ್ಯವಸ್ಥೆಯ ಅಗತ್ಯಗಳಿಗೆ ಈ ಧಾತುಗಳು ಬೇಕೇ ಬೇಕು. ಹೆಸರಿಗೆ ವಿರಳ ಧಾತುಗಳಾದರೂ ನಿಜವಾಗಿ ಹಾಗೇನೂ ಇಲ್ಲ. ಪ್ರೊಮಿಥಿಯಮ್‌ ಹೊರತುಪಡಿಸಿ ಉಳಿದವು ಸರಿಸುಮಾರು ತಾಮ್ರದಷ್ಟೇ ಪ್ರಮಾಣದಲ್ಲಿ ಭೂಗರ್ಭದಲ್ಲಿ ನಿಕ್ಷೇಪಿಸಲ್ಪಟ್ಟಿವೆ. ವಿಕಿರಣಶೀಲ ಮೂಲಧಾತುವಾದ ಪೊ›ಮಿಥಿಯಮ್‌ ಮಾತ್ರ ಇಡೀ ಭೂಮಂಡಲದಲ್ಲಿ ಇರುವುದು ಕೇವಲ 600 ಗ್ರಾಂಗಿಂತಲೂ ಕಡಿಮೆ! ಉಳಿದವುಗಳು ನಿಕ್ಷೇಪದ ಸಾಂಧ್ರತೆಯ ವಿರಳತೆಯಿಂದಾಗಿ ವಿರಳ ಭಸ್ಮ ಧಾತುಗಳೆಂಬ ಹೆಸರನ್ನು ಹೊಂದಿವೆ. ಪ್ರತಿ ದೇಶಕ್ಕೂ ಬಿಟ್ಟಿರಲಾರದಷ್ಟು ಅನಿವಾರ್ಯವಾದರೂ ಈ ಧಾತುಗಳ ದೇಶಿಯ ಹಾಗೂ ಜಾಗತಿಕ ಉತ್ಪಾದನೆಯ ಚಿತ್ರಣ ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಜಗತ್ತಿನಲ್ಲಿ ಈ ಧಾತುಗಳ ಒಟ್ಟು ನಿಕ್ಷೇಪದ ಶೇ. 36 ಭಾಗ ಹೊಂದಿರುವ ಚೀನ ಇವುಗಳ ಉತ್ಪಾದನೆಯಲ್ಲಿ ಬರೋಬ್ಬರಿ ಶೇ. 90 ಸ್ವಾಮ್ಯ ಹೊಂದಿದೆ. ಭಾರತ, ಜಾಗತಿಕ ನಿಕ್ಷೇಪದ ಶೇ. 6, ಅಂದರೆ ಚೀನದ ಆರರಲ್ಲಿ ಒಂದಂಶ, ಹೊಂದಿದ್ದರೂ ಉತ್ಪಾದನೆಯಲ್ಲಿ ಮಾತ್ರ ನಗಣ್ಯ ಅಂಶವನ್ನು ಹೊಂದಿದೆ. ಆಶ್ಚರ್ಯಕರ ವಿಷಯವೇನೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ಜಗತ್ತಿನ ಬಹುಭಾಗಕ್ಕೆ ಪೂರೈಕೆ ಭಾರತದಿಂದಲೇ ಆಗುತ್ತಿತ್ತು. ಆ ಮೇಲೆ 60 ಹಾಗೂ 80ರ ದಶಕದ ಕಾಲಘಟ್ಟದಲ್ಲಿ ಅಮೆರಿಕ ಉತ್ಪಾದನೆಯ ಮೇಲೆ ಸ್ವಾಮ್ಯ ಸಾಧಿಸಿತಾದರೂ, ಇಪ್ಪತ್ತೂಂದನೆಯ ಶತಮಾನದ ಹೊತ್ತಿಗೆ ಚೀನದ ಸ್ಪರ್ಧೆಗೆ ಸಡ್ಡು ಹೊಡೆಯಲಾಗದೆ ಸುಮ್ಮನಾಯಿತು.

