Advertisement

ಅಂತರ್ಜಾಲ ಬಳಕೆ ಜಗತ್ತನ್ನು ಮೀರಿದ ಭಾರತ

03:29 PM Jul 20, 2020 | mahesh |

ಅಂತರ್ಜಾಲ ಈಗ ಜಗತ್ತಿನ ಅವಿಭಾಜ್ಯ ಅಂಗ. ಜಾಗತಿಕ ಅನುಪಾತಕ್ಕೆ ಹೋಲಿಸಿದರೆ 2019ರ ಅಂತ್ಯಕ್ಕೆ ಭಾರತೀಯ ಬಳಕೆದಾರರೇ ಜಾಸ್ತಿ. ಯುವಜನತೆಯಂತೂ ಅದನ್ನು ಬಿಟ್ಟಿರಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಅಂತರ್ಜಾಲ ಜನಜೀವನದಲ್ಲಿ ಸೇರಿಕೊಂಡ ನಂತರ ಜಗತ್ತಿನ ಜೀವನಕ್ರಮವೇ ಬದಲಾಗಿದೆ. ಎಲ್ಲ ರೀತಿಯ ರಚನೆಗಳೂ ಬದಲಾಗಿವೆ. ಇಂತಹ ಹೊತ್ತಿನಲ್ಲೇ ಭಾರತದಲ್ಲಿ ಅಂತರ್ಜಾಲ ಕ್ರಾಂತಿ ಸದ್ದಿಲ್ಲದೇ ನಡೆಯುತ್ತಿದೆ. ಅಂತರ್ಜಾಲ ಬಳಸುತ್ತಿರುವ ಭಾರತೀಯರ ಪ್ರಮಾಣ ಈಗ ಶೇ.54.3ಕ್ಕೇರಿದೆ. ಇದು ಜಾಗತಿಕ ಬಳಕೆದಾರರ ಸರಾಸರಿಗಿಂತ ಜಾಸ್ತಿ! ಈ ಏರಿಕೆಯ ವಿವಿಧ ಅಂಕಿಸಂಖ್ಯೆಗಳು, ಜಾಗತಿಕ ಬಳಕೆಯ ಪ್ರಮಾಣ, ಹೋಲಿಕೆ ಇಲ್ಲಿದೆ.

Advertisement

ಡಿಜಿಟಲ್‌ ಇಂಡಿಯಾ ಕನಸು ಸಾಕಾರದತ್ತ
ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಕನಸು ಕಂಡಿದೆ. ಎಲ್ಲವನ್ನೂ ಅಂತರ್ಜಾಲ ವ್ಯವಸ್ಥೆಯಡಿಗೆ ತರುವುದು ಕೇಂದ್ರದ ಉದ್ದೇಶ. ಇದರಿಂದ ಪ್ರತಿಯೊಂದು ಪಾರದರ್ಶಕವಾಗಿ ನಡೆಯುತ್ತಿದೆ. ಭ್ರಷ್ಟಾಚಾರದ ಪ್ರಮಾಣ ಬಹಳ ಕಡಿಮೆಯಾಗುತ್ತದೆ, ಪ್ರತೀ ಸೇವೆಯೂ ಬಹಳ ವೇಗವಾಗಿ ಲಭ್ಯವಾಗಲು ಸಾಧ್ಯವಾಗುತ್ತದೆ. ವ್ಯಕ್ತಿಶ್ರಮ ಕಡಿಮೆಯಾಗುವುದು, ಪ್ರಕ್ರಿಯೆಗಳನ್ನು ಮುಗಿಸಲು ಹಾಕಬೇಕಾದ ಶ್ರಮ ತಗ್ಗಿಸುವುದು ಅಂತರ್ಜಾಲದ ಹೆಗ್ಗಳಿಕೆ. ಅಂತರ್ಜಾಲ ಬಳಕೆದಾರರ ಏರಿಕೆಯಿಂದ ಡಿಜಿಟಲ್‌ ಇಂಡಿಯಾ ಕನಸು ಸಾಕಾರವಾಗುವತ್ತ ಭಾರತ ಸಾಗಿದೆ ಎನ್ನಬಹುದು.

ಭಾರತೀಯ ಬಳಕೆದಾರರ ಪ್ರಮಾಣ ತೀವ್ರ ಏರಿಕೆ
2019 ವರ್ಷಾಂತ್ಯದ ಹೊತ್ತಿಗೆ ಭಾರತೀಯ ಅಂತರ್ಜಾಲ ಬಳಕೆ ದಾರರ ಪ್ರಮಾಣ ಶೇ.54.3ಕ್ಕೆ ತಲುಪಿದೆ. ಇದು ಜಾಗತಿಕ ಸರಾಸರಿ ಬಳಕೆದಾರರ ಪ್ರಮಾಣವಾದ ಶೇ.53.6ಕ್ಕೆ ಹೋಲಿಸಿದರೆ, 70 ಮೂಲಾಂಕಗಳಷ್ಟು ಜಾಸ್ತಿ. ಜಾಗತಿಕವಾಗಿ 401 ಕೋಟಿ ಜನ 2019ರ ಅಂತ್ಯದ ಹೊತ್ತಿಗೆ ಅಂತರ್ಜಾಲ ಬಳಸಿದ್ದಾರೆಂದು ಅಂತಾ ರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ತಿಳಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತವೇ ನಂ.1
ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಪ್ರಮಾಣ ಉಳಿದೆಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳಿ ಗಿಂತ ಹೆಚ್ಚಿದೆ. 2019ರ ಅಂತ್ಯದ ಹೊತ್ತಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಪ್ರತೀ 100 ಜನಸಂಖ್ಯೆಗೆ 47 ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದರು. ಭಾರತದ ಮಟ್ಟಿಗೆ ಬಂದರೆ 2019ರ ಜೂನ್‌ನಲ್ಲೇ, ಪ್ರತೀ 100 ಜನಸಂಖ್ಯೆಯಲ್ಲಿ 50.5ರಷ್ಟು ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದರು ಎಂದು ಅಂಕಿಸಂಖ್ಯೆಗಳು ಹೇಳುತ್ತವೆ!

