ಗಾಂಧಿನಗರ್(ಗುಜರಾತ್): ಜಾಗತಿಕ ಆಹಾರ ಕೊರತೆಯ ಸಮಸ್ಯೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಚರ್ಚಿಸಿರುವುದಾಗಿ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಒಂದು ವೇಳೆ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ವಿಶ್ವಕ್ಕೆ ಆಹಾರ ದಾಸ್ತಾನು ಸರಬರಾಜು ಮಾಡಲು ಭಾರತ ಸಿದ್ಧವಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಗುಜರಾತ್: ಹಿಮ್ಮತ್ ನಗರದಲ್ಲಿ ಮತ್ತೆ ಕೋಮು ಘರ್ಷಣೆ, ಪೆಟ್ರೋಲ್ ಬಾಂಬ್ ದಾಳಿ
ಒಂದು ವೇಳೆ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ಭಾರತ ವಿಶ್ವಕ್ಕೆ ಆಹಾರ ಸರಬರಾಜು ಮಾಡಲು ಸಿದ್ಧ ಎಂದು ಮಂಗಳವಾರ (ಏ.12) ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಸ್ಟೆಲ್ ಮತ್ತು ಶ್ರೀ ಅನ್ನಪೂರ್ಣ ಧಾಮ್ ಶಿಕ್ಷಣ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ವೇಳೆ ಈ ವಿಚಾರ ಪ್ರಸ್ತಾಪಿಸಿರುವುದಾಗಿ ವರದಿ ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಜಗತ್ತಿನ ವಿವಿಧ ದೇಶಗಳಲ್ಲಿ ಆಹಾರ ದಾಸ್ತಾನು ಕೊರತೆ ಕಾಣಿಸಿಕೊಂಡಿದೆ. ಇದೀಗ ಜಗತ್ತು ಹೊಸ ಸಮಸ್ಯೆಯನ್ನು ಎದುರಿಸುವಂತಾಗಿದೆ. ಜಾಗತಿಕವಾಗಿ ಆಹಾರ ದಾಸ್ತಾನು ಖಾಲಿಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡಾ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಒಂದು ವೇಳೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿ) ಅನುಮತಿ ನೀಡಿದರೆ ಭಾರತ ನಾಳೆಯಿಂದಲೇ ಆಹಾರ ದಾಸ್ತಾನು ಸರಬರಾಜು ಮಾಡಲು ಸಿದ್ಧವಿರುವುದಾಗಿ ಸಲಹೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತವು ಈಗಾಗಲೇ ದೇಶದ ಜನರಿಗೆ ಸಾಕಾಗುವಷ್ಟು ಆಹಾರ ದಾಸ್ತಾನು ಹೊಂದಿದೆ. ಆದರೆ ನಮ್ಮ ರೈತರು ಜಗತ್ತಿಗೆ ಆಹಾರ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಆ ನಿಟ್ಟಿನಲ್ಲಿ ನಾವು ಜಗತ್ತಿನ ಕಾನೂನು ಪ್ರಕಾರ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.