ಹೊಸದಿಲ್ಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಕೇಂದ್ರ ಸಂಪುಟ ಸಭೆ ರಾಷ್ಟ್ರೀಯ ಕ್ವಾಂಟಂ ಮಿಷನ್ (ಎನ್‌ಕ್ಯೂಎಂ)ಗೆ ಬುಧವಾರ ಅನುಮೋದನೆ ನೀಡಿದೆ.
2023-24ನೇ ಸಾಲಿನಿಂದ 2030-31ನೇ ಸಾಲಿನ ವರೆಗೆ 6,003. 65 ಕೋಟಿ ರೂ. ಮೊತ್ತವನ್ನು ಮೀಸಲಾಗಿ ಇರಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈಗಾಗಲೇ ಅಮೆರಿಕ, ಆಸ್ಟ್ರಿಯಾ, ಫಿನ್ ಲ್ಯಾಂಡ್, ಫ್ರಾನ್ಸ್, ಕೆನಡಾ ಮತ್ತು ಚೀನಗಳಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಭಾರತ ಇಂಥ ತಂತ್ರಜ್ಞಾನ ಅಳವಡಿಸಿಕೊಳ್ಳಲಿರುವ 7ನೇ ದೇಶವಾಗಲಿದೆ.
ಹೊಸ ತಂತ್ರಜ್ಞಾನದಿಂದಾಗಿ ಅಟಾಮಿಕ್ ವ್ಯವಸ್ಥೆಯಲ್ಲಿ ಅತ್ಯಂತ ಹೆಚ್ಚು ಶಕ್ತಿಶಾಲಿಯಾಗಿರುವ ಕಾಂತೀಯ ಕ್ಷೇತ್ರಗಳನ್ನು ಗುರುತಿಸಲು ಸುಲಭ ಸಾಧ್ಯವಾಗಲಿದೆ. ಜತೆಗೆ ಮುಂದಿನ ಎಂಟು ವರ್ಷಗಳಲ್ಲಿ ಫೋಟೋನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗಲಿದೆ. ದೇಶದಲ್ಲಿ ಉಪಗ್ರಹ ಆಧಾರಿತ 2 ಸಾವಿರ ಕಿ.ಮೀ. ಕ್ವಾಂಟಮ್ ಸಂಪರ್ಕ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಏನಿದು ಕ್ವಾಂಟಂ ಟೆಕ್ನಾಲಜಿ?
ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಹೊಸ ತಂತ್ರಜ್ಞಾನ. ಇಂಧನ ಮತ್ತು ಅಟಾಮಿಕ್ ಕ್ಷೇತ್ರಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ.