ಗಜೇಂದ್ರಗಡ: ಭಾರತೀಯ ಪರಂಪರೆ ವಿಶ್ವದ ಶ್ರೇಷ್ಠ ಪರಂಪರೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವವೇ ಒಪ್ಪಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿಯೇ ನಮ್ಮ ಪರಂಪರೆ, ಧಾರ್ಮಿಕತೆಯ ಉಳಿವು ಹಾಗೂ ಬೆಳವಣಿಗೆ ನಡೆಯುತ್ತಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕುಂಟೋಜಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಇಡೀ ಜಗತ್ತಿಗೆ ವಿಶ್ವಮಾನವ ತತ್ವ ಸಾರಿದ್ದು ಕನ್ನಡಿಗರು. ಆದಿಕವಿ ಪಂಪನಿಂದ ಇವತ್ತಿನವರೆಗೂ ಎಲ್ಲರೂ ವಿಶ್ವಮಾನವ ಸಂದೇಶಗಳನ್ನು ಸಾರಿದ್ದಾರೆ. ಭಾರತ ವಿಶ್ವಗುರು ಆಗುವ ದಿಸೆಯಲ್ಲಿ ಭಾರತೀಯ ಪರಂಪರೆ ಹಾಗೂ ಶ್ರದ್ಧಾ ಕೇಂದ್ರಗಳಲ್ಲಿನ ಆಚರಣೆ ಪ್ರಮುಖ ಕಾರಣ ಎಂದರು.
ಧಾರ್ಮಿಕ ಶ್ರದ್ಧಾಕೇಂದ್ರಗಳ ಸುತ್ತ ಸಮುದಾಯಗಳ ಒಳಗೊಳ್ಳುವಿಕೆ ಸಾಧಿಸುವುದನ್ನು ಭಾರತೀಯ ಪರಂಪರೆ ನಮಗೆಲ್ಲರಿಗೂ ಉತ್ತಮವಾಗಿ ಕಲಿಸಿಕೊಟ್ಟಿದೆ. ವ್ಯಕ್ತಿನಿಷ್ಠತೆ, ಆತ್ಮ ಸಂವೇದನೆ ಇದ್ದರೆ ಸಮಾಜಮುಖೀ ಚಿಂತನೆ ಉಂಟು ಮಾಡಬಹುದು. ಸಮಷ್ಠಿಗೆ ಬೇಕಾದ ಆಲೋಚನೆ ಮೂಡಿಸುವುದು. ಇಡೀ ಸಮಾಜವನ್ನು ಜೀವನ್ಮುಖಿಯಾಗಿಸುವುದು ಜಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ, ಪ್ರಾಕೃತಿಕವಾಗಿಯೂ ಸಾಗರ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಸಾಂಸ್ಕೃತಿಕ ವೇದಿಕೆಗಳ ಮುಖಾಂತರ ಸ್ಥಳೀಯ ಯುವ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಈ ದಿಸೆಯಲ್ಲಿ ದೇಶದ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳು ಇನ್ನೂ ಜೀವಂತವಾಗಿವೆ ಎಂದರೆ ಹಳ್ಳಿಗಳಲ್ಲಿಯೇ ಇವೆ. ಇದಕ್ಕೆ ಕುಂಟೋಜಿ ಗ್ರಾಮದ ಜಾತ್ರಾ ಮಹೋತ್ಸವದ ಸಂಭ್ರಮವೇ ಸಾಕ್ಷಿಯಾಗಿದೆ ಎಂದರು.
ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಈ ನಿಟ್ಟಿನಲ್ಲಿ ಸರ್ವರೂ ಸಮಾನತೆಯ ಸಂಕಲ್ಪ ತೊಟ್ಟು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಸಮಾಜದಲ್ಲಿ ಅನ್ಯೋನ್ನತೆ ಮೂಡುತ್ತದೆ. ಈ ಜಗದಲ್ಲಿ ದೇವರು ಸರ್ವಾಂತರ್ಯಾಮಿಯಾಗಿದ್ದಾನೆ. ಭಾವೈಕ್ಯತೆಯಿಂದ ಸಮುದಾಯ ಮತ್ತು ಸುತ್ತಲಿನ ಜನರೊಂದಿಗೆ ಬಾಳಿದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.
ಜಿಗೇರಿಯ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಎಸ್. ಪಾಟೀಲ, ಮಿಥುನ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.