Advertisement

ಭಾರತಕ್ಕೆ ಮತ್ತೆರಡು ಹದ್ದು: 1 ಬಿ.ಡಾಲರ್‌ ವೆಚ್ಚದ 2 “ಫಾಲ್ಕನ್‌ ಅವಾಕ್ಸ್‌’ಖರೀದಿ ನಿರ್ಧಾರ

12:11 AM Aug 28, 2020 | mahesh |

ಹೊಸದಿಲ್ಲಿ: ಭಾರತೀಯ ವಾಯುಪಡೆಯ ಬಹುವರ್ಷಗಳ ಕನಸು ಕೊನೆಗೂ ಈಡೇರಿದೆ. 1 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ (ಸುಮಾರು 7 ಸಾವಿರ ಕೋಟಿ ರೂ.) ಇಸ್ರೇಲಿನ 2 ಫಾಲ್ಕನ್‌ ಸುಧಾರಿತ ವಾಯುಗಾಮಿ ವ್ಯವಸ್ಥೆ ಹೊಂದಿರುವ ವಿಮಾನಗಳನ್ನು ಖರೀದಿಸಲು ಭಾರತ ಮುಂದಾಗಿದೆ.

Advertisement

ರಕ್ಷಣೆ ಕುರಿತ ಸಂಸದೀಯ ಸಮಿತಿ ಇಸ್ರೇಲ್‌ ಜೊತೆಗಿನ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಲು ತೀರ್ಮಾನಿಸಿದೆ. ಎಲ್ಲ ಅಂದುಕೊಂಡಂತೆ ನಡೆದರೆ 2023-24ರ ವೇಳೆಗೆ ಅತ್ಯಾಧುನಿಕ ಫಾಲ್ಕನ್‌ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯುಳ್ಳ 2 ಸುಸಜ್ಜಿತ ಯುದ್ಧ ವಿಮಾನಗಳು ಐಎಎಫ್ ಬಳಗವನ್ನು ಸೇರಿಕೊಳ್ಳಲಿವೆ. ಸ್ವದೇಶಿ ನಿರ್ಮಿತ “ನೇತ್ರಾ’ ಅವಾಕ್ಸ್‌ ಜತೆಗೆ ಭಾರತೀಯ ವಾಯುಪಡೆ ಯಲ್ಲಿ ಈಗಾಗಲೇ 3 ಫಾಲ್ಕನ್‌ ಅವಾಕ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಾಲಾಕೋಟ್‌ ಉಗ್ರರ ಮೇಲಿನ ದಾಳಿಯ ಬಳಿಕ ಭಾರತೀಯ ಸೇನೆ ಈ ಯುದ್ಧವಿಮಾನಗಳ ಅಗತ್ಯವನ್ನು ಮನಗಂಡಿದ್ದು, ಪೂರ್ವ ಲಡಾಖ್‌ನಲ್ಲಿ ಇವುಗಳ ನಿಯೋಜನೆಗೆ ಯೋಜಿಸಲಾಗಿದೆ. ಪ್ರಸ್ತುತವಿರುವ ಫಾಲ್ಕನ್‌ಗಳ ರೇಡಾರ್‌ಗಳು 400 ಕಿ.ಮೀ. ವಲಯ ಮತ್ತು 360 ಡಿಗ್ರೀ ಕವರೇಜ್‌ ಸಾಮರ್ಥ್ಯ ಹೊಂದಿವೆ.

ಸುಧಾರಿತ ಫಾಲ್ಕನ್‌: “2011ರಲ್ಲಿ ಭಾರತೀಯ ವಾಯು ಪಡೆ ಸೇರಿದ 3 ಫಾಲ್ಕನ್‌ ಅವಾಕ್ಸ್‌ಗಳಿಗಿಂತ ಈಗ ಖರೀದಿಸುತ್ತಿರುವ ವಿಮಾನಗಳು ಹೆಚ್ಚು ಸುಧಾರಿತ ತಂತ್ರಜ್ಞಾನ ಹೊಂದಿವೆ’ ಎಂದು ಸೇನೆಯ ಮೂಲಗಳು ತಿಳಿಸಿವೆ.