ಅಭಿವೃದ್ಧಿ ಹೊಂದಿದ ರಾಷ್ಟ್ರಗಳದ್ದೇ ಮೇಲುಗೈ
ಜಾಗತಿಕ ಅನುಪಾತದಲ್ಲಿ ಭಾರತ ಮುಂದಿದ್ದರೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಬಹಳ ಹಿಂದಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಂತರ್ಜಾಲ ಬಳಕೆ ಪ್ರಮಾಣ ಶೇ.86.6ರಷ್ಟಿದೆ. ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಜಪಾನ್‌ನಲ್ಲಿ ಮುಂಚಿತವಾಗಿಯೇ ಅಂತರ್ಜಾಲ ಕ್ರಾಂತಿ ನಡೆದಿರುವುದರಿಂದ ಅವು ಮುಂದಿರುವುದು ಸಹಜ. ಜೊತೆಗೆ ಅವುಗಳ ಜನಸಂಖ್ಯೆ ಬಹಳ ಕಡಿಮೆಯಿರುವುದರಿಂದ ಅವು ಮುಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.

Advertisement

ಭಾರತದಲ್ಲಿ ಬಳಕೆದಾರರೆಷ್ಟು?
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, 2019ರ ಅಂತ್ಯಕ್ಕೆ ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಪ್ರಮಾಣ 718.74 ಮಿಲಿಯನ್‌. ಇದರಲ್ಲಿ 450.3 ಮಿಲಿ ಯನ್‌ ಬಳಕೆದಾರರು ನಗರದಲ್ಲೂ, 268.4 ಮಿಲಿಯನ್‌ ಬಳಕೆದಾರರು ಗ್ರಾಮೀಣ ಭಾಗದಲ್ಲೂ ಇದ್ದಾರೆ. ಇವರಲ್ಲಿ ಪ್ರಬಲ ಅಂತರ್ಜಾಲ ಸೇವೆ ಹೊಂದಿರುವವರು 661.94 ಮಿಲಿಯನ್‌ ಮಂದಿ. ಇನ್ನು ಸಾಧಾರಣ ಸೇವೆ ಹೊಂದಿರು ವವರ ಪ್ರಮಾಣ 56.81 ಮಿಲಿಯನ್‌.

ಪ್ರಬಲ ಸೇವೆ ಬಳಕೆದಾರರ ಏರಿಕೆ
ವಿವಿಧ ಮಾದರಿಯಲ್ಲಿ ಪ್ರಬಲ ಅಂತರ್ಜಾಲ ಸೇವೆ ಬಳಸುವವರ ಪ್ರಮಾಣ 2019ರ ಅಂತ್ಯಕ್ಕೆ 5.84% ಏರಿಕೆಯಾಗಿದೆ. ಇನ್ನು ದುರ್ಬಲ ಸೇವೆ ಬಳಸುತ್ತಿ
ರುವವರ ಪ್ರಮಾಣ ಶೇ.8.67ರಷ್ಟು ಕುಸಿದಿದೆ. 2019 ಸೆಪ್ಟೆಂಬರ್‌ನಲ್ಲಿ ದುರ್ಬಲ ಸೇವೆ ಬಳಕೆದಾರರ ಸಂಖ್ಯೆ 62.20 ಮಿಲಿಯನ್‌ ಇದ್ದಿದ್ದು, ಡಿಸೆಂಬರ್‌ ಹೊತ್ತಿಗೆ 56.81 ಮಿಲಿಯನ್‌ಗೆ ಇಳಿದಿದೆ.

ಮೊಬೈಲ್‌ ಬಳಕೆದಾರರದ್ದೇ ಪಾರುಪತ್ಯ
ಇದು ಮೊಬೈಲ್‌ ಯುಗ. ಮೊಬೈಲ್‌ ಬಳಕೆ ಜೋರಾದ ಮೇಲೆ ಅಂತರ್ಜಾಲ ಬಳಕೆಯ ಪ್ರಮಾ ಣವೂ ತೀವ್ರವಾಗಿ ಏರಿದೆ. ನೂರಾಯೆಂಟು ಲೆಕ್ಕಾಚಾರ ಗಳಿಲ್ಲದೇ ಮೊಬೈಲ್‌ನಲ್ಲಿ ಸುಲಭವಾಗಿ ಅಂತರ್ಜಾಲ ಸಿಗುವುದೇ ಇದಕ್ಕೆ ಕಾರಣ. ಅಂಕಿಸಂಖ್ಯೆಗಳ ಪ್ರಕಾರ ಒಟ್ಟು ಅಂತರ್ಜಾಲ ಬಳಕೆದಾರರ ಪೈಕಿ ಶೇ.96.8ರಷ್ಟು ಮಂದಿ ಮೊಬೈಲ್‌ನಲ್ಲೇ ಬಳಸುತ್ತಾರೆ. ಇನ್ನು ವೈರ್‌ ಸೇವೆ ಹೊಂದಿರುವವರು ಕೇವಲ 3.11ರಷ್ಟು ಮಂದಿ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next