Advertisement

ಸಂವಿಧಾನ ಗಟ್ಟಿ ಯಾಗಿದ್ದರಿಂದ ಭವ್ಯ ಭಾರತ

11:03 AM May 12, 2022 | Team Udayavani |

ಬೆಳಗಾವಿ: ಪಕ್ಕದ ಶ್ರೀಲಂಕಾ ಮತ್ತು ಪಾಕಿಸ್ತಾನ ರಾಷ್ಟ್ರಗಳಲ್ಲಿರುವ ಪರಿಸ್ಥಿತಿ ನಮ್ಮಲ್ಲಿಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದ ಶ್ರೇಯಸ್ಸು ಡಾ| ಬಾಬಾಸಾಹೇಬ ಅಂಬೇಡ್ಕರ್‌ ಬರೆದ ಸಂವಿಧಾನಕ್ಕೆ ಸಲ್ಲುತ್ತದೆ. ಶಾಹು ಮಹಾರಾಜ, ಜ್ಯೋತಿಬಾ ಫುಲೆ ಹಾಗೂ ಅಂಬೇಡ್ಕರ್‌ರಿಂದ ಭವ್ಯ ಭಾರತ ನಿರ್ಮಾಣಗೊಂಡಿದೆ ಎಂದು ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಶರದ್‌ ಪವಾರ ಅಭಿಪ್ರಾಯ ಪಟ್ಟರು.

Advertisement

ನಗರದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಜ್ಯೋತಿ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಸುವರ್ಣ ಮಹೋತ್ಸವ ಸಮಾರೋಪ ಹಾಗೂ ಛತ್ರಪತಿ ಶಾಹು ಪ್ರಕಾಶನ ಮಂಡಳದ ರಾಷ್ಟ್ರವೀರ ಸಾಪ್ತಾಹಿಕ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಪರಿವರ್ತನೆಗಾಗಿ ಶಾಹು, ಫುಲೆ ಹಾಗೂ ಅಂಬೇಡ್ಕರ್‌ ಹಗಲಿರುಳು ಶ್ರಮಿಸಿದ್ದಾರೆ. ಶಾಹು ಮಹಾರಾಜರು ಸಮಾಜವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಕಾರ್ಯ ಮಾಡಿದರು. ಫುಲೆ ದಂಪತಿ ಶ್ರಮಜೀವಿಗಳ ಕರ್ತವ್ಯದ ಮೇಲೆ ವಿಶ್ವಾಸ ಇಟ್ಟು ಅವರ ಸೇವೆ ಮಾಡಿ ಸಮಾನತೆ ತಂದು ಶಿಕ್ಷಣ ಕ್ರಾಂತಿ ಮಾಡಿದರು.

ಡಾ| ಅಂಬೇಡ್ಕರ್‌ ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸಿ ಗಟ್ಟಿಯಾದ ಸಂವಿಧಾನ ನೀಡಿದರು ಎಂದರು. ಪಕ್ಕದ ಶ್ರೀಲಂಕಾ ಪ್ರಧಾನಿ ಪಲಾಯನಗೈದರು, ಪಾಕಿಸ್ತಾನ ಪ್ರಧಾನಿ ಕುರ್ಚಿ ಖಾಲಿ ಮಾಡಿದರು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ನಡೆಸುತ್ತಿದೆ. ಅಂಥ ಪರಿಸ್ಥಿತಿ ನಮ್ಲಲ್ಲಿಲ್ಲ. 70 ವರ್ಷಗಳಿಂದ ಭಾರತದಲ್ಲಿ ಯಾವಾಗಲೂ ಇಂಥ ಸ್ಥಿತಿ ಬಂದಿಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ. ಡಾ. ಅಂಬೇಡ್ಕರ್‌ ಜಲಸಂಪನ್ಮೂಲ ಸಚಿವರಾಗಿದ್ದಾಗ ಅನೇಕ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಹತ್ತಿರವಾದರು. ಹಲವು ಅಣೆಕಟ್ಟುಗಳನ್ನು ನಿರ್ಮಿಸಿ, ಜಲವಿದ್ಯುತ್‌ ಯೋಜನೆ ಆರಂಭಿಸುವ ನಿರ್ಧಾರ ಕೈಗೊಂಡರು.

ಸಂವಿಧಾನ ರಚನೆ ಮಾಡಿರುವುದರ ಜತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾರತದ ಪ್ರಗತಿಗೆ ಕೈಜೋಡಿಸಿದ ಅವರ ಸೇವೆಯನ್ನು ಜನರಿಗೆ ತಲುಪಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದರು.

ಗಡಿ ಭಾಗದಲ್ಲಿ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬ ಉದ್ದೇಶದಿಂದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ ಸಂಸ್ಥೆಯನ್ನು ಭಾಯಿ ದಾಜೀಬಾ ದೇಸಾಯಿ ಆರಂಭಿಸಿದರು. ಅನೇಕ ಮಹಾನ್‌ ನಾಯಕರು ಈ ಸಂಸ್ಥೆಯನ್ನು ಬೆಳೆಸಲು ಶ್ರಮಿಸಿದರು. ಸಂಸ್ಥೆಯಿಂದ ಸಮಾಜ ಶ್ರೇಯೋಭಿವೃದ್ಧಿಯ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದರು.

Advertisement

ಮಂಡಳದ ಅಧ್ಯಕ್ಷೆ ಸರೋಜಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದಲ್ಲಿ ಅನೇಕ ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ 2000ವರೆಗೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡುತ್ತಿತ್ತು. ನಂತರ ಯಾವುದೇ ಅನುದಾನ ಬಾರದ್ದಕ್ಕೆ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೆರವಿಗೆ ಬಂದು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ರಾಜಾಭಾವು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಮರಾಠಿ ಭಾಷಿಕರ ಹೋರಾಟಕ್ಕೆ ಶರದ್‌ ಪವಾರ ಕೊಡುಗೆ ಅನನ್ಯ. ಹೀಗಾಗಿ ಮಹಾರಾಷ್ಟ್ರದ ಭಾಗವಾಗುವ ನಮ್ಮ ಕನಸು ನನಸುಗೊಳಿಸಲು ಮುಂದಾಗಬೇಕು ಎಂದರು.

ಕರ್ನಾಟಕ-ಮಹಾರಾಷ್ಟ್ರದಿಂದ ಅನುದಾನ ಕೊರತೆ ಆಗಲ್ಲ ಗಡಿ ಭಾಗದ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಕ್ಕೆ ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಅನುದಾನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಮಹಾರಾಷ್ಟ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ಕಾರ್ಯ ಮಾಡಲಾಗುವುದು. ಅದೇ ರೀತಿ ಕರ್ನಾಟಕ ಸರ್ಕಾರದಿಂದ ಡಾ|ಪ್ರಭಾಕರ ಕೋರೆ ಈ ಸಂಸ್ಥೆಗೆ ಅನುದಾನ ಕಲ್ಪಿಸಬೇಕು ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ ಹೇಳಿದರು.

ಗಡಿ ವಿದ್ಯಾರ್ಥಿಗಳ ವೈದ್ಯ ಸೀಟು ಶೇ.15ಕ್ಕೆ ಹೆಚ್ಚಿಸಲು ಮನವಿ ಮಹಾರಾಷ್ಟ್ರದ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಗಡಿ ಭಾಗದ ವಿದ್ಯಾರ್ಥಿಗಳಿಗೆ ಸದ್ಯ ನೀಡಲಾಗುತ್ತಿರುವ ಸೀಟುಗಳ ಸಂಖ್ಯೆಯನ್ನು ಶೇ.7ರಿಂದ 15ಕ್ಕೆ ಹೆಚ್ಚಿಸಬೇಕು ಎಂದು ಮಾಜಿ ಮೇಯರ್‌ ಸರಿತಾ ಪಾಟೀಲ ಅವರು ಶರದ್‌ ಪವಾರ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪವಾರ, ಶಿಕ್ಷಣ ಇಲಾಖೆ ಸಚಿವ ಅಮಿತ್‌ ದೇಶಮುಖ ಹಾಗೂ ಆರೋಗ್ಯ ಸಚಿವ ರಾಜೇಶ ಟೋಪೆ ಅವರಿಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸಿ ಶೇ.15ಕ್ಕೆ ಸೀಟುಗಳನ್ನು ಹೆಚ್ಚಿಸುವಂತೆ ಹೇಳಿದರು. ಇದಕ್ಕೆ ಉತ್ತರಿಸಿದ ಉಭಯ ಸಚಿವರು, ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪಿಸಿ ಕೂಡಲೇ ಇದನ್ನು ಈಡೇರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next