ಚೀನಕ್ಕೆ ರಾಜತಾಂತ್ರಿಕವಾಗಿಯೇ ಉತ್ತರ: ಎಸ್‌. ಜೈಶಂಕರ್‌
ಕೆಲವು ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌, ಪೂರ್ವ ಲಡಾಖ್‌ ಬಿಕ್ಕಟ್ಟನ್ನು ಬಗೆಹರಿಸಲು ಮಿಲಿಟರಿ ಮಾರ್ಗ ಮುಕ್ತವಾಗಿದೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಜತಾಂತ್ರಿಕ ಮಾರ್ಗದಲ್ಲಿ ಬಿಕ್ಕಟ್ಟು ಶಮನಕ್ಕೆ ಯತ್ನಿಸಲಾಗುವುದು ಎಂದಿದ್ದಾರೆ. ಈ ಹಿಂದಿನ ಡೆಪ್ಸಾಂಗ್‌ (2013), ಚುಮಾರ್‌ (2014), ಡೋಕ್ಲಾಂ (2017) ಬಿಕ್ಕಟ್ಟುಗಳನ್ನು ರಾಜತಾಂತ್ರಿಕ ಮಾರ್ಗದಲ್ಲಿ ಬಗೆಹರಿಸಲಾಗಿತ್ತು. ಮಿಲಿಟರಿ ಮಾತುಕತೆಗಳೊಂದಿಗೆ ರಾಜತಾಂತ್ರಿಕ ಮಟ್ಟದಲ್ಲೂ ಮಾತುಕತೆಗಳು ನಡೆಯುತ್ತಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 1962ರ ಅನಂತರದ ಅತ್ಯಂತ ಗಂಭೀರ ಸ್ಥಿತಿ ಇದಾಗಿದೆ. ಲಡಾಖ್‌ ಬಿಕ್ಕಟ್ಟನ್ನು ಚೀನ ಏಕಪಕ್ಷೀಯವಾಗಿ ನೋಡಬಾರದು. ಹಿಂದಿನ ಎಲ್ಲ ಒಪ್ಪಂದಗಳನ್ನು ಬೀಜಿಂಗ್‌ ಗೌರವಿಸಬೇಕು ಎಂದು ಚೀನಕ್ಕೆ ಬುದ್ಧಿಮಾತು ಹೇಳಿದ್ದಾರೆ.

2021ರೊಳಗೆ ಎಸ್‌- 400 ಟ್ರಯಂಫ್
ಎಸ್‌-400 ಟ್ರಯಂಫ್ “ಎಸ್‌ಎ-21 ಗ್ರೋವರ್‌’ ವಾಯುರಕ್ಷಣಾ ವ್ಯವಸ್ಥೆಯ ಮೊದಲ ರೆಜಿಮೆಂಟ್‌ ಸೆಟ್‌ ಅನ್ನು 2021ರೊಳಗೆ ಹಸ್ತಾಂತರಿಸಲು ರಷ್ಯಾ ನಿರ್ಧರಿಸಿದೆ. ರಷ್ಯಾದ ಕ್ಷಿಪಣಿ ಪೂರೈಕೆದಾರ ಎಫ್ಎಸ್‌ಎಂಟಿಸಿ ಪ್ರತಿನಿಧಿ ಮಾರಿಯಾ ವೊರೊಬ್ರೊವಾ ಅವರು ಸಂದರ್ಶನವೊಂದರಲ್ಲಿ ಈ ಮಾಹಿತಿ ದೃಢಪಡಿಸಿದ್ದಾರೆ. ಭಾರತ ಈ ಸಂಬಂಧ ರಷ್ಯಾದೊಂದಿಗೆ 5.43 ಬಿಲಿಯನ್‌ ಡಾಲರ್‌ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ ಐಎಎಫ್ ಒಟ್ಟು 5 ಟ್ರಿಯಂಫ್ ರೆಜಿಮೆಂಟಲ್‌ ಕಿಟ್ಸ್‌ ಪಡೆದುಕೊಳ್ಳಲಿದೆ.

Advertisement

ಏನಿದು ಎಸ್‌-400 ಟ್ರಯಂಫ್?: ಇದು ದೂರ ಶ್ರೇಣಿಯ ಏರ್‌ ಡಿಫೆನ್ಸ್‌ ಮಿಸೈಲ್‌ ಸಿಸ್ಟಂ. 3 ರೀತಿಯ ಕ್ಷಿಪಣಿಗಳ ಮೂಲಕ ಏಕಕಾಲದಲ್ಲಿ 36 ಗುರಿಗಳನ್ನು ಹುಟ್ಟಡಗಿಸಬಲ್ಲ ಸಾಮರ್ಥ್ಯ ಹೊಂದಿದೆ.

ಫಾಲ್ಕನ್‌ ಅವಾಕ್ಸ್‌ ಹೈಲೈಟ್ಸ್‌
ಆಧುನಿಕ ಯುದ್ಧರಂಗಕ್ಕೆ ಫಾಲ್ಕನ್‌ ಅವಾಕ್ಸ್‌ ಹೇಳಿಮಾಡಿಸಿದಂತಿದೆ.
ವಿಶ್ವದ ಅತಿ ಚಾಣಾಕ್ಷ, ವಿಶ್ವಾಸಾರ್ಹ ರೇಡಾರ್‌ ತಂತ್ರಜ್ಞಾನ.
ಶತ್ರುಪಾಳೆಯದ ವಿಮಾನಗಳ ಆಗಮನವನ್ನು ಅತ್ಯಂತ ಶೀಘ್ರದಲ್ಲಿ ಪತ್ತೆಹಚ್ಚಬಲ್ಲವು.
ಭೂರೇಡಾರ್‌ಗಳಿಂತ ಮುಂಚಿತವಾಗಿ ನೌಕಾ ಕ್ಷಿಪಣಿ ದಾಳಿ, ಡ್ರೋನ್‌ಗಳ ಸುಳಿವನ್ನು ನೀಡಬಲ್ಲವು.
ಶತ್ರುಗಳ ಏರ್‌ಫೈಟರ್‌ಗಳನ್ನು ಆಗಸದಲ್ಲಿಯೇ ಉಡಾಯಿಸಬಲ್ಲಂಥ ಕ್ಷಿಪಣಿ ವ್ಯವಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next