ಹೊಸದಿಲ್ಲಿ: ಆತಿಥ್ಯ ನಗರದ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಭಾರತಕ್ಕೆ ನೀಡಲಾಗಿದ್ದ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಆತಿಥ್ಯ ಹಕ್ಕನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ) ಹಿಂದೆಗೆದುಕೊಂಡಿದೆ. ಎಐಬಿಎಯು ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ) ಹೇಳಿಕೊಂಡಿದೆ.
2017ರಲ್ಲಿ ಭಾರತಕ್ಕೆ ನೀಡಲಾಗಿದ್ದ 2021ರ ವಿಶ್ವ ಬಾಕ್ಸಿಂಗ್ ಕೂಟದ ಆತಿಥ್ಯ ಹಕ್ಕನ್ನು ಈಗ ಎಐಬಿಎ ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್ ನಗರಕ್ಕೆ ನೀಡಿದೆ.
ಶುಲ್ಕ ಪಾವತಿಯಲ್ಲಿ ವಿಳಂಬವಾಗಿದೆ ಎಂಬುದನ್ನು ಬಿಎಫ್ಐ ಒಪ್ಪಿಕೊಂಡಿದೆ. ಇದಕ್ಕೆ ಎಐಬಿಎಯ ನಿರ್ಧಾರವೇ ಕಾರಣವೆಂದು ದೂರಿದೆ. ಹಣವನ್ನು ಯಾವ ಖಾತೆಗೆ ವರ್ಗಾಯಿಸಬೇಕೆಂಬ ವಿಷಯದಲ್ಲಿ ಎದ್ದ ಸಮಸ್ಯೆಯನ್ನು ಪರಿಹರಿಸಲು ಎಐಬಿಎ ವಿಫಲವಾಗಿದ್ದರಿಂದ ಶುಲ್ಕ ಪಾವತಿಯಲ್ಲಿ ವಿಳಂಬವಾಗಿದೆ ಎಂದು ಬಿಎಫ್ಐ ಸ್ಪಷ್ಟಪಡಿಸಿದೆ.
ಆತಿಥ್ಯ ಶುಲ್ಕವಾದ 4 ಮಿಲಿಯನ್ ಡಾಲರ್ ಮೊತ್ತವನ್ನು ಕಳೆದ ವರ್ಷದ ಡಿಸೆಂಬರ್ 2ರ ಮೊದಲು ಪಾವತಿಸಬೇಕಿತ್ತು. ಆತಿಥ್ಯ ನಗರ ಒಪ್ಪಂದದ ನಿಯಮದಂತೆ ಹೊಸದಿಲ್ಲಿ ಆತಿಥ್ಯ ಶುಲ್ಕವನ್ನು ಪಾವತಿಸುವ ಜವಾಬ್ದಾರಿ ಪೂರೈಸದ ಹಿನ್ನೆಲೆಯಲ್ಲಿ ಎಐಬಿಎ ಒಪ್ಪಂದವನ್ನು ರದ್ದುಪಡಿಸಿದೆ. ಭಾರತ ಈಗ ರದ್ದುಗೊಂಡಿದ್ದಕ್ಕೆ 500 ಡಾಲರ್ ದಂಡ ಪಾವತಿಸಬೇಕಾಗಿದೆ ಎಂದು ಎಐಬಿಎ ಪ್ರಕಟನೆಯಲ್ಲಿ ತಿಳಿಸಿದೆ.
ಹಣವನ್ನು ಯಾವ ಖಾತೆಗೆ ವರ್ಗಾ ಯಿಸಬೇಕೆಂದು ಎಐಬಿಎ ಸ್ಪಷ್ಟವಾಗಿ ತಿಳಿಸಿಲ್ಲ ಮತ್ತು ಪಾವತಿಗೆ ಕೊನೆ ದಿನದ ಮೊದಲೇ ಈ ಕೂಟಕ್ಕಾಗಿ ಹೊಸ ಬಿಡ್‌ಗೆ ಆಹ್ವಾನ ನೀಡಿತ್ತು ಎಂದು ಬಿಎಫ್ಐ ಮುಖ್ಯಸ್ಥ ಅಜಯ್ ಸಿಂಗ್ ಹೇಳಿದ್ದಾರೆ.