ಹಾಗೆ ನೋಡಿದರೆ ಭಾರತ ಸ್ವಾತಂತ್ರ್ಯ ಬಳಿಕದ ಮೊದಲ ದಿನಗಳಲ್ಲೇ ಈ ಧಾತುಗಳ ಪ್ರಾಮುಖ್ಯವನ್ನು ಮನಗಂಡಿತ್ತು. 1950ರಲ್ಲಿ Indian Rare Earths Ltd (IREL) ಸ್ಥಾಪನೆಯಾಯಿತು. 1963ರಲ್ಲಿ ರಾಷ್ಟ್ರೀಕರಣಗೊಂಡ ಈ ಸಂಸ್ಥೆಯು Department of Atomic Energy (DAE) ಯ ಕೈಕೆಳಗೆ ಬಂತು. ಆರಂಭಿಕ ದಿಟ್ಟ ಹೆಜ್ಜೆಗಳು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಬೆಳೆದು ನಿಲ್ಲಲು ಕಾರಣಾಂತರಗಳಿಂದ ಸಾಧ್ಯವಾಗದೇ ಹೋಯಿತು.

2011-12ರ ವೇಳೆಗೆ ಜಪಾನ್‌ನ ಟೊಯೋಟಾ ಸುಶೋ (Toyota Tsusho) ಭಾರತದ IREL ಜತೆ ಜಂಟಿಯಾಗಿ ಕಾರ್ಯಾರಂಭ ಮಾಡಿ ಒಂದು ಜಿಗಿತದ ಸೂಚನೆ ಕೊಟ್ಟರೂ ಬೆಳವಣಿಗೆ ಮಾತ್ರ ಮತ್ತೆ ಹಳೆಯ ಹಾದಿಯಲ್ಲೇ ಕುಂಟುತ್ತಾ ಸಾಗಿತು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕಾಗದದ ಸಾಧನೆಗಳಾಗಿ ಮಾತ್ರ ಗೋಚರಿಸುತ್ತವೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆಯ ಹಾಗೂ ಉದ್ಯಮಶೀಲತೆಯ ಉತ್ತೇಜನೆಯ ಕೊರತೆ ಭಾರತದ ಆಮೆನಡಿಗೆಗೆ ಪ್ರಧಾನ ಕಾರಣ. ಮೇಕ್‌ ಇನ್‌ ಇಂಡಿಯಾ, ಸ್ವಾವಲಂಬಿ ಭಾರತ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳ ನನಸಾಗುವಿಕೆಗೆ ಈ ಧಾತುಗಳ ಕುರಿತಾದ ದೂರದೃಷ್ಟಿಯ ಕನಸು ಅತ್ಯಗತ್ಯ.

ನಿನ್ನೆಯ ಹಾದಿ ಅಷ್ಟು ಸುಲಭವಾಗಿರಲಿಲ್ಲ. ನಾಳೆಯ ಹಾದಿಯೂ ಕೂಡ ಹಾಗೆಯೇ ಸವಾಲಿನದ್ದೇ. ಸ್ವಾತಂತ್ರ್ಯೋವದ ದಿನಗಳಲ್ಲಿ ನಾವು ಸಾಧಿಸಿದ್ದು ಹಲವಾರಿವೆ. ಆರೋಗ್ಯ, ಶೈಕ್ಷಣಿಕ, ಬಾಹ್ಯಾಕಾಶ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಘಟಿಸಿದ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಗಳು ನಮ್ಮನ್ನೇ ಬೆರಗುಗೊಳಿಸುವಂಥದ್ದು. ಜತೆಗೆ ಮುಂದಿನ ಸಾಧ್ಯತೆಗಳನ್ನು ಕೂಡ ಆ ಸಾಧನೆಗಳೇ ಮುಂದಿಡುತ್ತವೆ. ಸಾಧಿಸಲಿರುವ ಮತ್ತಷ್ಟು ವಿಷಯಗಳು ನಿತ್ಯ ಕ್ಲೀಷೆಯ ದೂರುಗಳಾಗದೆ ಎದ್ದು ನಿಂತು ಕಾರ್ಯೋನ್ಮುಖರಾಗುವ ಪ್ರಜೆಗಳಿಗೆ ಪ್ರಚೋದನೆ ಯಾಗಲಿ. ಹೀಗೆ ಕನಸು ಕಟ್ಟಿಕೊಡುವ ಸ್ವಾತಂತ್ರ್ಯದ ಜತೆ ಕನಸುಗಳು ಕೂಡ ನನಸಾಗಿ ಅರಳಿ ನಿಲ್ಲಲಿ.

