ಕಲಬುರಗಿ: ಮನುಷ್ಯನ ನಡತೆ ಮತ್ತು ವರ್ತನೆಗಳನ್ನು ವಿದ್ಯುತ್ತಿಕರಣದ ಕೃತಕ ಬುದ್ದಿಮತ್ತೆ ವಿಧಾನದ ಮೂಲಕ ನಾವು ಭಾರತವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬಹುದು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವಿದ್ಯುತ್ತೀಕಣ ಕೃತಕ ಬುದ್ಧಿವಂತಿಕೆ (ಆರ್ಟಿಫಿಶಿಯಲ್ ಇಂಟ್ಲಿಜೆನ್ಸಿ) ಕ್ಷೇತ್ರದ ತಜ್ಞ ಹಾಗೂ ಪದ್ಮಶ್ರೀ ಡಾ| ಬಿ.ಎಲ್. ದಿಕ್ಷೀತಲು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮುನಿಕೇಶನ್ ವಿಭಾಗವು ಇಂಜಿನಿಯರಿಂಗ್ ಉಪನ್ಯಾಸಕರಿಗಾಗಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಯೋಮೆಡಿಕಲ್ ಸಿಗ್ನಲ್ ಪ್ರೋಸೆಸಿಂಗ್ ಆ್ಯಂಡ್ ಅನಾಲಿಸಿಸ್ ಫಾರ್ ಕಾಗ್ನಾಟಿವ್ ನ್ಯೂರೊ ಸೈನ್ಸ್ ಸ್ಟಡಿ ವಿಷಯ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆಯಿಂದ ಮನುಷ್ಯನ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಈ ಕ್ಷೇತ್ರದಲ್ಲಿ ಚೀನಾ ಅಮೆರಿಕಾವನ್ನು ಹಿಂದೆ ಹಾಕಿ ಮುನ್ನಡೆಯುತ್ತಿದೆ. ಭಾರತವು ಜಗತ್ತಿನ ಶಕ್ತಿಶಾಲಿ ಮತ್ತು ಪ್ರಬಲ ರಾಷ್ಟ್ರವಾಗಬೇಕಾದರೆ ನಾವೂ ಕೂಡ ಕೃತಕ ಬುದ್ಧಿಮತ್ತೆ ಅನುಸರಿಸಬೇಕು. ಆ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂದರು.
ಭಾರತದ ಯವಕರು ಈ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಬೇಕು. ಇದರಿಂದ ಭಾರತವೂ ಸೂಪರ್ ಸಾನಿಕ್ ರಾಷ್ಟ್ರದತ್ತ ಮುನ್ನಡೆಯುತ್ತದೆ. ಅಂತಹದೊಂದು ಶಕ್ತಿಯನ್ನು ಯುವಕರು ಹೊಂದಿದ್ದಾರೆ. ಅದಕ್ಕಾಗಿ ಇನ್ನಷ್ಟು ಹೆಚ್ಚು ಕಾರ್ಯಗಳು ನಡೆಯಬೇಕಿದೆ ಎಂದರು.
ಐ.ಡಿ.ಆರ್.ಬಿ.ಟಿ. ಮತ್ತೂಬ್ಬ ಡಾ| ಬಿ.ಎಂ. ಮೇತ್ರೆ ಫಾರ್ಸೆನಿಕ್ ಇಮೇಜ್ ಪ್ರೊಸೆಸಿಂಗ್ ಕುರಿತು ಮಾತನಾಡಿದರು. ಪಿ.ಡಿ.ಎ. ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಅವಂತಿ ಅಧ್ಯಕ್ಷತೆ ವಹಿಸಿದ್ದರು. ಡಾ| ಸಿದ್ದಾರಾಮ ಆರ್. ಪಾಟೀಲ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸಂಚಾಲಕ ಡಾ| ಎಚ್. ನಾಗೇಂದ್ರ ಸ್ವಾಗತಿಸಿದರು, ಸಹ ಸಂಚಾಲಕ ಡಾ| ಅರುಣ ಕಂಟಿ ವಂದಿಸಿದರು. ಡಾ| ಬಾಬುರಾವ್ ಶೇರಿಕರ, ಪ್ರೊ| ರಾಜಕುಮಾರ ಬೈನೂರ, ಪ್ರೊ| ಚಂದ್ರಕಾಂತ ಬೊಗಳೆ ಹಾಜರಿದ್ದರು.