Advertisement

ಕ್ಷಿಪಣಿ ತಂತ್ರಜ್ಞಾನದಲ್ಲಿ ವಿಶ್ವದ ಬಲಾಡ್ಯ ರಾಷ್ಟ್ರಗಳಿಗೆ ಭಾರತ ಸಡ್ಡು

01:24 AM Dec 24, 2021 | Team Udayavani |

ಕಳೆದೊಂದು ದಶಕದಿಂದೀಚೆಗೆ ಭಾರತ, ಭದ್ರತಾ ಮೂಲಸೌಕರ್ಯಗಳು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ನೆರೆ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಗಡಿಯಲ್ಲಿ ನಿರಂತರ ತಗಾದೆ ತೆಗೆಯುತ್ತಿರುವುದು, ಆ ರಾಷ್ಟ್ರಗಳು ಆಧುನಿಕ ಶಸ್ತ್ರಾಸ್ತ್ರಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಮೂಲಕ ಭಾರತಕ್ಕೆ ಬೆದರಿಕೆಯಾಗಿ ಪರಿಣಮಿಸು ತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸೇನೆಯ ಬಲವೃದ್ಧಿಗೆ ಆದ್ಯತೆ ನೀಡಿದೆ. ಸರಕಾರದ ಈ ನಿಲುವಿಗೆ ದೇಶದ ಶಸ್ತ್ರಾಸ್ತ್ರ ತಜ್ಞರು ಕೂಡ ಒತ್ತಾಸೆಯಾಗಿ ನಿಂತಿದ್ದು ಭದ್ರತೆ ವಿಚಾರದಲ್ಲಿ ವಿದೇಶಿ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪಣತೊಟ್ಟಿದ್ದಾರೆ.

Advertisement

ರಫೇಲ್‌ ಸಹಿತ ಇತರ ಅತ್ಯಾಧುನಿಕ ಯುದ್ಧ ವಿಮಾನಗಳು, ಡ್ರೋನ್‌ಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಿದೇಶಗಳಿಂದ ಅದರಲ್ಲೂ ಸಹವರ್ತಿ ದೇಶಗಳಿಂದ ಖರೀದಿಸುವುದರ ಜತೆಯಲ್ಲಿ ದೇಶದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ಮುತುವರ್ಜಿ ತೋರಿದೆ. ಇದರ ಫ‌ಲವಾಗಿ ಇತ್ತೀಚಿನ ವರ್ಷಗಳಲ್ಲಿ ದೇಶದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟಿದೆ.

ಬುಧವಾರದಂದು ನೆಲದಿಂದ ನೆಲಕ್ಕೆ ಚಿಮ್ಮುವ ಭಾಗಶಃ ಖಂಡಾಂತರ ಕ್ಷಿಪಣಿ “ಪ್ರಳಯ್‌’ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದ ಡಿಆರ್‌ಡಿಒ ಗುರುವಾರ ಮತ್ತೆ ಇದೇ ಕ್ಷಿಪಣಿಯ ಎರಡನೇ ಪರೀಕ್ಷೆಯನ್ನು ನಡೆಸುವ ಮೂಲಕ ಮಹತ್ತರ ಮೈಲಿಗಲ್ಲು ನೆಟ್ಟಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ಷಿಪಣಿಯೊಂದನ್ನು ದಿನದ ಅಂತರದಲ್ಲಿ ಎರಡು ಬಾರಿ ಯಶಸ್ವಿ ಯಾಗಿ ಪರೀಕ್ಷೆಗೊಳಪಡಿಸುವ ಮೂಲಕ ಡಿಆರ್‌ಡಿಒ ವಿಜ್ಞಾನಿಗಳು ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿನ ತಮ್ಮ ಸಾಮರ್ಥ್ಯವನ್ನು ಸ್ವತಃ ಪರೀಕ್ಷೆ ಗೊಳಪಡಿಸಿಕೊಂಡು ಅದರಲ್ಲಿ ಯಶ ಕಂಡಿದ್ದಾರೆ. 333 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ “ಪ್ರಳಯ್‌’ ಕ್ಷಿಪಣಿಯು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು ನಿರ್ದಿಷ್ಟ ದೂರ ಸಾಗಿದ ಬಳಿಕ ತನ್ನ ಪಥವನ್ನೇ ಬದಲಿಸುವಂಥ ಸಾಮರ್ಥ್ಯವನ್ನು ಹೊಂದಿರುವುದು ಇದರ ವಿಶೇಷತೆಯಾಗಿದೆ.