ಕೃಷಿಗೆ ವೈವಿಧ್ಯಮಯ ಆ್ಯಪ್‌ಗಳು ನಮ್ಮಲ್ಲಿ ಸಮರ್ಥವಾದ
ಹವಾಮಾನ ನಿರೀಕ್ಷಣ ಉಪಗ್ರಹ ಗಳಿವೆ. ಒರಿಸ್ಸಾ ಹಾಗೂ ಬಂಗಾಲದ ಸುಂಟರ ಗಾಳಿಯ ಸಂದರ್ಭದಲ್ಲಿ ಅವುಗಳ ಸಮರ್ಪಕ ಬಳಕೆ ಯಿಂದ ನೂರಾರು ಜೀವಗಳನ್ನು ಮುಂಚಿತವಾಗಿ ರಕ್ಷಿಸಲು ಸಾಧ್ಯವಾಗಿದೆ. ಒಂದು ಟ್ಯಾಬ್‌ ಅಥವಾ ಮೊಬೈಲ್‌ಗೆ ಇಂತಹ ಉಪಗ್ರಹಗಳಿಂದ ಹವಾಮಾನ ವರದಿಯನ್ನು ಹಾಗೂ ಸಂಬಂಧಿಸಿದ ಮುನ್ಸೂಚನೆಯನ್ನು ಕೃಷಿಕನಿಗೆ ನೀಡಲು ಈ ಡಿಜಿಟಲ್‌ ಯುಗದಲ್ಲಿ ನಾವು ಸಜ್ಜಾಗಲೇ ಬೇಕು. ಓರ್ವ ಕೃಷಿಕನಿಗೆ ಹೆಣ್ಣು ಕೊಡಲಾರೆ ಎಂಬ ಮನಸ್ಥಿತಿಯಿಂದ ಸಾಫ್ಟ್ವೇರ್‌ ಕೃಷಿಕನನ್ನು ಮೆಚ್ಚಿಕೊಳ್ಳುವ ಕಡೆಗೆ, ನಗರ ಹಳ್ಳಿಗಳ ನಡುವಿನ ಕಂದಕದ ಆಳ ಹೆಚ್ಚಿಸಿದ ವಲಸೆಯ ಹಿಮ್ಮುಖ ಚಲನೆಯ ಕಡೆಗೆ ಬದಲಾವಣೆಯ ದಿಶೆ ಹೊರಳಲೂಬಹುದು. ಕೃಷಿ ಕ್ಷೇತ್ರ ಆಕರ್ಷಕಣೀಯವೆನಿಸದೆ ನಗರದ ಕಡೆಗಿನ ವಲಸೆಯ ಪರಿಣಾಮವನ್ನು ಹಾಗೂ ಕೃಷಿಯ ಮಹತ್ವವನ್ನು ಕೋವಿಡ್‌ ಕಾಲದ ಸಂಕಷ್ಟದ ದಿನಗಳು ನಮ್ಮ ಮುಂದೆ ಬಿಚ್ಚಿಟ್ಟಿದೆ ಎಂಬುದು ಸತ್ಯ. ಇವು ನಮಗೆ ಒಂದು ದಶಕಕ್ಕಾಗುವ ಪಾಠವನ್ನಾದರೂ ಕಲಿಸಿದೆ. ಒಂದು ಹಸುರು ಕ್ರಾಂತಿ ಮತ್ತೂಂದು ಕ್ಷೀರ ಕ್ರಾಂತಿಗೆ ನಿಂತುಬಿಟ್ಟ ನಾವು ಡಿಜಿಟಲ್‌ ಕೃಷಿ ಕ್ರಾಂತಿಗೆ ಸಜ್ಜಾಗುವ ಕಾಲ ಸನ್ನಿಹಿತವಾಗಿದೆ ಎಂದರೆ ಉತ್ಪ್ರೇಕ್ಷೆ
ಆಗಲಾರದು.

ನವೀನ ಕುಂಟಾರು, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಸುರತ್ಕಲ್‌

 

Advertisement

Udayavani is now on Telegram. Click here to join our channel and stay updated with the latest news.

Next