ರಬಕವಿ-ಬನಹಟ್ಟಿ: ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ವಿಶ್ವಕ್ಕೆ ಸವಾಲಾಗಿರುವ ಕ್ರಿಪ್ಟೊ ಕರೆನ್ಸಿಗೆ ಸಮಾನವಾಗಿ ಭಾರತದಲ್ಲಿ ಆರ್‌ಬಿಐ ಮಾರ್ಗದರ್ಶನದಲ್ಲಿ ಡಿಜಿಟಲ್ ಕರೆನ್ಸಿ ಹೊರ ತರಲಿದ್ದು ಇದು ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಆನಂದ ಉಪ್ಪಾರ ಹೇಳಿದರು.
ಎಸ್‌ಟಿಸಿ ಕಾಲೇಜಿನಲ್ಲಿ ಬುಧವಾರ ನಡೆದ ಕೇಂದ್ರದ 2022-23ನೇ ಸಾಲಿನ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್ ಕರೆನ್ಸಿ ಜಾರಿಗೆ ತುರುವುದರಿಂದ ದೇಶದ ಕರೆನ್ಸಿ ನಿರ್ವಹಣೆಯಲ್ಲಿ ಸಾಕಷ್ಟು ದಕ್ಷತೆ ಬರಲು ಸಾಧ್ಯ. ಇದರಿಂದ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ಮತ್ತು ಮುಂತಾದ ದೇಶ ವಿರೋಧಿ ಚಟುವಟಿಕೆಗಳಿಗೆ ಹಣಕಾಸಿನ ಒಳಹರಿವು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಪ್ರಸ್ತುತ ಸಾಲಿನ ಬಜೆಟ್ ಅರ್ಥಶಾಸ್ತ್ರಜ್ಞರ ಪ್ರಕಾರ ಒಂದು ಉತ್ತಮ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. 200 ಟಿ.ವಿ ಚಾನಲ್‌ಗಳ ಮೂಲಕ ಪಠ್ಯ ಕ್ರಮ ಬೋಧಿಸುವುದು ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿ ಆಗಲಿದೆ. ಆದ್ದರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಶ್ರೇಷ್ಠವಾಗಿದೆ. ಕೋವಿಡ್ ಸಂದರ್ಭದಲ್ಲಿ ಮಂಡಿಸಿರುವ ಬಜೆಟ್ ಉತ್ತಮವಾಗಿದೆ
ಎಂದರು.
ಪ್ರಾಚಾರ್ಯ ಡಾ| ಜಿ.ಆರ್. ಜುನ್ನಾಯ್ಕರ್ ಮಾತನಾಡಿ, ಮುಂಗಡ ಪತ್ರ ಪ್ರತಿಯೊಂದು ದೇಶದ ಆರ್ಥಿಕ ಚಟುವಟಿಕೆಗಳಿಗೆ ರಕ್ತವಿದ್ದಂತೆ. ವಿದ್ಯಾರ್ಥಿಗಳೂ ಬಜೆಟ್ ಕುರಿತು ಅಧ್ಯಯನ ಮಾಡುವ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿ ತಿಳಿದುಕೊಳ್ಳಬೇಕು ಎಂದರು.
ಈ ವೇಳೆ ಡಾ| ಮಂಜುನಾಥ ಬೆನ್ನೂರ, ಪ್ರೊ| ವೈ.ಬಿ. ಕೊರಡೂರ, ಡಾ| ರೇಶ್ಮಾ ಗಜಾಕೋಶ, ಪ್ರೊ| ಗೀತಾ ಸಜ್ಜನ, ಡಾ| ಮನೋಹರ ಶಿರಹಟ್ಟಿ, ಪ್ರಶಾಂತ ಬಳ್ಳೂರ, ರಶ್ಮಿ ಕೊಕಟನೂರ, ವಿಜಯಲಕ್ಷ್ಮೀ ಮಾಚಕನೂರ ಸೇರಿದಂತೆ ಇತರರಿದ್ದರು. ಐ.ಜಿ. ಫಣಿಬಂದ ಪ್ರಾರ್ಥಿಸಿದರು. ಸುರೇಶ ನಡೋಣಿ ಸ್ವಾಗತಿಸಿದರು. ಪ್ರೊ| ಪೂಜಾ ಚುತುರ್ವೇದಿ ನಿರೂಪಿಸಿದರು. ಡಾ| ಪ್ರಕಾಶ ಕೆಂಗನಾಳೆ ವಂದಿಸಿದರು.