ಹೊಸದಿಲ್ಲಿ: ಲಡಾಖ್‌ನ ಎಲ್‌ಎಸಿ ರಕ್ಷಣೆಗೆ ಶಬ್ದರಹಿತ ನೌಕಾ ಕ್ಷಿಪಣಿ “ನಿರ್ಭಯಾ’ವನ್ನು ನಿಯೋಜಿಸಲಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ “ನಿರ್ಭಯಾ’ ಕ್ಷಿಪಣಿಯ 7ನೇ ಔಪಚಾರಿಕ ಪ್ರಯೋಗ ಮುಂದಿನ ತಿಂಗಳು ನಡೆಯಲಿದೆ. ಆದರೂ ಕೆಲವು ಕ್ಷಿಪಣಿಗಳನ್ನು ಈಗಾಗಲೇ ಎಲ್‌ಎಸಿಯ ಮುಂಚೂಣಿ ನೆಲೆಗಳಿಗೆ ಸೇನೆ ಕಳುಹಿಸಿಕೊಟ್ಟಿದೆ. ಈ ಸದೃಢ ರಾಕೆಟ್ ಬೂಸ್ಟರ್ ಕ್ಷಿಪಣಿ ಒಂದೇ ಹೊಡೆತದಲ್ಲಿ ಶೇ. 90ರಷ್ಟು ಪ್ರದೇಶಗಳನ್ನು ಆಕ್ರಮಿಸಬಲ್ಲದು. 24 ವಿವಿಧ ಸಿಡಿತಲೆಗಳ ಮೂಲಕ 1,000 ಕಿ.ಮೀ. ವಿಸ್ತಾರದವರೆಗೆ ದಾಳಿ ನಡೆಸಬಲ್ಲದು. 0.7 ಮ್ಯಾಕ್ ವೇಗ ದಲ್ಲಿ 400 ಕಿ.ಮೀ. ದೂರದಲ್ಲಿರುವ ಗುರಿಯ ಹುಟ್ಟಡಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೊಸ ಪೀಳಿಗೆಯ ಈ ಕ್ಷಿಪಣಿ ಎಸ್‌ಎಫ್ಡಿಆರ್ ತಂತ್ರಜ್ಞಾನ ಹೊಂದಿದೆ. ಇದರ ನೆರವಿನಿಂದ “ನಿರ್ಭಯಾ’ ಸೂಪರ್ ಸಾನಿಕ್ ನೌಕಾ ಕ್ಷಿಪಣಿಯನ್ನು ಏರ್ ಟು ಏರ್ ಕ್ಷಿಪಣಿಯಾಗಿಯೂ ಬಳಸಬಹುದಾಗಿದೆ.
ಮತ್ತೂಂದು ಮಾತುಕತೆ
ಪೂರ್ವ ಲಡಾಖ್‌ನ ಎಲ್‌ಎಸಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನ ನಡುವೆ ರಾಜತಾಂತ್ರಿಕ ಮಟ್ಟ ದಲ್ಲಿ ಮತ್ತೂಂದು ಸುತ್ತಿನ ಮಾತುಕತೆ ನಡೆಯಿತು. ಎಲ್‌ಎಸಿ ಉದ್ದಕ್ಕೂ ಸ್ಥಿರತೆ ಕಾಪಾಡಿ ಕೊಳ್ಳುವ ಸಂಬಂಧ ಮಿಲಿಟರಿ ಕಮಾಂಡರ್ ಗಳು ನಡೆಸಿದ ಕೊನೆಯ ಸುತ್ತಿನ ಮಾತುಕತೆಯ ಫಲಿತಾಂಶವನ್ನು ಕಾರ್ಯ ಗತ ಗೊಳಿಸಲು ಡಬ್ಲ್ಯೂಎಂಸಿಸಿ ಸಭೆ ಸೇರಿತ್ತು.
“ಇತ್ತೀಚೆಗೆ ನಡೆದ 19ನೇ ವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೆಶನ್ ಆ್ಯಂಡ್ ಕೋ-ಆರ್ಡಿನೇಶನ್ (ಡಬ್ಲ್ಯೂಎಂಸಿಸಿ) ಸಭೆಯಲ್ಲಿ ಲಡಾಖ್ ಎಲ್‌ಎಸಿಯ ಉದ್ವಿಗ್ನತೆ ತಗ್ಗಿಸುವ ವಿಚಾರದಲ್ಲಿ ಪಾರದರ್ಶಕ ಮತ್ತು ವಿಸ್ತೃತ ಚರ್ಚೆಗಳು ನಡೆದಿವೆ. ಒಮ್ಮತದ ಮೂಲಕ ಸೇನೆ ವಾಪಸು ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ನಿರ್ಣಯಿಸಿವೆ.
ಟಾರ್ಗೆಟ್ 12 ಭೂಪ್ರದೇಶಗಳು!
ಲಡಾಖ್‌ನ 1,597 ಕಿ.ಮೀ. ವಿಸ್ತಾರದ ಎಲ್‌ಎಸಿ ಯಲ್ಲಿ ಚೀನ 1959ರ ಗರಿಷ್ಠ ನಕ್ಷಾಶಾಸ್ತ್ರೀಯ ಹಕ್ಕಿನ ಆಧಾರದ ಮೇಲೆ ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 1959ರ ಗ್ರೀನ್ ಲೈನ್ (ಮಿಲಿಟರಿ ನಕ್ಷೆ) ಅನ್ನು ಚೀನದ ಅಂದಿನ ಪ್ರಧಾನಿ ಝಾವೋ, ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ಚೀನ ಲಡಾಖ್ ಎಲ್‌ಎಸಿಯ 12 ಭೂ ಪ್ರದೇಶಗಳ ಮೇಲೆ ತನ್ನ ಹಕ್ಕಿದೆ ಎಂದು ಪ್ರತಿಪಾದಿಸಿತ್ತು. 1959ರಲ್ಲಿನ ಚೀನದ ಪ್ರಸ್ತಾವವನ್ನು ಆಗಿನ ಪ್ರಧಾನಿ ನೆಹರೂ ಕೂಡ ತಿರಸ್ಕರಿಸಿದ್ದರು.