ಇದನ್ನೂ ಓದಿ:ದೇಶದಲ್ಲೀಗ “ಡಯಾವೋಲ್‌’ ವೈರಸ್‌ ಕಾಟ! ನಿಮ್ಮ ಹಣ ಕಿತ್ತುಕೊಳ್ಳಲು ಬ್ಲ್ಯಾಕ್‌ಮೇಲ್ ತಂತ್ರ

ಈಗಾಗಲೇ ಅಗ್ನಿ ಸರಣಿಯಲ್ಲಿ ವಿವಿಧ ದೂರ ವ್ಯಾಪ್ತಿಯನ್ನು ಹೊಂದಿರುವ 5 ಕ್ಷಿಪಣಿಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ತಿಂಗಳುಗಳ ಹಿಂದೆಯಷ್ಟೇ 5,000 ಕಿ.ಮೀ. ದೂರ ವ್ಯಾಪ್ತಿಯ, ಏಕಕಾಲದಲ್ಲಿ ಹಲವಾರು ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯಬಲ್ಲ ಅಗ್ನಿ 5 ಕ್ಷಿಪಣಿಯ 8ನೇ ಮತ್ತು ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಪರಮಾಣು ಶಸ್ತ್ರಸಜ್ಜಿತ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ ಇದಾಗಿದ್ದು ಇಂಥ ಕ್ಷಿಪಣಿಯನ್ನು ಹೊಂದಿರುವ ವಿಶ್ವದ 8ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಡಿಆರ್‌ಡಿಒ ಇದೀಗ ಅಗ್ನಿ ಸರಣಿಯ ಮುಂದುವರಿದ ಭಾಗವಾಗಿ ಇನ್ನಷ್ಟು ದೂರ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ 6 ಮತ್ತು ಅಗ್ನಿ 7 ಕ್ಷಿಪಣಿಗಳ ಅಭಿವೃದ್ಧಿ ಯಲ್ಲಿ ತೊಡಗಿಕೊಂಡಿದ್ದು ಹಲವಾರು ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕ್ಷಿಪಣಿಗಳು ಹೊಂದಿರಲಿವೆ.

Advertisement

ಏತನ್ಮಧ್ಯೆ ಇತ್ತೀಚೆಗಷ್ಟೇ ಚೀನ ಪರೀಕ್ಷಿಸಿದ ಹೈಪರ್‌ ಸಾನಿಕ್‌ ಮಾದರಿಯ ಕ್ಷಿಪಣಿಯನ್ನು ದೇಶದಲ್ಲಿ ಅಭಿವೃದ್ಧಿ ಪಡಿಸಲು ಡಿಆರ್‌ಡಿಒ ಈಗಾಗಲೇ ಕಾರ್ಯೋನ್ಮುಖವಾಗಿದೆ. ಹೈಪರ್‌ ಸಾನಿಕ್‌ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಗಾಗಿ ಮುಂದಡಿ ಇಟ್ಟಿರುವ ದೇಶದ ಕ್ಷಿಪಣಿ ತಂತ್ರಜ್ಞರು ಪ್ರಾಥಮಿಕ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಇವೆಲ್ಲವನ್ನು ಅವಲೋಕಿಸಿದಾಗ ಕ್ಷಿಪಣಿ ತಂತ್ರಜ್ಞಾನದಲ್ಲಿ ದೇಶ ಧನಾತ್ಮಕ ಮತ್ತು ಗಣನೀಯ ಪ್ರಗತಿಯನ್ನು ಸಾಧಿಸಿರುವುದು ಸಾಬೀತಾಗುತ್ತದೆ. ಅಷ್ಟು ಮಾತ್ರವಲ್ಲದೆ ಭದ್ರತೆಯ ದೃಷ್ಟಿಯಿಂದಲೂ ಭಾರತ ಸ್ವಾವಲಂಬನೆ ಯತ್ತ ಹೆಜ್ಜೆ ಇರಿಸಿರುವುದು ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next